ಸಿದ್ದಾಪುರ: ಹೊಸಂಗಡಿ ಹಾಗೂ ಯಡಮೊಗೆ ಸಂಪರ್ಕಿಸುವ ಹೊಸಬಾಳು ಬಳಿ ಕುಬ್ಜಾ ನದಿಯ ಸೇತುವೆ ಶಿಥಿಲಗೊಂಡ ಹಿನ್ನೆಲೆ ಮೋರಿ ಅಳವಡಿಸಿ, ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆಯೂ ಶುಕ್ರವಾರದ ಭಾರೀ ಮಳೆಗೆ ಕೊಚ್ಚಿ ಹೋಗಿದೆ. ಇದರಿಂದ ಹೊಸಂಗಡಿ ಹಾಗೂ ಯಡಮೊಗೆ ಸಂಪರ್ಕ ಕಡಿತಗೊಂಡಿದ್ದು, ಜನರು ಅತಂತ್ರರಾಗಿದ್ದಾರೆ.
40 ವರ್ಷ ಹಿಂದೆ ನಿರ್ಮಿಸಿದ ಹೊಸಬಾಳು ಹಳೆ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಜಿ. ಪಂ. ಅನುದಾನದಡಿ ಸುಮಾರು 3.50 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ಪಕ್ಕದಲ್ಲೇ 12 ಪೈಪ್‌ಗ್ಳನ್ನು ಹಾಕಿ ಮೋರಿಯೊಂದನ್ನು ನಿರ್ಮಿಸಲಾಗಿತ್ತು. ಆದರೆ ಅದು ಸೇತುವೆಗಿಂತ ಕೆಳಮಟ್ಟದಲ್ಲಿರುವುದರಿಂದ ಧಾರಾಕಾರ ಮಳೆ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.
ಇದರಿಂದ ವಿದ್ಯಾರ್ಥಿಗಳು, ನಿತ್ಯ ಸಂಚಾರಿ ಗಳು, ಕಾರ್ಮಿಕರು ಯಡಮೊಗೆಯಿಂದ ಕಾರೂರು ಮಾರ್ಗವಾಗಿ ಕೆರೆಕಟ್ಟೆಗೆ ಬಂದು ಅಲ್ಲಿಂದ ಹೊಸಂಗಡಿಗೆ ಹೋಗಬೇಕಾಗಿದೆ.
ಆಗದ ಹೊಸ ಸೇತುವೆ
ಹೊಸಬಾಳು ಸೇತುವೆ ಶಿಥಿಲಗೊಂಡು ವರ್ಷ ಗಳೇ ಉರುಳಿವೆ. ಕಳೆದ ವರ್ಷ ಜಿಲ್ಲಾಧಿಕಾರಿ ಫ್ರಾನ್ಸಿಸ್ ಮೇರಿ ಹಾಗೂ ಜಿ.ಪಂ. ಸಿಇಒ ಶಿವಾನಂದ ಕಾಪಶಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಫೆಬ್ರವರಿಯಲ್ಲಿ ಮೋರಿ ನಿರ್ಮಿಸಲಾಗಿತ್ತು. ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಕೇಂದ್ರದ ಸಿಆರ್‌ಎಫ್ ನಿಧಿಯಡಿ ಹೊಸ ಸೇತುವೆ ನಿರ್ಮಾಣಕ್ಕೆ ಇಲಾಖೆ ಮುಂದಾಗಿತ್ತು. ಆದರೆ ಆರು ತಿಂಗಳಲ್ಲಿ ಪಿಲ್ಲರ್‌ಗೆ ಹೊಂಡ ಮಾಡಿದ್ದು ಬಿಟ್ಟರೆ ಕಾಮಗಾರಿ ಮುಂದಡಿ ಇಟ್ಟಿಲ್ಲ. ಸೇತುವೆ ಕೈಗೂಡುವ ಲಕ್ಷಣವೂ ಇಲ್ಲ!
ಎಚ್ಚೆತ್ತುಕೊಳ್ಳಲಿಲ್ಲ
ಭಾರೀ ಪ್ರಮಾಣದ ಮಳೆಯಾದರೆ ಯಡಮೊಗೆ- ಹೊಸಂಗಡಿ ಸಂಪರ್ಕ ಕಡಿದುಕೊಳ್ಳುವ ಆತಂಕದ ಬಗ್ಗೆ ಉದಯವಾಣಿಯು ಈ ಹಿಂದೆಯೇ ಬೆಳಕು ಚೆಲ್ಲಿತ್ತು. ಆದರೆ ಅಧಿಕಾರಿಗಳು, ಜನಪ್ರತಿನಿಧಿ ಗಳು ಎಚ್ಚೆತ್ತುಕೊಳ್ಳದ್ದರಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ.