ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ (ಹಿಂದಿನ ಮಂಗಳೂರು) 1991ರಿಂದ ಲೋಕ ಸಭಾ ಚುನಾವಣೆಗಳಲ್ಲಿ ನಿರಂತರವಾಗಿ ಸೋಲು ಅನುಭವಿಸುತ್ತ ಬಂದಿರುವ ಕಾಂಗ್ರೆಸ್ ಈ ಬಾರಿಯಾದರೂ ಕ್ಷೇತ್ರವನ್ನು ಮತ್ತೆ “ಕೈವಶ’ ಮಾಡಿಕೊಳ್ಳ ಬೇಕೆನ್ನುವ ನೆಲೆಯಲ್ಲಿ ಅನುಸರಿಸಿದ್ದ ಹೊಸಮುಖ- ಯುವ ಅಭ್ಯರ್ಥಿಗೆ ಮನ್ನಣೆ ಹಾಗೂ ಮೃದು ಹಿಂದುತ್ವದ ತಂತ್ರಗಾರಿಕೆಯೂ ಯಾವುದೇ ಫಲ ನೀಡಿಲ್ಲ ಎನ್ನುವುದು ವಾಸ್ತವ.
ಕಾಂಗ್ರೆಸ್ ಈ ಹಿಂದಿನ ಲೆಕ್ಕಚಾರ ಬದಿಗಿಟ್ಟು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ಕಣಕ್ಕಿಳಿಸಿತ್ತು. ಅದರಂತೆ ನಾಲ್ಕು ದಶಕಗಳ ಬಳಿಕ ಕ್ಷೇತ್ರದಲ್ಲಿ ಹೊಸ ಮುಖ ಮತ್ತು ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿಯನ್ನು ಮಣಿಸುವ ತಂತ್ರಗಾರಿಕೆ ರೂಪಿಸಿತ್ತು. 1977ರಿಂದ 1998 ಮತ್ತು 2009 ಹಾಗೂ 2014ರಲ್ಲಿ ಒಟ್ಟು 9 ಬಾರಿ ಬಿ. ಜನಾರ್ದನ ಪೂಜಾರಿ ಹಾಗೂ 1999 ಹಾಗೂ 2004ರಲ್ಲಿ ಎಂ. ವೀರಪ್ಪ ಮೊಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.
ಆಗ ಪೂಜಾರಿ 4 ಬಾರಿ ಗೆದ್ದಿದ್ದರೆ, 5 ಬಾರಿ ಸೋಲುಂಡಿದ್ದರು. ಮೊಲಿ 2 ಬಾರಿ ಸೋಲನುಭವಿಸಿದ್ದರು. ಈ ಹಿಂದಿನ ಎಲ್ಲ ರಾಜಕೀಯ ಲೆಕ್ಕಾಚಾರ ವಿಟ್ಟು ಕೊಂಡು ಈ ಚುನಾವಣೆಯಲ್ಲೂ ಹಲವು ಮಂದಿ ಹಿರಿಯ ಕಾಂಗ್ರೆಸಿಗರು ಸ್ಪರ್ಧಾಕಾಂಕ್ಷಿಗಳಾಗಿದ್ದರೂ ಒಂದು ಹಂತದಲ್ಲಿ ಮಾಜಿ ಸಚಿವ ರಮಾನಾಥ ರೈ, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಬಹುತೇಕ ಅಂತಿಮಗೊಂಡಿತ್ತು. ಆದರೆ, ಕೊನೆಕ್ಷಣದಲ್ಲಿ ಈ ಹಿಂದೆ ಕ್ಷೇತ್ರದಲ್ಲಿ ಹಿರಿಯ ನಾಯಕರು ಸೋಲನು ಭವಿಸಿದ್ದ ಲೆಕ್ಕಾಚಾರದಲ್ಲಿ ಹೊಸ ಮುಖಕ್ಕೆ ಮಣೆ ಹಾಕುವ ಪ್ರಯತ್ನದಲ್ಲಿ 34 ವರ್ಷದ ಮಿಥುನ್ ರೈಗೆ ಟಿಕೆಟ್ ನೀಡಿ ಪಕ್ಷವು ಯುವ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಲಾಗಿತ್ತು. ಆ ನೀರಿಕ್ಷೆಯೂ ಈ ಬಾರಿ ಕಾಂಗ್ರೆಸ್ ಪಾಲಿಗೆ ಉಲ್ಟಾ ಆಗಿದೆ.
ಮೃದು ಹಿಂದುತ್ವದ ಒಲವು
ಕಾಂಗ್ರೆಸ್ ಪಕ್ಷ ತನ್ನ ಚುನಾವಣ ಪ್ರಚಾರದಲ್ಲೂ ಹಿಂದಿನ ಚುನಾವಣೆಗಳಿಗಿಂತ ಭಿನ್ನ ತಂತ್ರಗಾರಿಕೆ ಅನುಸರಿ ಸಿತ್ತು. ಕೇಸರಿ ಶಾಲಿನಿಂದ ಸದಾ ಅಂತರ ಕಾಯ್ದುಕೊಂಡು ಬಂದಿದ್ದ ಕಾಂಗ್ರೆಸ್ ದಿಢೀರನೇ ಚುನಾವಣೆ ಪ್ರಚಾರದಲ್ಲಿ ಇದನ್ನೇ ಬಳಸಿ ಬಿಜೆಪಿಯ ಹಿಂದುತ್ವದ ಟ್ರಂಪ್‌ಕಾರ್ಡ್‌ಗೆ ಸಡ್ಡು ಹೊಡೆದಿತ್ತು.
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹಾಗೂ ಬೆಂಬಲಿಗರು ಕೇಸರಿ ಶಾಲು ಧರಿಸಿ ಪ್ರಚಾರ ನಡೆಸಿದ್ದರು. ಬಿಜೆಪಿ ಅಭ್ಯರ್ಥಿಯ ಟೆಂಪಲ್ ರನ್‌ಗೆ ಪ್ರತಿಯಾಗಿ ಕಾಂಗ್ರೆಸ್ ಅಭ್ಯರ್ಥಿಯೂ ಟೆಂಪಲ್ ರನ್ ನಡೆಸಿದ್ದರು. ಅಲ್ಲದೆ ಆಗ ಅದು ಚುನಾವಣೆಯಲ್ಲಿಯೂ ಚರ್ಚಿತ ವಿಷಯವೂ ಆಗಿತ್ತು. ಆದರೆ ಕಾಂಗ್ರೆಸ್‌ನ ಈ ಮಾದರಿಯ ಕಾರ್ಯತಂತ್ರವೂ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಓಲೈಸಿಕೊಳ್ಳುವಲ್ಲಿ ನಿರೀಕ್ಷಿತ ಯಶಸ್ಸು ನೀಡಲಿಲ್ಲ.
ಇದರ ಜತೆಗೆ ಕಾಂಗ್ರೆಸ್ ಪ್ರತಿಸ್ಪರ್ಧಿ ನಳಿನ್ ಕುಮಾರ್ ಕಟೀಲು ಅವರು ಸಂಸದರಾಗಿ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ವಿಫಲರಾಗಿ ದ್ದಾರೆ ಎಂಬ ವಿಚಾರ ಮುಂದಿಟ್ಟು ಕೊಂಡು ಪ್ರಚಾರ ಸಂದರ್ಭದಲ್ಲಿ ಅದಕ್ಕೆ ಪೂರಕವಾಗುವ ನಿದರ್ಶನಗಳನ್ನು ಬಳಸಿಕೊಂಡಿದ್ದರು. ಪಂಪ್‌ವೆಲ್, ತೊಕ್ಕೊಟ್ಟು ಫ್ಲೆಓವರ್ ಕಾಮಗಾರಿ ವಿಳಂಬ, ಬಿ.ಸಿ.ರೋಡ್ -ಅಡ್ಡಹೊಳೆ ರಸ್ತೆ ಕಾಮಗಾರಿ ಹಿನ್ನಡೆಯನ್ನು° ಹೈಲೈಟ್ ಮಾಡಿತ್ತು. ಇಂಥಹ ಅಭಿವೃದ್ಧಿಗೆ ಪೂರಕವಾಗುವ ವಿಚಾರಗಳು ಮತದಾರರ ಮೇಲೆ ಅಷ್ಟಾಗಿ ಪ್ರಭಾವ ಬೀರದಿರುವುದು ಸ್ಪಷ್ಟವಾಗುತ್ತದೆ.