ಕನ್ನಡದಲ್ಲಿ ಸಾಕಷ್ಟು ರಾಜಕೀಯ ಹಾಗು ರಾಜಕಾರಣಿ ಕುರಿತ ಸಿನಿಮಾಗಳು ಬಂದು ಹೋಗಿವೆ. ಆ ಸಾಲಿಗೆ ಈಗ “ವಾರ್ಡ್ ನಂ 11′ ಚಿತ್ರ ಹೊಸ ಸೇರ್ಪಡೆ. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ, ಇದೊಂದು ಪೊಲಿಟಿಕಲ್ ಬ್ಯಾಕ್‌ಡ್ರಾಪ್‌ನಲ್ಲಿ ಸಾಗುವ ಚಿತ್ರ ಅನ್ನೋದು ಪಕ್ಕಾ ಆಗುತ್ತೆ. ಈ ಹಿಂದೆ “ಜೋಶ್’ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ವಿಶ್ವಾಸ್, ತುಂಬಾ ಗ್ಯಾಪ್ ಬಳಿಕ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ, ಚಿತ್ರದಲ್ಲಿ ಅವರೊಬ್ಬರೇ ಇಲ್ಲ. ಅವರ ಜೊತೆಯಲ್ಲಿ ರಕ್ಷಿತ್ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಕೂಡ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ “ವಾರ್ಡ್ ನಂ 11′ ಕ್ಕೆ ಪುನೀತ್ ರಾಜಕುಮಾರ್ ಅವರು ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಚಿತ್ರದ ಮೂಲಕ ಶ್ರೀಕಾಂತ್ ನಿರ್ದೇಶಕರಾಗುತ್ತಿದ್ದಾರೆ. ಎಂಜಿನಿಯರಿಂಗ್ ಓದುವ ಸಂದರ್ಭದಲ್ಲೇ ಶ್ರೀಕಾಂತ್ ಹಲವು ಕಥೆ ಬರೆದಿದ್ದರು. ಹಾಗೆ ಕಥೆ ಬರೆಯುತ್ತಲೇ “ವಾರ್ಡ್ ನಂ 11′ ಕಥೆಯನ್ನೂ ಬರೆದಿದ್ದಾರೆ. ಅದೀಗ ಚಿತ್ರ ರೂಪ ಪಡೆದುಕೊಳ್ಳುತ್ತಿದೆ. ಎಲ್ಲಾ ಸರಿ, ಅವರ “ವಾರ್ಡ್’ ಕಥೆ ಏನು? ಅವರೇ ಹೇಳುವಂತೆ, ವಾರ್ಡ್ ಅನ್ನೋದು ಒಂದು ಏರಿಯಾ. ಅಲ್ಲಿ ಒಂದಷ್ಟು ಯುವಕರು ಇದ್ದೇ ಇರುತ್ತಾರೆ. ಇಲ್ಲಿ ನಾಲ್ವರು ಗೆಳೆಯರ ಪೈಕಿ ಒಬ್ಬನ ಕೊಲೆ ನಡೆದು ಹೋಗುತ್ತದೆ. ಆ ಕೊಲೆಯ ತನಿಖೆಯ ಜಾಡು ಹಿಡಿದು ಹೊರಟವರಿಗೆ ಸಾಕಷ್ಟು ಸಂಗತಿಗಳು ಹೊರಬರುತ್ತವೆ. ಒಂದೊಂದೇ ವಿಷಯ ಹೊಸದೊಂದು ತಿರುವು ಪಡೆದುಕೊಳ್ಳುತ್ತದೆ. ಆಮೇಲೆ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ. ಇದೊಂದು ಸಸ್ಪೆನ್ಸ್-ಥ್ರಿಲ್ಲರ್’ ಎನ್ನುತ್ತಾರೆ ನಿರ್ದೇಶಕರು.
ಇನ್ನು, ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರು ರಾಜಕಾರಣಿ ಪಾತ್ರ ಮಾಡುತ್ತಿದ್ದಾರೆ. ರಾಜಕೀಯ ಅಷ್ಟೇನೂ ಇಲ್ಲ. ಆದರೆ, ರಾಜಕಾರಣಿ ಪ್ರಮುಖ ಆಕರ್ಷಣೆ. ಇನ್ನು, ರಕ್ಷಿತ್ ನಾಯಕರಾಗಿದ್ದು, ಅವರಿಲ್ಲಿ , ತಮ್ಮ ಏರಿಯಾದಲ್ಲಿ ಯಾರಿಗಾದರೂ ಸಮಸ್ಯೆಯಾದರೆ ಅದನ್ನು ಬಗೆಹರಿಸುವ ಪಾತ್ರ ಮಾಡಿದ್ದಾರಂತೆ. ನಾಲ್ಕು ವರ್ಷಗಳ ಹಿಂದೆ ಬಣ್ಣ ಹಚ್ಚಿದ್ದ ವಿಶ್ವಾಸ್ ಈಗ ಪುನಃ ಬಣ್ಣ ಹಚ್ಚುತ್ತಿದ್ದಾರೆ. ಅವರಿಗಿಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಉಳಿದಂತೆ ಮೇಘಶ್ರೀ ಕಾಲೇಜು ಹುಡುಗಿ ಪಾತ್ರ ಮಾಡಿದರೆ, ಅಮೃತ ಮಧ್ಯಮ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇವರ ಜೊತೆಯಲ್ಲಿ ಸುಮನ್ ನಗರ್‌ಕರ್ ಕೂಡ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಣಿ, ತಪಸ್ವಿ ಹಾಡು ಬರೆದಿದ್ದಾರೆ. ಸುರೇಂದ್ರನಾಥ್ ಸಂಗೀತವಿದೆ. ರಾಕೇಶ್.ಸಿ.ತಿಲಕ್ ಛಾಯಾಗ್ರಹಣವಿದೆ. ಶ್ರೀಕಾಂತ್ ಮತ್ತು ಹರೀಶ್ ಸಂಭಾಷಣೆ ಬರೆದಿದ್ದಾರೆ. ದಾವಣಗೆರೆ ಉದ್ಯಮಿ ಗುರುರಾಜ್.ಎ ಮತ್ತು ಸಂದೀಪ್ ಶಿವಮೊಗ್ಗ ಚಿತ್ರ ನಿರ್ಮಿಸುತ್ತಿದ್ದಾರೆ.