Advertisement
ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಕೃಷಿ ಮೇಳದಲ್ಲಿನ ಮಳಿಗೆಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸ್ಪಟ್ಟ ಬೇಕರಿ ಉತ್ಪನ್ನಗಳು, ಉಂಡೆ, ಚಕಲಿ, ಅವಲಕ್ಕಿ, ಕೋಡಬಳೆ ಹೀಗೆ ತರಾವಧಿ ಪದಾರ್ಥಗಳು ತಿಂಡಿಪ್ರಿಯರ ಬಾಯಲ್ಲಿ ನೀರೂರಿಸುತ್ತಿದ್ದು, ಅನೇಕರನ್ನು ತನ್ನತ್ತ ಆಕರ್ಷಿಸುತ್ತಿವೆ.ಧಾರವಾಡ ಕೃವಿವಿಯ ಗೃಹ ಮತ್ತು ಆಹಾರ ವಿಜ್ಞಾನ ವಿಭಾಗ, ಫುಡ್ ಟೆಕ್ ವಿಭಾಗದದವರು ಜನರಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಳ ನಿಟ್ಟಿನಲ್ಲಿ ಪ್ರದರ್ಶನ, ಮಾಹಿತಿ ಹಾಗೂ ಮಾರಾಟ ವ್ಯವಸ್ಥೆ ಕೈಗೊಂಡಿದ್ದಾರೆ.
ರಾಗಿಯಂತಹ ಸಿರಿಧಾನ್ಯಗಳನ್ನು ಬಳಸಿಕೊಂಡು ಏನೆಲ್ಲಾ ಆಹಾರ ಪದಾರ್ಥ, ತಿನಿಸುಗಳನ್ನು ತಯಾರಿಸಬಹುದು ಎಂಬುದರ ಅಧ್ಯಯನ, ಸಂಶೋಧನೆ ಕೈಗೊಳ್ಳುವ ಮೂಲಕ ಹೊಸ ಹೊಸ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಸಿರಿಧಾನ್ಯಗಳನ್ನು ಬಳಸಿ ಉಂಡೆ, ಚಕಲಿ, ಕೋಡಬಳೆ, ಸೇವ್, ಶಂಕರಪೊಳೆ, ಬರ್ಫಿ, ಬ್ರೆಡ್, ಬನ್, ಬಿಸ್ಕಿಟ್ ಇನ್ನಿತರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಈ ವರ್ಷ ಹೊಸ ಪದಾರ್ಥವಾಗಿ ನವಣೆ ಅವಲಕ್ಕಿ, ಹಾರಕ ಮತ್ತು ಕೊರ್ಲೆಗಳನ್ನು ಬಳಸಿಕೊಂಡು ಕುಕ್ಕೀಸ್ ತಯಾರಿಸಲಾಗಿದೆ. ನವಣೆಯಿಂದ ಅನೇಕ ಉತ್ಪನ್ನಗಳನ್ನು ತಯಾರಿಸಬಹುದಾಗಿದ್ದರೂ ಅವಲಕ್ಕಿ ತಯಾರಿಸುವುದರ ಕುರಿತಾಗಿ ನಡೆದ ಅಧ್ಯಯನ ಇದೀಗ ಉತ್ಪನ್ನ ರೂಪದಲ್ಲಿ
ಹೊರಬಂದಿದೆ.
Related Articles
ಗೃಹ ಮತ್ತು ಆಹಾರ ವಿಜ್ಞಾನ ವಿಭಾಗದಿಂದ ಸಿರಿಧಾನ್ಯಗಳನ್ನೇ ಬಳಸಿಕೊಂಡು ಇದುವರೆಗೆ ಸುಮಾರು 75 ಆಹಾರ ಪದಾರ್ಥ ಹಾಗೂ ತಿನಿಸುಗಳನ್ನು ಹೊರತಲಾಗಿದೆ.
Advertisement
ಮಧುಮೇಹಿಗಳಿಗೆ ಉತ್ಪನ್ನ: ಸಿರಿಧಾನ್ಯ ಮಧುಮೇಹಿಗಳಿಗೆ ಅತ್ಯಂತ ಸ್ನೇಹಿಯಾಗಿವೆ. ಈ ಹಿನ್ನೆಲೆಯಲ್ಲಿ ಮಧುಮೇಹಿಗಳಿಗೆ ಪೂರಕವಾಗಿ ನವಣೆ ಸೇರಿದಂತೆ ವಿವಿಧ ಸಿರಿಧಾನ್ಯ ಬಳಸಿಕೊಂಡು ಅನ್ನ, ಉಪ್ಪಿಟ್ಟು ಇನ್ನಿತರ ಆಹಾರ ಪದಾರ್ಥ ತಯಾರಿಸಲಾಗಿದೆ. ಸಿರಿಧಾನ್ಯಗಳನ್ನೇ ಬಳಸಿಕೊಂಡು ಮಕ್ಕಳಿಗೆ ಪೂರಕ ಆಹಾರ ಪೌಡರ್ ತಯಾರಿಸಲಾಗಿದ್ದು, ನೈಸರ್ಗಿಕ ಪೋಷಕಾಂಶಗಳನ್ನು ಒಳಗೊಂಡಿದೆ.
ಅದೇ ರೀತಿ ಕ್ರೀಡಾಪಟುಗಳ ದೇಹಾರೋಗ್ಯಕ್ಕೆ ಶಕ್ತಿದಾಯಕ ಮಿಕ್ಸ್ ನ್ನು ಹೊರತರಲಾಗಿದೆ. ಬಾಸ್ಕೆಟ್‌ಬಾಲ್ ಕ್ರೀಡಾಪಟುಗಳ ಮೇಲೆ ಪ್ರಯೋಗ ಮಾಡಿ, ಅದರ ಪರಿಣಾಮದ ಆಧಾರದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ.ಮಾರುಕಟ್ಟೆಯಲ್ಲಿ ಕ್ರೀಡಾಪಟುಗಳಿಗೆ ಶಕ್ತಿದಾಯಕ ಮಿಕ್ಸ್‌ಗಳು ದುಬಾರಿಯಾಗಿದ್ದು, ಕೃವಿವಿಯಲ್ಲಿ ತಯಾರಿಸಿದ ಶಕ್ತಿವರ್ಧಕ ಮಿಕ್ಸ್ ಒಂದು ಕೆಜಿಗೆ ಕೇವಲ 120ರೂ.ನಲ್ಲಿ ದೊರೆಯುತ್ತದೆ. ಸಿರಿಧಾನ್ಯಗಳಿಂದ ತಯಾರಿಸಿದ ತಿನಿಸುಗಳಿಂದ ದೇಹಾರೋಗ್ಯಕ್ಕೆ ಪೂರಕ ಕಾರ್ಯ, ಅದರೊಳಗಿನ ಪೋಷಕಾಂಶ ಇನ್ನಿತರ ಮಾಹಿತಿ ನೀಡಲಾಗುತ್ತಿದ್ದು, ಪ್ರದರ್ಶನ ಮಳಿಗೆಗೆ ಹೊಂದಿಕೊಂಡ ಇನ್ನೊಂದು ಮಳಿಗೆಯಲ್ಲಿ ಉತ್ಪನ್ನಗಳ ಮಾರಾಟ ವ್ಯವಸ್ಥೆ ಕೈಗೊಳ್ಳಲಾಗಿದೆ. ಅಮರೇಗೌಡ ಗೋನವಾರ