ಬೀದರ್: ನಗರದ ಬ್ರಿಮ್ಸ್ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಎರಡು ದಿನಗಳ ಶಿಶುವಿಗೆ ಇಲಿ ಕಡಿದು ಗಾಯಗೊಳಿಸಿರುವ ಹೃದಯ ವಿದ್ರಾವಕ ಘಟನೆ ಬುಧವಾರ ರಾತ್ರಿ ನಡೆದಿದೆ. ಮಗುವಿಗೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಮಗು ಆರೋಗ್ಯವಾಗಿದೆ.
ಜಿಲ್ಲೆಯ ಮಂಗಲಗಿ ಗ್ರಾಮದ ರೂಪಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಹುಟ್ಟುತ್ತಲೇ ಒಂದು ಮಗು ಮೃತಪಟ್ಟಿದೆ. ಬುಧವಾರ ಆಸ್ಪತ್ರೆಯಲ್ಲಿ ಇರುವ ಇನ್ನೊಂದು ಮಗುವಿಗೆ ಇಲಿ ಕಚ್ಚಿ ಗಾಯಗೊಳಿಸಿದೆ. ರಾತ್ರಿ ಮಗುವಿನ ತಾಯಿ ಪಕ್ಕದ ಕೋಣೆಯಲ್ಲಿ ವಾಶ್ ರೂಮ್‌ಗೆ ಹೋಗಿ ಬರುವಷ್ಟರಲ್ಲಿ ಈ ಘಟನೆ ನಡೆದಿದೆ. ಇಲಿ ಮಗುವಿನ ಮುಖ, ಕೈ ಬೆರಳು, ಕಾಲು, ಮುಖಕ್ಕೆ ಕಚ್ಚಿ ಗಾಯಗೊಳಿಸಿದೆ.
ಮಗುವಿನ ಸ್ಥಿತಿಯನ್ನು ಕಂಡು ಆತಂಕಗೊಂಡ ಪಾಲಕರು ಮತ್ತು ಸಹ ರೋಗಿಗಳು ಆಸ್ಪತ್ರೆಯಲ್ಲಿ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಊಟ, ಬ್ರೆಡ್ಡು, ಹಣ್ಣುಗಳನ್ನು ತಿನ್ನಲು ಇಲಿಗಳು ವಾರ್ಡ್‌ನಲ್ಲಿ ಸುತ್ತಾಡುತ್ತವೆ. ಇಲಿಗಳ ಕಾಟದಿಂದ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ಇಲಿಗಳ ಹಾವಳಿಗೆ ಕಡಿವಾಣ ಹಾಕಿ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಮಾಧ್ಯಮಗಳ ಎದುರು ಮನವಿ ಮಾಡಿದರು.
ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರು ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಜತೆಗೆ ಬ್ರಿಮ್ಸ್‌ಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿ ಪಾಲಕರಿಗೆ ಸಾಂತ್ವನ ಹೇಳಿದ್ದಾರೆ. ನಂತರ ವಾರ್ಡ್‌ನಲ್ಲಿನ ಅವ್ಯವಸ್ಥೆ ಪರಿಶೀಲಿಸಿ, ಕೂಡಲೇ ಕಿಟಕಿಗಳಿಗೆ ಜಾಲರಿ (ಮೆಶ್ ಡೋರ್) ಅಳವಡಿಸಲು ಸೂಚಿಸಿದ್ದಾರೆ. ಇಲಿಗಳ ಕಾಟ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವೈದ್ಯರೊಂದಿಗೆ ಚರ್ಚಿಸಿದ್ದಾರೆ.
ಹೆರಿಗೆ ವಾರ್ಡ್‌ನಲ್ಲಿ ತಾಯಿ ವಾಶ್ ರೂಮ್‌ಗೆ ಹೋಗಿ ಬರುವಷ್ಟರಲ್ಲಿ ಮಗುವಿಗೆ ಇಲಿ ಕಡಿದಿದೆ. ಮಗುವಿಗೆ ಯಾವುದೇ ತೊಂದರೆ ಇಲ್ಲ. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ. ಇಲಿಗಳನ್ನು ಹಿಡಿಯುವ ಬೋನು ಅಳವಡಿಸಲು ಅಥವಾ ಇಲಿಗಳು ಬಾರದಂತೆ ತಡೆಯಲು ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಲು ಚಿಂತನೆ ಮಾಡಲಾಗಿದೆ. ಇನ್ಮುಂದೆ ಬ್ರಿಮ್ಸ್‌ನಲ್ಲಿ ಇಲಿಗಳ ಕಾಟ ತಪ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.