Advertisement
ಒಬ್ಬ ವ್ಯಕ್ತಿಯಲ್ಲಿ ಶಬ್ದಗಳನ್ನು ಕೇಳಿಸಿಕೊಳ್ಳಲು ಯಾವುದೇ ಮಟ್ಟದಲ್ಲಿ ಇರುವ ಅಸಾಮರ್ಥ್ಯಕ್ಕೆ ಶ್ರವಣ ನಷ್ಟ ಅಥವಾ ಕಿವುಡುತನ ಎಂದು ಹೇಳುತ್ತಾರೆ. ವ್ಯಕ್ತಿಯ ಸಂವಹನ ಮತ್ತು ಸಾಮಾಜಿಕ ಜೀವನದ ಮೇಲೆ ಕಿವುಡುತನವು ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡಬಹುದು.
ಕಿವುಡುತನವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ ಪತ್ತೆ ಮಾಡುವುದು ಬಹಳ ಆವಶ್ಯಕ. ಜನಿಸಿದ ಮೊದಲ ತಿಂಗಳಲ್ಲೇ ಮಗುವಿನಲ್ಲಿ ಆರಂಭವಾಗುವ ಆಲಿಸುವಿಕೆಯ ಪ್ರಕ್ರಿಯೆಯು, ಮುಂದೆ ಅದನ್ನು ಮಾತನಾಡಲು ಸನ್ನದ್ಧಗೊಳಿಸುತ್ತದೆ. ಮಗುವಿನ ಮೆದುಳಿನಲ್ಲಿ ಹೊಸ ನರ ಜಾಲಗಳು ವಿಕಸನಗೊಳ್ಳುತ್ತಿರುವ ಕಾರಣ ಮಕ್ಕಳ ಮೆದುಳು ವಯಸ್ಕರ ಮೆದುಳಿಗಿಂತ ಹೆಚ್ಚು ಪ್ರಭಾವಗ್ರಾಹ್ಯ (ಸಂವೇದನಶೀಲ) ಆಗಿರುತ್ತದೆ ಮತ್ತು ಮಕ್ಕಳ ಮನಸ್ಸು ದೊಡ್ಡವರಿಗಿಂತಲೂ ಹೆಚ್ಚು ವೇಗವಾಗಿ, ಹೆಚ್ಚು ವಿಷಯಗಳನ್ನು ಗ್ರಹಿಸುತ್ತಿರುತ್ತದೆ. ಒಂದುವೇಳೆ ಮಗುವಿಗೆ ಕಿವುಡುತನ ಇದ್ದಲ್ಲಿ, ಅದು ಆದಷ್ಟು ಬೇಗನೆ ಪತ್ತೆ ಆಯಿತು ಎಂದಾದರೆ, ಅದರಿಂದ ಆ ಮಗುವಿನ ಭಾಷಾ ಕಲಿಕೆ ಮತ್ತು ಸಾಮಾಜಿಕ ಬೆಳವಣಿಗೆಗೆ ಬಹಳ ಪ್ರಯೋಜನವಾಗುತ್ತದೆ. ತನ್ನ ಸುತ್ತಲೂ ತನ್ನ ಕುಟುಂಬದ ಸದಸ್ಯರು ಮಾತನಾಡುವುದನ್ನು ಕೇಳಿಸಿಕೊಂಡು ಮಗುವು ತಾನೂ ಮಾತನಾಡಲು ಕಲಿಯುತ್ತದೆ. ಮಗುವಿಗೆ ಕಿವುಡುತನ ಇದ್ದು, ಆ ಬಗ್ಗೆ ಯಾರಿಗೂ ತಿಳಿದೇ ಇಲ್ಲ ಎಂದು ಅಂದುಕೊಳ್ಳಿ. ಇದರಿಂದ ಮಗುವಿನ ಮಾತು ಮತ್ತು ಭಾಷಾ ಬೆಳವಣಿಗೆ ನಿಧಾನವಾಗಿ ಸಾಗುತ್ತದೆ. ಈ ರೀತಿಯ ನಿಧಾನವಾಗುವಿಕೆಯು ಆ ಬಳಿಕ ಮಗುವಿನ ಶೈಕ್ಷಣಿಕ ಜೀವನದಲ್ಲಿಯೂ ತೊಂದರೆ ಉಂಟು ಮಾಡುತ್ತದೆ. ಕಿವುಡುತನವನ್ನು ಆರಂಭದಲ್ಲೇ ಪತ್ತೆ ಮಾಡುವುದರಿಂದ ಮಾತು ಮತ್ತು ಕಲಿಕೆ ನಿಧಾನಗೊಳ್ಳುವುದನ್ನು ತಪ್ಪಿಸಬಹುದು.
Related Articles
ಒಂದು ವೇಳೆ ಮಗುವು ಶ್ರವಣ ಪರೀಕ್ಷೆಯಲ್ಲಿ ಪಾಸ್ ಆಗದಿದ್ದರೆ, ಆ ಮಗುವನ್ನು ಅನುಸರಣಾ ಪರೀಕ್ಷೆಗಳಿಗೆ ಶಿಫಾರಸು ಮಾಡುತ್ತಾರೆ. ಆದರೆ ನಾವು ತಿಳಿದಿರಬೇಕಾದ ಸಂಗತಿ ಅಂದರೆ, ಒಟ್ಟು ಮಕ್ಕಳಲ್ಲಿ ಶ್ರವಣ ನಷ್ಟ ಇರುವುದು ಕೇವಲ ಶೇ. 1ರಷ್ಟು ಮಕ್ಕಳಿಗೆ ಆದರೂ ಸುಮಾರು ಶೇ. 10ರಷ್ಟು ಮಕ್ಕಳೂ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಪಾಸ್ ಆಗುವುದಿಲ್ಲ. ನವಜಾತ ಶಿಶುಗಳ ಶ್ರವಣ ಪರೀಕ್ಷೆಯಲ್ಲಿ ಪಾಸ್ ಆಗದೆ ಇರಲು ಇರುವ ಪ್ರಮುಖ ಕಾರಣ ಅಂದರೆ, ಕಿವಿಯ
ನಾಳಗಳಲ್ಲಿ ಕೊಳೆ ತುಂಬಿರುವುದು, ಮಧ್ಯ ಕಿವಿಯಲ್ಲಿ ದ್ರವ ತುಂಬಿರುವುದು ಅಥವಾ ಪರೀಕ್ಷೆಯ ಸಮಯದಲ್ಲಿ ಮಗುವು ಅತ್ತಿತ್ತ ಅಲುಗಾಡುವುದು/ಮಗುವು ಅಳುತ್ತಾ ಇರುವುದು.
Advertisement
ಆದರೆ ಹೆಚ್ಚಿನ ಮಕ್ಕಳು ಮುಂದಿನ ಹಂತದ ಅನುಸರಣಾ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ. ಆದರೆ ಈ ಪರೀಕ್ಷೆಗೆ ಮಗುವನ್ನು ಒಳಪಡಿಸುವುದು ಬಹಳ ಆವಶ್ಯಕ ಯಾಕೆಂದರೆ, ಮಗುವಿನ ಕೇಳುವಿಕೆಯ ಮಟ್ಟ ಹೇಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇರುವುದು ಇದೊಂದೇ ವಿಧಾನ.
ಕೆಲವು ಮಕ್ಕಳಲ್ಲಿ ಹುಟ್ಟುವಾಗ ಕಿವಿ ಕೇಳುವಿಕೆಯು ಸಹಜವಾಗಿದ್ದು, ಆ ಬಳಿಕ ಅಂದರೆ ನವಜಾತ ಶಿಶುವಿನ ಹಂತದ ಅನಂತರ ಕಿವಿ ಕೇಳಿಸದಿರುವ ತೊಂದರೆ ಕಾಣಿಸಿಕೊಳ್ಳಬಹುದು. ವಿವಿಧ ಅಸ್ವಸ್ಥತೆಗಳು ಅಥವಾ ಆನುವಂಶಿಕ ಕಾರಣಗಳಿಂದಾಗಿ ಈ ಪರಿಸ್ಥಿತಿ ಬರಬಹುದು. ಮಾತ್ರವಲ್ಲದೆ, ಏಟುಗಳು ಅಥವಾ ಕಾಯಿಲೆಗಳಿಗಾಗಿ ಬಳಸುವ ಕೆಲವು ಔಷಧಿಗಳಿಂದಾಗಿ ನವಜಾತ ಶಿಶುವಿನ ಹಂತದ ಅನಂತರ ಶ್ರವಣ ನಷ್ಟ ಕಾಣಿಸಿಕೊಳ್ಳಬಹುದು. ಈ ಕಾರಣಕ್ಕಾಗಿ ಮಗುವಿನ ಕೇಳುವಿಕೆಯ ಮಟ್ಟ ಹೇಗಿದೆ ಎಂಬುದನ್ನು ಗಮನಿಸಲು ಮತ್ತು ಮಗುವಿನ ಕೇಳುವ ನಡವಳಿಕೆಯನ್ನು ಅಂದರೆ ವಿವಿಧ ಶಬ್ದಗಳಿಗೆ ಮಗುವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ವಿವರವಾಗಿ ವಿಶ್ಲೇಷಿಸಲು ನಿಯಮಿತ ಆಡಿಯೋಲಾಜಿಕಲ್ ಪರೀಕ್ಷೆಗೆ (ಶ್ರವಣ ಪರೀಕ್ಷೆ) ಶಿಫಾರಸು ಮಾಡಲಾಗುತ್ತದೆ.
ಹಿಯರಿಂಗ್ ಸ್ಕ್ರೀನಿಂಗ್ ಅಥವಾ ಶ್ರವಣ ಪರೀಕ್ಷೆ ಎನ್ನುವುದು ಸರಳ, ಸುರಕ್ಷಿತ ಮತ್ತು ನೋವು ರಹಿತ ಪರೀಕ್ಷೆ ಆಗಿದ್ದು, ಎಲ್ಲಾ ನವಜಾತ ಶಿಶುಗಳಿಗೂ ಈ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಲೇಬೇಕು ಯಾಕೆಂದರೆ ಈ ಪರೀಕ್ಷೆಯು ಮಗುವಿನ ಶ್ರವಣ ನಷ್ಟವನ್ನು ಆರಂಭದಲ್ಲೇ ಪತ್ತೆ ಮಾಡುವ ಮೂಲಕ ಮಗುವಿನ ಭವಿಷ್ಯವನ್ನು ಬದಲಾಯಿಸುತ್ತದೆ.
ಯೂನಿವರ್ಸಲ್ ನಿಯೋನೇಟಲ್ ಹಿಯರಿಂಗ್ ಸ್ಕ್ರೀನಿಂಗ್‌ನ ಉದ್ದೇಶಗಳನ್ನು ಸಂಕ್ಷಿಪ್ತವಾಗಿ, 1-3-6 ಉದ್ದೇಶಗಳಾಗಿ ವಿವರಿಸಲಾಗಿದೆ1 ತಿಂಗಳ ವಯಸ್ಸಿನಲ್ಲಿ ಸ್ಕ್ರೀನ್ ಮಾಡಬೇಕಾಗಿರುವ ಮಕ್ಕಳು.
3 ತಿಂಗಳ ವಯಸ್ಸಿನಲ್ಲಿ ಪೂರ್ಣ ಮಾಡಬೇಕಾಗಿರುವ ಆಡೊಯಾಲಾಜಿಕಲ್ ವಿಶ್ಲೇಷಣೆಗಳು.
6 ತಿಂಗಳ ಪ್ರಾಯದಲ್ಲಿ ಆರಂಭಿಸುವ ಸೂಕ್ತ ವೈದ್ಯಕೀಯ ಮತ್ತು ಆಡಿಯೋಲಾಜಿಕಲ್ ಸೇವೆಗಳು ಹಾಗೂ ಆರಂಭಿಕ ಪರಿಹಾರೋಪಾ ಯಗಳ ಬಗ್ಗೆ ಅರಿವು ನೀಡುವ ಸೇವೆಗಳು. ಉಡುಪಿಯ ಡಾ| ಟಿ. ಎಂ. ಎ. ಪೈ ಆಸ್ಪತ್ರೆ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿಯೂ ಈ ಸೇವೆಗಳು ಲಭ್ಯ. – ಡಾ| ಅರ್ಚನಾ ಜಿ.
ಶ್ರವಣ ತಜ್ಞರು,
ಸ್ಪೀಚ್ ಎಂಡ್ ಹಿಯರಿಂಗ್ ವಿಭಾಗ
ಡಾ| ಟಿ ಎಂ ಎ ಪೈ ಆಸ್ಪತ್ರೆ ಉಡುಪಿ ಮತ್ತು SOAHS,, ಮಣಿಪಾಲ.