ಪಲ್ಲೆಕಿಲೆ: ಆತಿಥೇಯ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ನ್ಯೂಜಿಲ್ಯಾಂಡ್ ಈಗ 3 ಪಂದ್ಯಗಳ ಟಿ20 ಸರಣಿ ಗೆದ್ದು ಸಂಭ್ರಮಿಸಿದೆ. ಮಂಗಳವಾರ ಇಲ್ಲಿ ನಡೆದ ದ್ವಿತೀಯ ಮುಖಾಮುಖೀಯನ್ನು ಕಿವೀಸ್ 4 ವಿಕೆಟ್‌ಗಳಿಂದ ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 9 ವಿಕೆಟಿಗೆ 161 ರನ್ ಗಳಿಸಿದರೆ, ನ್ಯೂಜಿಲ್ಯಾಂಡ್ 19.4 ಓವರ್‌ಗಳಲ್ಲಿ 6 ವಿಕೆಟಿಗೆ 165 ರನ್ ಬಾರಿಸಿತು. ಮೊದಲ ಪಂದ್ಯದಲ್ಲಿ ಟಿಮ್ ಸೌಥಿ ಪಡೆ 5 ವಿಕೆಟ್‌ಗಳಿಂದ ಜಯಿಸಿತ್ತು. 3ನೇ ಹಾಗೂ ಅಂತಿಮ ಪಂದ್ಯ ಸೆ. 6ರಂದು ಇದೇ ಅಂಗಳದಲ್ಲಿ ನಡೆಯಲಿದೆ.
ಚೇಸಿಂಗ್ ವೇಳೆ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಮತ್ತು ಟಾಮ್ ಬ್ರೂಸ್ ಅರ್ಧ ಶತಕ ಬಾರಿಸಿ ಲಂಕಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಗ್ರ್ಯಾಂಡ್‌ಹೋಮ್ 59 ರನ್ (2 ಬೌಂಡರಿ, 3 ಸಿಕ್ಸರ್) ಮತ್ತು ಬ್ರೂಸ್ 53 ರನ್ (3 ಬೌಂಡರಿ) ಸಿಡಿಸಿದರು. ಇಬ್ಬರೂ ಎದುರಿಸಿದ್ದು 46 ಎಸೆತ. 38ಕ್ಕೆ 3 ವಿಕೆಟ್ ಬಿದ್ದಾಗ ಒಟ್ಟುಗೂಡಿದ ಇವರಿಬ್ಬರು ಮೊತ್ತವನ್ನು 147ರ ತನಕ ಕೊಂಡೊಯ್ದರು. ಸ್ಯಾಂಟ್ನರ್ 2 ಎಸೆತಗಳಿಂದ 10 ರನ್ ಹೊಡೆದು ತಂಡದ ಗೆಲುವು ಸಾರಿದರು.ಲಂಕಾ ಪರ 39 ರನ್ ಮಾಡಿದ ನಿರೋಷನ್ ಡಿಕ್ವೆಲ್ಲ ಅವರದೇ ಹೆಚ್ಚಿನ ಗಳಿಕೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ-9 ವಿಕೆಟಿಗೆ 161 (ಡಿಕ್ವೆಲ್ಲ 39, ಆವಿಷ್ಕ 37, ಮೆಂಡಿಸ್ 26, ರ್ಯಾನ್ಸ್ 33ಕ್ಕೆ 3, ಸೌಥಿ 18ಕ್ಕೆ 2). ನ್ಯೂಜಿಲ್ಯಾಂಡ್-19.4 ಓವರ್‌ಗಳಲ್ಲಿ 6 ವಿಕೆಟಿಗೆ 165 (ಗ್ರ್ಯಾಂಡ್‌ಹೋಮ್ 59, ಬ್ರೂಸ್ 53, ಧನಂಜಯ 36ಕ್ಕೆ 3). ಪಂದ್ಯಶ್ರೇಷ್ಠ: ಟಿಮ್ ಸೌಥಿ