Advertisement

ಕರಿ ಟೋಪಿಯವರಿಂದ ಕಮರಿತು ಕಪ್‌ ಕನಸು

12:21 AM Jul 11, 2019 | Team Udayavani |

ಮ್ಯಾಂಚೆಸ್ಟರ್‌: ಭಾರತದ ವಿಶ್ವಕಪ್‌ ಕನಸು ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫ‌ರ್ಡ್‌ ಅಂಗಳದಲ್ಲಿ ಕಮರಿದೆ. ಲಕ್ಷಾಂತರ ಮಂದಿಯ ನಿರೀಕ್ಷೆ, ಹಾರೈಕೆಗಳೆಲ್ಲ ನೆಲಸಮಗೊಂಡಿವೆ. “ಬ್ಲ್ಯಾಕ್‌ ಕ್ಯಾಪ್ಸ್‌’ ನ್ಯೂಜಿಲ್ಯಾಂಡ್‌ ಎದುರಿನ ಸೆಮಿಫೈನಲ್‌ ಪಂದ್ಯವನ್ನು 18 ರನ್ನುಗಳಿಂದ ಕಳೆದುಕೊಂಡ ಕೊಹ್ಲಿ ಪಡೆ 2019ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಿಂದ ಹೊರಬಿದ್ದಿದೆ.


Advertisement

ಮಳೆಯಿಂದ ಮೀಸಲು ದಿನಕ್ಕೆ ವಿಸ್ತರಿಸಲ್ಪಟ್ಟ ಈ ಪಂದ್ಯದಲ್ಲಿ ಬ್ಯಾಟಿಂಗ್‌ ಮುಂದುವರಿಸಿದ ನ್ಯೂಜಿಲ್ಯಾಂಡ್‌ 8 ವಿಕೆಟಿಗೆ 239 ರನ್‌ ಗಳಿಸಿದರೆ, ಭಾರತ 49.3 ಓವರ್‌ಗಳಲ್ಲಿ 221ಕ್ಕೆ ಲಾಗ ಹಾಕಿತು. ಇದು ಟೀಮ್‌ ಇಂಡಿಯಾಕ್ಕೆ ಎದುರಾದ ಸತತ 2ನೇ ಸೆಮಿಫೈನಲ್‌ ಆಘಾತ. ಹಾಗೆಯೇ ನ್ಯೂಜಿಲ್ಯಾಂಡಿಗೆ ಲಭಿಸಿದ ಸತತ 2ನೇ ಸೆಮಿಫೈನಲ್‌ ಟಿಕೆಟ್‌. ಗುರುವಾರ ನಡೆಯುವ ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವಿನ ವಿಜೇತರನ್ನು ಕೇನ್‌ ವಿಲಿಯಮ್ಸನ್‌ ಪಡೆ ರವಿವಾರದ ಲಾರ್ಡ್ಸ್‌ ಫೈನಲ್‌ನಲ್ಲಿ ಎದುರಿಸಲಿದೆ.

ಹುಸಿಯಾದ ಲೆಕ್ಕಾಚಾರ
ಯಾವಾಗ ದಕ್ಷಿಣ ಆಫ್ರಿಕಾ ಅಂತಿಮ ಲೀಗ್‌ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಮಣಿಸಿತೋ ಆಗ ಭಾರತಕ್ಕೆ ಅದೃಷ್ಟ ಖುಲಾಯಿಸಿತೆಂದೇ ಭಾವಿಸಲಾಗಿತ್ತು. ತವರಿನ ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಸೆಮಿಫೈನಲ್‌ನಲ್ಲಿ ಎದುರಿಸುವುದಕ್ಕಿಂತ “ಸಾಮಾನ್ಯ ತಂಡ’ವಾದ ನ್ಯೂಜಿ ಲ್ಯಾಂಡನ್ನು ಮಣಿಸುವುದು ಸುಲಭ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಇದು ತಲೆಕೆಳಗಾಯಿತು. ಚೇಸಿಂಗ್‌ ವೇಳೆ ಮ್ಯಾಂಚೆ ಸ್ಟರ್‌ ಟ್ರ್ಯಾಕ್‌ ಮತ್ತು ನ್ಯೂಜಿ ಲ್ಯಾಂಡಿನ ಸೀಮ್‌ ಬೌಲಿಂಗ್‌ದಾಳಿಯನ್ನು ಗಂಭೀರ ವಾಗಿ ತೆಗೆದುಕೊಳ್ಳದ ಭಾರತ ಇದಕ್ಕೆ ಭಾರೀ ಬೆಲೆಯನ್ನೇ ತೆತ್ತಿತು.

ಆರಂಭಿಕರ ಶೋಚನೀಯ ವೈಫ‌ಲ್ಯ
ಭಾರತದ ಬ್ಯಾಟಿಂಗ್‌ ಸರದಿ ಯಲ್ಲೇ ಹೆಚ್ಚು ಬಲಿಷ್ಠವಾಗಿದ್ದ ಅಗ್ರ ಕ್ರಮಾಂಕ ನಿರ್ಣಾಯಕ ಪಂದ್ಯದಲ್ಲಿ ಘೋರ ವೈಫ‌ಲ್ಯ ಅನುಭವಿಸಿದ್ದು ತಂಡದ ಸೋಲಿಗೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ ಸೇರಿಕೊಂಡು ಈ ಕೂಟದಲ್ಲಿ ಸಾವಿರದ ಐನೂರರಷ್ಟು ರನ್‌ ರಾಶಿ ಹಾಕಿದ್ದರು. 6 ಶತಕಗಳೂ ದಾಖಲಾಗಿದ್ದವು. ಆದರೆ ಇಲ್ಲಿ ಈ ಮೂವರು ಸೇರಿಕೊಂಡು ಗಳಿಸಿದ್ದು ತಲಾ ಒಂದೊಂದು ರನ್ನಿನಂತೆ ಬರೀ 3 ರನ್‌. 3.1 ಓವರ್‌ಗಳಲ್ಲಿ 5 ರನ್‌ ಆಗುವಷ್ಟರಲ್ಲಿ ಈ ಮೂವರು ಪೆವಿಲಿಯನ್‌ ಸೇರಿಕೊಂಡಾಗಿತ್ತು. ಮಳೆ ಬಂದ ಬಳಿಕ ಮ್ಯಾಂಚೆಸ್ಟರ್‌ ಪಿಚ್‌ ಬ್ಯಾಟಿಂಗಿಗೆ ಇನ್ನಷ್ಟು ಕಠಿನವಾಗಿ ಪರಿಣವಿಸಲಿದೆ ಎಂಬುದರ ಅರಿವಿತ್ತು. ನ್ಯೂಜಿಲ್ಯಾಂಡಿನ ಪೇಸ್‌ ಬೌಲಿಂಗ್‌ ದಾಳಿ ಅತ್ಯಂತ ಹರಿತ ಎಂಬುದೂ ತಿಳಿದಿತ್ತು. ಹೀಗಾಗಿ ತೀವ್ರ ಎಚ್ಚರಿಕೆ ವಹಿಸಿ ಇನ್ನಿಂಗ್ಸ್‌ ಕಟ್ಟಬೇಕಾದ ಜವಾಬ್ದಾರಿ ಈ ಮೂವರ ಮೇಲಿತ್ತು. ಓವರ್‌ ಉರುಳಿದಂತೆಲ್ಲ ಈ ಪಿಚ್‌ ಮೇಲೆ ಸುಲಭದಲ್ಲಿ ರನ್‌ ಗಳಿಸಬಹುದಿತ್ತು. ಇದಕ್ಕೆ ರವೀಂದ್ರ ಜಡೇಜ ತೋರ್ಪಡಿಸಿದ ಜಬರ್ದಸ್ತ್ ಬ್ಯಾಟಿಂಗೇ ಸಾಕ್ಷಿ. ಆದರೆ ಯೋಜನಾರಹಿತ ಆಟವೊಂದು ಭಾರತದ ಫೈನಲ್‌ ಪ್ರವೇಶದ ಸುವರ್ಣಾವಕಾಶವನ್ನು ಹಾಳುಗೆಡವಿತು.

ಆಸೆ ಚಿಗುರಿಸಿದ ಜಡೇಜ-ಧೋನಿ
5 ರನ್ನಿಗೆ 3 ವಿಕೆಟ್‌ ಬಿದ್ದ ಬಳಿಕ ದಿನೇಶ್‌ ಕಾರ್ತಿಕ್‌ (6) ಕೂಡ ತಂಡಕ್ಕೆ ರಕ್ಷಣೆ ಒದಗಿಸಲಿಲ್ಲ. ಹಿಟ್ಟರ್‌ಗಳಾದ ರಿಷಭ್‌ ಪಂತ್‌ ಮತ್ತು ಹಾರ್ದಿಕ್‌ ಪಾಂಡ್ಯ ತಲಾ 32 ರನ್‌ ಮಾಡಿ ನಿರ್ಗಮಿಸಿದರು. 92 ರನ್ನಿಗೆ 6 ವಿಕೆಟ್‌ ಹಾರಿ ಹೋಯಿತು. ಈ ಹಂತದಲ್ಲಿ ಜತೆಗೂಡಿದ ಧೋನಿ-ಜಡೇಜ ಜಬರ್ದಸ್ತ್ ಬ್ಯಾಟಿಂಗ್‌ ನಡೆಸಿ ಗೆಲುವಿನ ಆಸೆ ಚಿಗುರಿಸಿದರು. 7ನೇ ವಿಕೆಟಿಗೆ 116 ರನ್‌ ಹರಿದು ಬಂತು. ಜಡೇಜ ಬಿರುಸಿನ ಆಟಕ್ಕಿಳಿದು 59 ಎಸೆತಗಳಿಂದ 77 ರನ್‌ ಸಿಡಿಸಿದರು (4 ಬೌಂಡರಿ, 4 ಸಿಕ್ಸರ್‌). ಧೋನಿಯ ಆಟ ಎಂದಿನಂತೆ ನಿಧಾನ ಗತಿಯಿಂದ ಕೂಡಿತ್ತು. 72 ಎಸೆತಗಳಿಂದ 50 ರನ್‌ ಮಾಡಿ ರನೌಟಾದರು (1 ಬೌಂಡರಿ, 1 ಸಿಕ್ಸರ್‌).

Advertisement

5 ರನ್ನಿಗೆ ಬಿತ್ತು 3 ವಿಕೆಟ್‌ !
240 ರನ್‌ ಚೇಸಿಂಗ್‌ ವೇಳೆ 5 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಉರುಳಿಸಿಕೊಂಡ ಭಾರತ ವಿಶ್ವಕಪ್‌ನ ಕಳಪೆ ದಾಖಲೆಯೊಂದನ್ನು ಬರೆಯಿತು. ವಿಶ್ವಕಪ್‌ ಸೆಮಿಫೈನಲ್‌ ಇತಿಹಾಸದಲ್ಲಿ ತಂಡವೊಂದು ಅತೀ ಕಡಿಮೆ ರನ್ನಿಗೆ 3 ವಿಕೆಟ್‌ ಕಳೆದುಕೊಂಡ ನಿದರ್ಶನ ಇದಾಗಿದೆ. ಇದಕ್ಕೂ ಹಿಂದಿನ ಕಳಪೆ ದಾಖಲೆ ಆಸ್ಟ್ರೇಲಿಯದ ಹೆಸರಲ್ಲಿತ್ತು. 1996ರ ವೆಸ್ಟ್‌ ಇಂಡೀಸ್‌ ಎದುರಿನ ಸೆಮಿಫೈನಲ್‌ನಲ್ಲಿ ಆಸೀಸ್‌ನ ಮೊದಲ 3 ವಿಕೆಟ್‌ 8 ರನ್ನಿಗೆ ಹಾರಿ ಹೋಗಿತ್ತು. ಆದರೆ ಅಂದು ವಿಂಡೀಸನ್ನು ಸೋಲಿಸುವ ಮೂಲಕ ಆಸೀಸ್‌ ಫೈನಲ್‌ಗೆ ಲಗ್ಗೆ ಇರಿಸಿತ್ತು. ಭಾರತ ಸೋಲನುಭವಿಸಿ ಕೂಟದಿಂದ ಹೊರಬಿತ್ತು!

ಸ್ಕೋರ್‌ ಪಟ್ಟಿ
ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌ ಸಿ ಕೊಹ್ಲಿ ಬಿ ಬುಮ್ರಾ 1
ಹೆನ್ರಿ ನಿಕೋಲ್ಸ್‌ ಬಿ ಜಡೇಜ 28
ಕೇನ್‌ ವಿಲಿಯಮ್ಸನ್‌ ಸಿ ಜಡೇಜ ಬಿ ಚಹಲ್‌ 67
ರಾಸ್‌ ಟಯ್ಲರ್‌ ರನೌಟ್‌ 74
ಜೇಮ್ಸ್‌ ನೀಶಮ್‌ ಸಿ ಕಾರ್ತಿಕ್‌ ಬಿ ಪಾಂಡ್ಯ 12
ಗ್ರ್ಯಾಂಡ್‌ಹೋಮ್‌ ಸಿ ಧೋನಿ ಬಿ ಭುವನೇಶ್ವರ್‌ 16
ಟಾಮ್‌ ಲ್ಯಾಥಂ ಸಿ ಜಡೇಜ ಬಿ ಭುವನೇಶ್ವರ್‌ 10
ಮಿಚೆಲ್‌ ಸ್ಯಾಂಟ್ನರ್‌ ಔಟಾಗದೆ 9
ಮ್ಯಾಟ್‌ ಹೆನ್ರಿ ಸಿ ಕೊಹ್ಲಿ ಬಿ ಭುವನೇಶ್ವರ್‌ 1
ಟ್ರೆಂಟ್‌ ಬೌಲ್ಟ್ ಔಟಾಗದೆ 3
ಇತರ 18
ಒಟ್ಟು (50 ಓವರ್‌ಗಳಲ್ಲಿ 8 ವಿಕೆಟಿಗೆ) 239
ವಿಕೆಟ್‌ ಪತನ: 1-1, 2-69, 3-134, 4-162, 5-200, 6-225, 7-225, 8-232.
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 10-1-43-3
ಜಸ್‌ಪ್ರೀತ್‌ ಬುಮ್ರಾ 10-1-39-1
ಹಾರ್ದಿಕ್‌ ಪಾಂಡ್ಯ 10-0-55-1
ರವೀಂದ್ರ ಜಡೇಜ 10-0-34-1
ಯಜುವೇಂದ್ರ ಚಹಲ್‌ 10-0-63-1
ಭಾರತ
ಕೆ.ಎಲ್‌. ರಾಹುಲ್‌ ಸಿ ಲ್ಯಾಥಮ್‌ ಬಿ ಹೆನ್ರಿ 1
ರೋಹಿತ್‌ ಶರ್ಮ ಸಿ ಲ್ಯಾಥಮ್‌ ಬಿ ಹೆನ್ರಿ 1
ವಿರಾಟ್‌ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ಬೌಲ್ಟ್ 1
ಪಂತ್‌ಸಿ ಗ್ರ್ಯಾಂಡ್‌ಹೋಮ್‌ ಬಿ ಸ್ಯಾಂಟ್ನರ್‌ 32
ದಿನೇಶ್‌ ಕಾರ್ತಿಕ್‌ ಸಿ ನೀಶಮ್‌ ಬಿ ಹೆನ್ರಿ 6
ಹಾರ್ದಿಕ್‌ ಪಾಂಡ್ಯ ಸಿ ವಿಲಿಯಮ್ಸನ್‌ ಬಿ ಸ್ಯಾಂಟ್ನರ್‌ 32
ಎಂ. ಎಸ್‌. ಧೋನಿ ರನೌಟ್‌ 50
ರವೀಂದ್ರ ಜಡೇಜ ಸಿ ವಿಲಿಯಮ್ಸನ್‌ ಬಿ ಬೌಲ್ಟ್ 77
ಭುವನೇಶ್ವರ್‌ ಬಿ ಫ‌ರ್ಗ್ಯುಸನ್‌ 0
ಚಹಲ್‌ ಸಿ ಲ್ಯಾಥಮ್‌ ಬಿ ನೀಶಮ್‌ 5
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 0
ಇತರ 16
ಒಟ್ಟು (49.3 ಓವರ್‌ಗಳಲ್ಲಿ ಆಲೌಟ್‌) 221
ವಿಕೆಟ್‌ ಪತನ: 1-4, 2-5, 3-5, 4-24, 5-71, 6-92, 7-208, 8-216, 9-217.
ಬೌಲಿಂಗ್‌: ಟ್ರೆಂಟ್‌ ಬೌಲ್ಟ್ 10-2-42-2
ಮ್ಯಾಟ್‌ ಹೆನ್ರಿ 10-1-37-3
ಲಾಕಿ ಫ‌ರ್ಗ್ಯುಸನ್‌ 10-0-43-1
ಗ್ರ್ಯಾಂಡ್‌ಹೋಮ್‌ 2-0-13-0
ಜೇಮ್ಸ್‌ ನೀಶಮ್‌ 7.3-0-49-1
ಮಿಚೆಲ್‌ ಸ್ಯಾಂಟ್ನರ್‌ 10-2-34-2
ಪಂದ್ಯಶ್ರೇಷ್ಠ: ಮ್ಯಾಟ್‌ ಹೆನ್ರಿ

Advertisement

Udayavani is now on Telegram. Click here to join our channel and stay updated with the latest news.

Next