Advertisement
ನಾಲ್ಕನೇ ದಿನದಾಟಕ್ಕೆ 96 ರನ್ನಿಗೆ 2 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಅಂತಿಮ ದಿನ ಪ್ರಚಂಡ ಬ್ಯಾಟಿಂಗ್ ನಡೆಸಿತು. ಯಾವುದೇ ವಿಕೆಟ್ ಕಳೆದು ಕೊಳ್ಳದೆ 241ರನ್ ಗಳಿಸಿದ ವೇಳೆ ಮಳೆ ಸುರಿದಿದ್ದರಿಂದ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲಾಯಿತು.ಶತಕ ವೈಭವ
ವಿಲಿಯಮ್ಸನ್ ಮತ್ತು ಟೇಲರ್ ಅವರ ಅಜೇಯ ಶತಕ ಅಂತಿಮ ದಿನದ ಆಕರ್ಷಣೆಯಾಗಿತ್ತು. ಇಂಗ್ಲೆಂಡ್ ದಾಳಿಯನ್ನು ಪುಡಿಗಟ್ಟಿದ ಅವರಿಬ್ಬರು ಮುರಿಯದ ಮೂರನೇ ವಿಕೆಟಿಗೆ 213 ರನ್ನುಗಳ ಜತೆಯಾಟ ನೀಡಿದರು. ಮಳೆಯಿಂದಾಗಿ ಇವರಿಬ್ಬರ ಆಟಕ್ಕೆ ಬ್ರೇಕ್ ಸಿಕ್ಕಿತು. ಆಗ 234 ಎಸೆತ ಎದುರಿಸಿದ್ದ ವಿಲಿಯಮ್ಸನ್ 11 ಬೌಂಡರಿ ನೆರವಿನಿಂದ ಅಜೇಯ 104 ರನ್ ಗಳಿಸಿದರೆ ಟೇಲರ್ 11 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 105 ರನ್ ಗಳಿಸಿ ಔಟಾಗದೆ ಉಳಿದರು. ಇದಕ್ಕಾಗಿ 186 ಎಸೆತ ಎದುರಿಸಿದ್ದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲ್ಯಾಂಡ್ ದ್ವಿತೀಯ ಇನ್ನಿಂಗ್ಸ್ 241ಕ್ಕೆ 2 (ವಿಲಿಯಮ್ಸನ್ ಅಜೇಯ 104, ಟೇಲರ್ ಅಜೇಯ 105, ವೋಕ್ಸ್ 12ಕ್ಕೆ 1, ಕರನ್ 56ಕ್ಕೆ 1). ಇಂಗ್ಲೆಂಡ್-476 (ರೂಟ್ 226, ಬರ್ನ್ಸ್ 101, ಪೋಪ್ 75, ವ್ಯಾಗ್ನರ್ 124ಕ್ಕೆ 5, ಸೌಥಿ 90ಕ್ಕೆ 2). ಪಂದ್ಯ ಶ್ರೇಷ್ಠ: ಜೋ ರೂಟ್; ಸರಣಿಶ್ರೇಷ್ಠ: ನೀಲ್ ವ್ಯಾಗ್ನರ್.
ಹ್ಯಾಮಿಲ್ಟನ್ ಟೆಸ್ಟ್‌ನಲ್ಲಿ ಅಮೋಘ ಶತಕ ಸಿಡಿಸಿದ ರಾಸ್ ಟೇಲರ್ ಟೆಸ್ಟ್ ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಪೂರ್ತಿಗೊಳಿಸಿದ ನ್ಯೂಜಿಲ್ಯಾಂಡಿನ ಎರಡನೇ ಆಟಗಾರ ಎಂದೆನಿಸಿಕೊಂಡಿದ್ದಾರೆ. ಸ್ಟೀಫನ್ ಫ್ಲೆಮಿಂಗ್ ಮೊದಲ ಆಟಗಾರ. ಫ್ಲೆಮಿಂಗ್ 189 ಇನ್ನಿಂಗ್ಸ್ ಆಡಿ 7 ಸಾವಿರ ರನ್ ಪೂರ್ತಿಗೊಳಿಸಿದ್ದರು. ಟೇಲರ್ ಈ ಮೈಲುಗಲ್ಲು ಸ್ಥಾಪಿಸಲು 169 ಇನ್ನಿಂಗ್ಸ್ ತೆಗೆದುಕೊಂಡರು.
ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಟೇಲರ್ ಈ ಸಾಧನೆಗೈದ 51ನೇ ಕ್ರಿಕೆಟಿಗರಾಗಿದ್ದಾರೆ. ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ಅತೀವೇಗವಾಗಿ ಈ ಸಾಧನೆಗೈದ ಆಟಗಾರರಾಗಿದ್ದಾರೆ. ಅವರು ಪಾಕಿಸ್ಥಾನ ವಿರುದ್ಧದ ಟೆಸ್ಟ್‌ನಲ್ಲಿ ಈ ಸಾಧನೆ ದಾಖಲಿಸಿದ್ದರು. ಅದು ಅವರ 126ನೇ ಇನ್ನಿಂಗ್ಸ್ ಆಗಿತ್ತು. ಭಾರತದ ವೀರೇಂದ್ರ ಸೆಹವಾಗ್ ಮತ್ತು ಸಚಿನ್ ತೆಂಡುಲ್ಕರ್ ಅನುಕ್ರಮವಾಗಿ 134ನೇ ಮತ್ತು 136ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.