ವೆಲ್ಲಿಂಗ್ಟನ್: ಬ್ಯಾಟಿಂಗ್ ಕುಸಿತ ಅನುಭವಿಸಿದ ನ್ಯೂಜಿಲ್ಯಾಂಡ್ ಮೇಲೆ ಇಂಗ್ಲೆಂಡ್ ಫಾಲೋಆನ್ ಹೇರಿದೆ. ಆದರೆ ಫಾಲೋಆನ್ ಬಳಿಕ ನ್ಯೂಜಿಲ್ಯಾಂಡ್ ಉತ್ತಮ ಹೋರಾಟ ನೀಡಿದ್ದು, ಇಂಗ್ಲೆಂಡ್‌ನ ಲೆಕ್ಕಾಚಾರವನ್ನು ತಲೆಕೆಳಗಾಗಿಸುವ ಸೂಚನೆ ನೀಡಿದೆ. ಇದು ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದ 3ನೇ ದಿನದ ಕತೆ.
ಇಂಗ್ಲೆಂಡ್‌ನ 435 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ನ್ಯೂಜಿಲ್ಯಾಂಡ್ 209ಕ್ಕೆ ಕುಸಿಯಿತು. 226 ರನ್ನುಗಳ ಹಿನ್ನಡೆಗೆ ಸಿಲುಕಿದ ಕಾರಣ ಕಿವೀಸ್‌ಗೆ ಫಾಲೋಆನ್ ಹೇರಲು ಇಂಗ್ಲೆಂಡ್ ನಿರ್ಧರಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಿವೀಸ್ ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಹೋರಾಟ ನಡೆಸಿದ್ದು, 3 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿದೆ. ಕೇವಲ 24 ರನ್ ಹಿನ್ನಡೆಯಲ್ಲಿದೆ.
ಟಾಮ್ ಲ್ಯಾಥಂ (83) ಮತ್ತು ಡೇವನ್ ಕಾನ್ವೇ (61) 52.5 ಓವರ್ ನಿಭಾಯಿಸಿ ಮೊದಲ ವಿಕೆಟಿಗೆ 149 ರನ್ ಪೇರಿಸಿ ನ್ಯೂಜಿಲ್ಯಾಂಡ್ ಹೋರಾಟವನ್ನು ಜಾರಿಯಲ್ಲಿರಿಸಿದರು. ಆದರೆ 18 ರನ್ ಅಂತರದಲ್ಲಿ 3 ವಿಕೆಟ್ ಕೆಡವಿದ ಇಂಗ್ಲೆಂಡ್ ತಿರುಗಿ ಬಿತ್ತು. ಆರಂಭಿಕರಿಬ್ಬರ ಜತೆಗೆ ವಿಲ್ ಯಂಗ್ (8) ಕೂಡ ಪೆವಿಲಿ ಯನ್ ಸೇರಿಕೊಂಡರು. ಕೇನ್ ವಿಲಿಯ ಮ್ಸನ್ 25 ಮತ್ತು ಹೆನ್ರಿ ನಿಕೋಲ್ಸ್ 18 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಒಂದು ವೇಳೆ ನ್ಯೂಜಿಲ್ಯಾಂಡ್ 200 ರನ್ನುಗಳಷ್ಟು ಮುನ್ನಡೆ ಸಾಧಿಸಿದ್ದೇ ಆದರೆ ಇಂಗ್ಲೆಂಡ್‌ಗೆ ಚೇಸಿಂಗ್ ಕಷ್ಟವಾ ಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಫಾಲೋಆನ್ ವಿಧಿಸಿದ ಬೆನ್ ಸ್ಟೋಕ್ಸ್ ನಿರ್ಧಾರವನ್ನು ಇಂಗ್ಲೆಂಡ್‌ನ ಮಾಜಿಗಳನೇಕರು ಟೀಕಿಸಿದ್ದಾರೆ.
ನ್ಯೂಜಿಲ್ಯಾಂಡ್ ದ್ವಿತೀಯ ದಿನದಾ ಟದ ಅಂತ್ಯಕ್ಕೆ 7 ವಿಕೆಟಿಗೆ 138 ರನ್ ಗಳಿಸಿತ್ತು. ನಾಯಕ ಟಿಮ್ ಸೌಥಿ ಅವರ 73 ರನ್ನುಗಳ ಹೋರಾಟದಿಂದ ಮೊತ್ತ ಇನ್ನೂರರ ಗಡಿ ದಾಟಿತು. 9ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದ ಸೌಥಿ ಕೇವಲ 49 ಎಸೆತಗಳಲ್ಲಿ ತಮ್ಮ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಸಿಡಿಸಿದ್ದು 5 ಬೌಂಡರಿ ಹಾಗೂ 6 ಸಿಕ್ಸರ್. ಇಂಗ್ಲೆಂಡ್ ಪರ ಬ್ರಾಡ್ 4, ಆ್ಯಂಡರ್ಸನ್ ಮತ್ತು ಲೀಚ್ ತಲಾ 3 ವಿಕೆಟ್ ಉರುಳಿಸಿದರು.