ನೀವು ನ್ಯೂಜಿಲ್ಯಾಂಡ್ ಹಾಕಿ ಆಟಗಾರರ ಮುಖಗಳನ್ನೊಮ್ಮೆ ಸರಿಯಾಗಿ ನೋಡಿ. ಎಲ್ಲರೂ ಮೀಸೆ ಬಿಟ್ಟಿರುವುದನ್ನು ಕಾಣಬಹುದು!
ಇದೇಕೆ ಹೀಗೆ ಎಂಬುದು ನಿಮ್ಮ ಕುತೂಹಲವಲ್ಲವೇ? ಹೌದು, ಇದು ಪ್ರತೀ ನವಂಬರ್ ತಿಂಗಳಲ್ಲಿ ನ್ಯೂಜಿಲ್ಯಾಂಡಿನಲ್ಲಿ ಆಚರಿಸಲಾಗುವ ಪುರುಷರ ಆರೋಗ್ಯ ಜಾಗೃತಿಯ ಅಭಿಯಾನದ ಒಂದು ಅಂಗ. ಕ್ಯಾನ್ಸರ್, ಆ ತ್ಮಹತ್ಯೆಗೆ ಸಂಬಂಧಿಸಿದಂತೆ ಎಚ್ಚರಿಕೆ ಮೂಡಿಸುವ ಉದ್ದೇಶದಿಂದ ಪುರುಷರು ಮೀಸೆ ಬಿಡುತ್ತಾರೆ. ಇದಕ್ಕೆ ಕ್ರೀಡಾಪಟುಗಳೂ ಹೊರತಲ್ಲ. ಬಳಿಕ ಡಿಸೆಂಬರ್ ಒಂದರಂದು ಸಾಮೂಹಿಕವಾಗಿ ಮೀಸೆ ತೆಗೆಸಿಕೊಳ್ಳುತ್ತಾರೆ!ಪುರುಷರ ಆರೋಗ್ಯ ಜಾಗೃತಿಗೆ ನ್ಯೂಜಿಲ್ಯಾಂಡಿನಲ್ಲಿ “ಮೊವೆಂಬರ್’ ಎಂಬ ಹೆಸರಿದೆ.
ಇದು “ಮೌಸ್ತಾಚೆ’ (ಮೀಸೆ) ಮತ್ತು “ಮೊವೆಂಬರ್’ ತಿಂಗಳ ಜಂಟಿ ಶಬ್ದ. ಕಳೆದ ಕೆಲವು ವರ್ಷಗಳಿಂದ ನ್ಯೂಜಿಲ್ಯಾಂಡಿನಲ್ಲಿ ಇಂಥದೊಂದು ವರ್ಷಾಂತ್ಯದ ಆರೋಗ್ಯ ಅಭಿಯಾನ ಜಾರಿಯಲ್ಲಿದೆ.
ನ್ಯೂಜಿಲ್ಯಾಂಡ್ ಹಾಕಿ ತಂಡದ ನಾಯಕ, ನೀಳಕಾಯದ ಬ್ಲೇರ್ ಟಾರಂಟ್ ಬಹಳ ಖುಷಿಯಿಂದ ತಮ್ಮ ಮೀಸೆ ಬಗ್ಗೆ ಹೇಳಿಕೊಳ್ಳುತ್ತಾರೆ. “ಇದು ಚೆಂದ ಕಾಣುತ್ತದಲ್ಲವೇ?’ ಎಂದು ಕೇಳುತ್ತಾರೆ. ಕಿವೀಸ್ ತಂಡದಲ್ಲಿರುವ ಭಾರತೀಯ ಮೂಲದ ಆಟಗಾರ ಜರೆಡ್ ಪಂಚಿಯ ಕೂಡ ನ್ಯೂಜಿಲ್ಯಾಂಡಿಗರ ಅಭಿಯಾನಕ್ಕೆ ಬೆಂಬಲ ಸೂಚಿಸಿ ಮೀಸೆ ಬಿಟ್ಟಿರುವುದು ವಿಶೇಷ. ಇವರ ಸಹೋದರ, ಕಿವೀಸ್ ತಂಡ ಉಪನಾಯಕನೂ ಆಗಿರುವ ಅರುಣ್ ಪಂಚಿಯ ಕೂಡ ಮೀಸೆಯೊಂದಿಗೆ ಮಿಂಚುತ್ತಿದ್ದಾರೆ.
ಕಳೆದೊಂದು ದಶಕದಿಂದ ಈ ಆರೋಗ್ಯ ಜಾಗೃತಿಯ ಅಂಗವಾಗಿ ವಿಶ್ವದಾದ್ಯಂತ “ಮೋಸ್ಕಾರ್’, “ಇಂಟರ್‌ನ್ಯಾಶನಲ್ ಮ್ಯಾನ್ ಆಫ್ ಮೊವೆಂಬರ್’ ಮೊದಲಾದ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತಿದೆ. ಇದಕ್ಕೆ “ದ ಮೊವೆಂಬರ್ ಫೌಂಡೇಶನ್’ನಿಂದ ಆರ್ಥಿಕ ನೆರವು ಲಭಿಸುತ್ತದೆ.