ಕ್ರೈಸ್ಟ್ ಚರ್ಚ್: ಪಾಕಿಸ್ಥಾನವನ್ನು ಇನ್ನಿಂಗ್ಸ್ ಹಾಗೂ 176 ರನ್ನುಗಳಿಂದ ಬಗ್ಗುಬಡಿದ ನ್ಯೂಜಿಲ್ಯಾಂಡ್, ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಜತೆಗೆ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಮ್ ರ್‍ಯಾಂಕಿಂಗ್‌ನಲ್ಲಿ ನಂ.1 ಗೌರವಕ್ಕೆ ಪಾತ್ರವಾಗಿದೆ.
362 ರನ್ನುಗಳ ಬೃಹತ್ ಹಿನ್ನಡೆಗೆ ಸಿಲುಕಿದ ಪಾಕಿಸ್ಥಾನ, 4ನೇ ದಿನವಾದ ಬುಧವಾರ ಕೈಲ್ ಜಾಮೀಸನ್ ದಾಳಿಗೆ ತತ್ತರಿಸಿ 186ಕ್ಕೆ ಆಲೌಟ್ ಆಯಿತು. ಜಾಮೀಸನ್ 48 ರನ್ನಿತ್ತು 6 ವಿಕೆಟ್ ಉಡಾಯಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲೂ ಘಾತಕವಾಗಿ ಪರಿಣಮಿಸಿದ ಜಾಮೀಸನ್ 69ಕ್ಕೆ 5 ವಿಕೆಟ್ ಉಡಾಯಿಸಿದ್ದರು.
ನಂ.1 ಟೆಸ್ಟ್ ತಂಡ ಆಸ್ಟ್ರೇಲಿಯವನ್ನು ಹಿಂದಿಕ್ಕುವ ಮೂಲಕ ನ್ಯೂಜಿಲ್ಯಾಂಡ್ ಟೆಸ್ಟ್ ರ್‍ಯಾಂಕಿಂಗ್ ಯಾದಿಯ ಅಗ್ರಸ್ಥಾನಕ್ಕೆ ನೆಗೆಯಿತು. ನ್ಯೂಜಿಲ್ಯಾಂಡ್ 118, ಆಸ್ಟ್ರೇಲಿಯ 116 ಅಂಕ ಹೊಂದಿದೆ.
ಇದನ್ನೂ ಓದಿ:ಮೂರನೇ ಟೆಸ್ಟ್: ಸಿಡ್ನಿಯಲ್ಲಿ ಮಳೆ ಮತ್ತು ಭಾರತದ ಶುಭಾರಂಭ!
114 ಅಂಕ ಪಡೆದಿರುವ ಭಾರತ ತೃತೀಯ ಸ್ಥಾನದಲ್ಲಿ ಮುಂದುವರಿದಿದೆ. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿಲ್ಯಾಂಡಿನ ಗೆಲುವಿನ ಪ್ರತಿಶತ ಅಂಕ 0.70ಕ್ಕೆ ಏರಿದ್ದು, ಅದು ತೃತೀಯ ಸ್ಥಾನಿಯಾಗಿದೆ. ಆಸ್ಟ್ರೇಲಿಯ ಮೊದಲ (0.767), ಭಾರತ ದ್ವಿತೀಯ (0.722) ಸ್ಥಾನದಲ್ಲಿದೆ.