Advertisement

ಐಪಿಎಲ್‌ ಆತಿಥ್ಯಕ್ಕೆ ಒಲವು ತೋರಿದ ನ್ಯೂಜಿಲ್ಯಾಂಡ್‌

12:57 AM Jul 07, 2020 | Sriram |

ಹೊಸದಿಲ್ಲಿ: ಈ ವರ್ಷದ ಐಪಿಎಲ್‌ ಭವಿಷ್ಯ ತೂಗುಯ್ಯಾ ಲೆಯಲ್ಲಿದೆ. ಅಕಸ್ಮಾತ್‌ ಭಾರತದಲ್ಲಿ ನಡೆಯದೇ ಹೋದರೆ ಇದನ್ನು ವಿದೇಶಗಳಲ್ಲಾದರೂ ನಡೆಸಬೇಕು ಎನ್ನುವ ಜಿದ್ದಿಗೆ ಬಿದ್ದಿದೆ ಬಿಸಿಸಿಐ. ಈಗಾಗಲೇ ಯುಎಇ ಮತ್ತು ಶ್ರೀಲಂಕಾ ಹೆಸರು ಅಗ್ರಪಂಕ್ತಿಯಲ್ಲಿ ಕಾಣಿಸಿಕೊಂಡಿದೆ. ಇದೀಗ ನ್ಯೂಜಿಲ್ಯಾಂಡ್‌ ಕೂಡ ಐಪಿಎಲ್‌ ಆತಿಥ್ಯದ ಉಮೇದು ತೋರಿದೆ ಎಂದು ತಿಳಿದು ಬಂದಿದೆ.

Advertisement

“ಐಪಿಎಲ್‌ ಪಂದ್ಯಾವಳಿಯನ್ನು ಭಾರತದಲ್ಲೇ ನಡೆಸುವುದಕ್ಕೆ ನಮ್ಮ ಮೊದಲ ಆದ್ಯತೆ. ಇದು ಸುರಕ್ಷಿತವಲ್ಲ ಎಂದಾದರೆ ನಾವು ವಿದೇಶಗಳ ಆಯ್ಕೆಯನ್ನು ಪರಿ ಗಣಿಸಬೇಕಾಗುತ್ತದೆ. ಯುಎಇ ಮತ್ತು ಶ್ರೀಲಂಕಾ ಈಗಾಗಲೇ ಮುಂದೆ ಬಂದಿವೆ. ಈಗ ನ್ಯೂಜಿಲ್ಯಾಂಡ್‌ ಕೂಡ ಐಪಿಎಲ್‌ ನಡೆಸಲು ಆಸಕ್ತಿ ತೋರಿದೆ’ ಎಂದು ಹೆಸರು ಹೇಳಲಿಚ್ಛಿಸದ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

“ನಾವು ಪ್ರಸಾರಕರು, ಫ್ರಾಂಚೈಸಿಗಳು ಹಾಗೂ ತಂಡಗಳ ಜತೆ ಸೇರಿ ಮಾತುಕತೆ ನಡೆಸಿ ತೀರ್ಮಾನಕ್ಕೆ ಬರಬೇಕಿದೆ. ನಮಗೆ ಆಟಗಾರರ ಸುರಕ್ಷತೆ ಮುಖ್ಯ. ಇದರೊಂದಿಗೆ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದು ಅವರು ಹೇಳಿದರು.

ಏಳೂವರೆ ಗಂಟೆ ಅಂತರ!
ಐಪಿಎಲ್‌ ವಿದೇಶದಲ್ಲಿ ನಡೆಯುವು ದಾದರೆ ಆಗ ಮೊದಲ ಆಯ್ಕೆ ಯುಎಇ. ಮಿತವ್ಯಯದ ಲೆಕ್ಕಾಚಾರದಲ್ಲಿ ಶ್ರೀಲಂಕಾ ಉತ್ತಮ ಆಯ್ಕೆ. ಆದರೆ ” ಮುಕ್ತ’ ನ್ಯೂಜಿಲ್ಯಾಂಡ್‌ ಮತ್ತು ಭಾರತದ ನಡುವೆ ಏಳೂವರೆ ಗಂಟೆಗಳ ದೊಡ್ಡ ಅಂತರವಿದೆ. ಭಾರತದ ಸಂಜೆ ಹಾಗೂ ರಾತ್ರಿಯ ಕಾಲಮಾನಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಅಲ್ಲಿ ಪಂದ್ಯಗಳನ್ನು ನಡೆ ಸುವುದು ಸಾಧ್ಯವಿಲ್ಲದ ಮಾತು.

ನ್ಯೂಜಿಲ್ಯಾಂಡ್‌ನ‌ಲ್ಲಿ ಪ್ರಯಾಣದ ಸಮಸ್ಯೆ ಇದೆ. ಹ್ಯಾಮಿಲ್ಟನ್‌-ಆಕ್ಲೆಂಡ್‌ ನಡುವೆ ರಸ್ತೆ ಪ್ರಯಾಣ ಮಾಡಬಹುದು. ಆದರೆ ವೆಲ್ಲಿಂಗ್ಟನ್‌, ಕ್ರೈಸ್ಟ್‌ಚರ್ಚ್‌, ನೇಪಿಯರ್‌, ಡ್ಯುನೆಡಿನ್‌ ಮೊದಲಾದೆಡೆ ವಿಮಾನ ಪ್ರಯಾಣ ಅನಿವಾರ್ಯವಾಗಲಿದೆ. ಇದರಿಂದ ವೆಚ್ಚ ಜಾಸ್ತಿಯಾಗಲಿದೆ.

Advertisement

ಇಂದಿನ ಕಾರಣವೇ ಬೇರೆ…
ಐಪಿಎಲ್‌ ವಿದೇಶದಲ್ಲಿ ನಡೆಯುವುದು ಹೊಸತೇನಲ್ಲ. 2009ರಲ್ಲಿ ಇಡೀ ಕೂಟವನ್ನು ದಕ್ಷಿಣ ಆಫ್ರಿಕಾ ಆಯೋಜಿಸಿತ್ತು. 2014ರಲ್ಲಿ ಒಂದು ಹಂತದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಇದಕ್ಕೆ ಕಾರಣ, ದೇಶದ ಮಹಾಚುನಾವಣೆ.

ಆದರೆ ಈಗಿನ ಕಾರಣ ಕೋವಿಡ್ . ಈ ಮಹಾಮಾರಿ ವಿಶ್ವವನ್ನೇ ವ್ಯಾಪಿಸಿದೆ. ಭಾರತವಂತೂ ಪದಕಪಟ್ಟಿಯಲ್ಲಿ ಮೇಲೇರುವಂತೆ ಸೋಂಕಿತರ ಯಾದಿಯಲ್ಲಿ 3ನೇ ಸ್ಥಾನಕ್ಕೆ ನೆಗೆದಿದೆ. ಇಂಥ ಸ್ಥಿತಿಯಲ್ಲಿ ಇಲ್ಲಿ ಐಪಿಎಲ್‌ ನಡೆಸುವುದು ಕಷ್ಟ.

Advertisement

Udayavani is now on Telegram. Click here to join our channel and stay updated with the latest news.

Next