ಕ್ರೈಸ್ಟ್‌ಚರ್ಚ್: ಆತಿಥೇಯ ನ್ಯೂಜಿಲ್ಯಾಂಡ್ “ಎ’ ಎದುರಿನ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ “ಎ’ ಸೋಲಿನತ್ತ ಮುಖ ಮಾಡಿದೆ. 343 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ವಿಹಾರಿ ಪಡೆ 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 127 ರನ್ ಮಾಡಿದೆ.
ರವಿವಾರ ಪಂದ್ಯದ ಅಂತಿಮ ದಿನವಾಗಿದ್ದು, ಇನ್ನಿಂಗ್ಸ್ ಸೋಲಿನಿಂದ ಪಾರಾಗಲು ಭಾರತವಿನ್ನೂ 216 ರನ್ ಗಳಿಸಬೇಕಿದೆ. ಕೆಲವು ವಿಕೆಟ್‌ಗಳಾನ್ನದರೂ ಉಳಿಸಿಕೊಂಡು ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅವಕಾಶ ಇದೆಯಾದರೂ ಇದಕ್ಕೆ ಭಾರೀ ಹೋರಾಟವನ್ನೇ ನಡೆಸಬೇಕಿದೆ. ಭಾರತದ 216ಕ್ಕೆ ಉತ್ತರವಾಗಿ ಕಿವೀಸ್ 7 ವಿಕೆಟಿಗೆ 562 ರನ್ ಪೇರಿಸಿ ಡಿಕ್ಲೇರ್ ಮಾಡಿತು.
ಟೀಮ್ ಇಂಡಿಯಾದ ಟೆಸ್ಟ್ ಆರಂಭಕಾರ ಮಾಯಾಂಕ್ ಅಗರ್ವಾಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಸೊನ್ನೆ ಸುತ್ತಿದ್ದು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು. ಅಗರ್ವಾಲ್ ತಾನೆದುರಿಸಿದ ಮೊದಲ ಎಸೆತದಲ್ಲೇ ಔಟಾಗುವ ಸಂಕಟಕ್ಕೆ ಸಿಲುಕಿದರು. ಮತ್ತೋರ್ವ ಓಪನರ್ ಅಭಿಮನ್ಯು ಈಶ್ವರನ್ 26 ರನ್ ಮಾಡಿ ತೆರಳಿದರು. 3ನೇ ವಿಕೆಟಿಗೆ ಜತೆಗೂಡಿರುವ ಪ್ರಿಯಾಂಕ್ ಪಾಂಚಾಲ್ (ಬ್ಯಾಟಿಂಗ್ 67) ಮತ್ತು ಶುಭಮನ್ ಗಿಲ್ (ಬ್ಯಾಟಿಂಗ್ 33) ಹೋರಾಟವೊಂದನ್ನು ಜಾರಿಯಲ್ಲಿರಿಸಿದ್ದಾರೆ.
ಇದಕ್ಕೂ ಮುನ್ನ ಅಜೇಯ ಶತಕ ಬಾರಿಸಿದ್ದ ಆತಿಥೇಯ ತಂಡದ ಡೇನ್ ಕ್ಲೀವರ್ ನಾಲ್ಕೇ ರನ್ ಕೊರತೆಯಿಂದ ದ್ವಿಶತಕ ತಪ್ಪಿಸಿಕೊಂಡರು (344 ಎಸೆತ, 20 ಬೌಂಡರಿ, 1 ಸಿಕ್ಸರ್). ಮಾರ್ಕ್ ಚಾಪ್‌ಮನ್ 114 ರನ್ ಬಾರಿಸಿದರು (245 ಎಸೆತ, 11 ಬೌಂಡರಿ).
ಸಂಕ್ಷಿಪ್ತ ಸ್ಕೋರ್: ಭಾರತ “ಎ’-216 ಮತ್ತು 2 ವಿಕೆಟಿಗೆ 127. ನ್ಯೂಜಿಲ್ಯಾಂಡ್ “ಎ’-7 ವಿಕೆಟಿಗೆ 562 ಡಿಕ್ಲೇರ್.