Advertisement

ಕಿವೀಸ್‌-ಆಸೀಸ್‌ ಏಕದಿನ ಬಲ ಪ್ರದರ್ಶನ

03:45 AM Jan 30, 2017 | Team Udayavani |

ಆಕ್ಲೆಂಡ್‌: 12 ತಿಂಗಳ ಅವಧಿಯಲ್ಲಿ 3ನೇ ಬಾರಿಗೆ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ತಂಡಗಳು ಚಾಪೆಲ್‌-ಹ್ಯಾಡ್ಲಿ ಏಕದಿನ ಸರಣಿಗೆ ಅಣಿಯಾಗಿವೆ. ಈ ಸಲದ ಆತಿಥ್ಯ ನ್ಯೂಜಿಲ್ಯಾಂಡಿನದ್ದು. ಸೋಮವಾರ ಆಕ್ಲೆಂಡ್‌ನ‌ಲ್ಲಿ ಮೊದಲ ಪಂದ್ಯ ನಡೆಯಲಿದೆ.

Advertisement

ಕಳೆದ ಫೆಬ್ರವರಿಯಲ್ಲಿ ಆತಿಥೇಯ ನ್ಯೂಜಿಲ್ಯಾಂಡ್‌ ಸರಣಿ ಜಯಿಸಿತು. ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯ ತನ್ನದೇ ನೆಲದಲ್ಲಿ 3-0 ಜಯಭೇರಿ ಮೊಳಗಿಸಿತು. ಈ ಬಾರಿ ಕಿವೀಸ್‌ ನೆಚ್ಚಿನ ತಂಡವಾಗಿ ಗುರುತಿಸಲ್ಪಟ್ಟಿದೆ. ಕಾರಣ, ತವರಿನಲ್ಲಿ ಬ್ಲ್ಯಾಕ್‌ ಕ್ಯಾಪ್ಸ್‌ ಯಾವತ್ತೂ ಬಲಿಷ್ಠ. ಇನ್ನೊಂದೆಡೆ ಆಸ್ಟ್ರೇಲಿಯ ತಂಡ ವಾರ್ನರ್‌, ಸ್ಮಿತ್‌ ಮೊದಲಾದ ಸ್ಟಾರ್‌ ಆಟಗಾರರ ಗೈರಲ್ಲಿ ಬಂದಿಳಿದಿದೆ.

ನಾಯಕ ಸ್ಮಿತ್‌, ಉಪನಾಯಕ ವಾರ್ನರ್‌ ಇಬ್ಬರೂ ಹೊರಗುಳಿದಿರುವುದರಿಂದ ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್‌ ಮೊದಲ ಸಲ ಆಸ್ಟ್ರೇಲಿಯ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ. ವೇಡ್‌ ಕಾಂಗರೂ ಕಪ್ತಾನನಾಗುತ್ತಿರುವ 3ನೇ ಕೀಪರ್‌. ಇಯಾನ್‌ ಹೀಲಿ, ಆ್ಯಡಂ ಗಿಲ್‌ಕ್ರಿಸ್ಟ್‌ ಉಳಿದಿಬ್ಬರು.

ವಾರ್ನರ್‌ ಗೈರಲ್ಲಿ ಟ್ರ್ಯಾವಿಸ್‌ ಹೆಡ್‌ ಜತೆ ಆರಂಭಿಕನಾಗಿ ಆರನ್‌ ಫಿಂಚ್‌ ಕಾಣಿಸಿಕೊಳ್ಳಬಹುದು. ಶಾನ್‌ ಮಾರ್ಷ್‌ ಕೂಡ ರೇಸ್‌ನಲ್ಲಿದ್ದು, ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಮುಂಬರುವ ಭಾರತ ಪ್ರವಾಸದ ಹಿನ್ನೆಲೆಯಲ್ಲಿ ಕಾಂಗರೂ ದಂಡಿಗೆ ಇದೊಂದು ಅಭ್ಯಾಸ ಸರಣಿ ಎಂದರೂ ತಪ್ಪಿಲ್ಲ.

ಟಾಮ್‌ ಲ್ಯಾಥಂ ಕೀಪರ್‌
ಇತ್ತ ನ್ಯೂಜಿಲ್ಯಾಂಡಿನ ವಿಕೆಟ್‌ ಕೀಪರ್‌ ಲ್ಯೂಕ್‌ ರಾಂಚಿ ಕೂಡ ಗಾಯಾಳಾಗಿ ಹೊರಗುಳಿದಿದ್ದಾರೆ. ಬದಲಿ ಕೀಪರ್‌ ಆಗಿ ಟಾಮ್‌ ಬ್ಲಿಂಡೆಲ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಬ್ಲಿಂಡೆಲ್‌ ಈವರೆಗೆ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಆಕ್ಲೆಂಡ್‌ನ‌ಲ್ಲಿ ಅವರಿಗೆ ಇಂಟರ್‌ನ್ಯಾಶನಲ್‌ ಕ್ಯಾಪ್‌ ಧರಿಸುವ ಯೋಗವಿಲ್ಲ. ಕಾರಣ, ಈಗಾಗಲೇ ಆರಂಭಕಾರ ಟಾಮ್‌ ಲ್ಯಾಥಂ ಅವರನ್ನು ಕೀಪಿಂಗ್‌ ಹುದ್ದೆಗೆ ನೇಮಿಸಲಾಗಿದೆ. ಇದಕ್ಕೆ ಅಭ್ಯಾಸವೆಂಬಂತೆ, ಶನಿವಾರದ “ಫೋರ್ಡ್‌ ಟ್ರೋಫಿ’ ಪಂದ್ಯದಲ್ಲಿ ಲ್ಯಾಥಂ 2 ಸ್ಟಂಪಿಂಗ್‌ ನಡೆಸಿ ಕೀಪಿಂಗ್‌ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

Advertisement

ಟಾಮ್‌ ಲ್ಯಾಥಂ ಇದಕ್ಕೂ ಮುನ್ನ 3 ಏಕದಿನ ಹಾಗೂ 4 ಟಿ-20 ಪಂದ್ಯಗಳಲ್ಲಿ ಕೀಪಿಂಗ್‌ ನಡೆಸಿದ್ದರು. ಆದರೆ 2013ರ ಬಳಿಕ ಈ ಹುದ್ದೆ ನಿಭಾಯಿಸಿಲ್ಲ.

ಕಿವೀಸ್‌ ಕಪ್ತಾನ ಕೇನ್‌ ವಿಲಿಯಮ್ಸನ್‌ ಉತ್ತಮ ಫಾರ್ಮ್ನಲ್ಲಿದ್ದಾರೆ. ಹಾಗೆಯೇ ಅನುಭವಿ ರಾಸ್‌ ಟಯ್ಲರ್‌ ತಂಡಕ್ಕೆ ಮರಳಿದ್ದಾರೆ.

ಆಕ್ಲೆಂಡ್‌ನ‌ಲ್ಲಿ ಆಡಲಾದ ಕಳೆದ 4 ಪಂದ್ಯಗಳನ್ನೂ ನ್ಯೂಜಿಲ್ಯಾಂಡ್‌ ಗೆದ್ದಿದೆ. ಇದರಲ್ಲಿ 2 ಜಯ ಆಸ್ಟ್ರೇಲಿಯ ವಿರುದ್ಧ ದಾಖಲಾಗಿದೆ. ಸರಣಿಯ ಉಳಿದೆರಡು ಪಂದ್ಯಗಳು ನೇಪಿಯರ್‌ (ಫೆ. 2) ಮತ್ತು ಹ್ಯಾಮಿಲ್ಟನ್‌ನಲ್ಲಿ (ಫೆ. 5) ನಡೆಯಲಿವೆ. ನೇಪಿಯರ್‌ ಪಂದ್ಯ ಮಾತ್ರ ಡೇ-ನೈಟ್‌ ಆಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next