ನವದೆಹಲಿ: ನ್ಯೂಜಿಲ್ಯಾಂಡ್ ತಂಡದ ಖ್ಯಾತ ಆಲ್ ರೌಂಡರ್ ಆಟಗಾರ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಬುಧವಾರ (ಆ.31 ರಂದು) ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ನಿವೃತ್ತಿ ವಿಷಯವನ್ನು ನ್ಯೂಜಿಲ್ಯಾಂಡ್ ನ ಆಪೆಕ್ಸ್ ಕ್ರಿಕೆಟ್ ಬೋರ್ಡ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
2012 ರಲ್ಲಿ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡಕ್ಕೆ ಪಾದರ್ಪಣೆ ಮಾಡಿದ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ,ಒಟ್ಟು 29 ಟೆಸ್ಟ್ ಮ್ಯಾಚ್ ಗಳಲ್ಲಿ ಸರಾಸರಿ 38.70 ರಂತೆ 1432 ರನ್ ಗಳನ್ನು ಗಳಿಸಿದ್ದಾರೆ. ಇದರಲ್ಲಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಸಿದ ಎರಡು ಶತಕಗಳು ಸೇರಿವೆ. ಇದಲ್ಲದೆ 45 ಏಕದಿನ ಹಾಗೂ 41 ಟಿ-20 ಪಂದ್ಯವನ್ನು ಅವರು ಆಡಿದ್ದಾರೆ. ಐಪಿಎಲ್ ನಲ್ಲಿ 25 ಪಂದ್ಯಗಳನ್ನು ಆಡಿದ್ದಾರೆ.
ಆಲ್ ರೌಂಡರ್ ಆಗಿರುವ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಟೆಸ್ಟ್ ನಲ್ಲಿ 49 ವಿಕೆಟ್, ಏಕದಿನದಲ್ಲಿ 30 ವಿಕೆಟ್ ಹಾಗೂ ಟಿ-20 ಯಲ್ಲಿ 12 ವಿಕೆಟ್ ಗಳನ್ನು ಪಡೆದಿದ್ದಾರೆ.
36 ವರ್ಷದ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ತನ್ನ ನಿವೃತ್ತಿಯ ಪತ್ರದಲ್ಲಿ ನಾನು ದಿನ ಹೋಗುವಂತೆ ಚಿಕ್ಕವನಾಗುತ್ತಿಲ್ಲ ಎನ್ನುವುದನ್ನು ಒಪ್ಪುತ್ತೇನೆ. ಗಾಯಗಳೊಂದಿಗೆ ತರಬೇತಿ ಕಠಿಣವಾಗುತ್ತಿದೆ. ನನಗೆ ಬೆಳೆಯುತ್ತಿರುವ ಕುಟುಂಬವಿದೆ. ಕ್ರಿಕೆಟ್ ನಂತರ ನನ್ನ ಮುಂದಿನ ದಿನಗಳು ಹೇಗಿರುತ್ತದೆ ಎನ್ನುವುದನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದೆಲ್ಲವೂ ನನ್ನ ಮನದಲ್ಲಿ ಕೆಲ ದಿನಗಳಿಂದ ಕಾಡುತ್ತಿದೆ ಎಂದಿದ್ದಾರೆ.
2012 ರಲ್ಲಿ ಆರಂಭವಾದ ನನ್ನ ಕ್ರಿಕೆಟ್ ವೃತ್ತಿಯಲ್ಲಿ ನ್ಯೂಜಿಲ್ಯಾಂಡ್ ಪರ ಆಡಲು ಸಾಕಷ್ಟು ಅವಕಾಶ ಸಿಕ್ಕಿದೆ. ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ಇದನ್ನು ಕೊನೆಗೊಳಿಸಲು ಇದು ಸೂಕ್ತ ಸಮಯವೆನ್ನಿಸುತ್ತದೆ ಎಂದಿದ್ದಾರೆ.