ಸಾಹಿತ್ಯ, ಸಂಸ್ಕೃತಿ, ಶಾಸ್ತ್ರದ ದೃಷ್ಟಿಯಿಂದ ಕನ್ನಡ ಪ್ರಪಂಚದ ಮುಂದುವರಿದ ಭಾಷೆಗಳಲ್ಲಿ ಒಂದಾಗಿದೆ. ಬೇರೆ ಭಾಷೆಗಳಿಗೆ ಇದನ್ನು ಹೋಲಿಕೆ ಮಾಡಿದರೆ ಅದು ಯಾವ ಭಾಷೆಗಿಂತಲೂ ಕಡಿಮೆ ಏನಿಲ್ಲ. ಆದರೆ ಈ ಬಗ್ಗೆ ಜನರಿಗೆ ತಿಳಿದಿಲ್ಲ. ಹೀಗಾಗಿ ಅದನ್ನು ಪ್ರಪಂಚಕ್ಕೆ ತಿಳಿಸುವುದು ಮುಖ್ಯ. ಹೀಗಾಗಿ ಕನ್ನಡ ಭಾಷೆಯ ಕೃತಿಗಳು ಬೇರೆ ಭಾಷೆಗಳಿಗೆ ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್‌ಗೆ ಅನುವಾದಗೊಳ್ಳಬೇಕಿದೆ ಎಂದು ಕನ್ನಡ ಭಾಷಾ ವಿದ್ವಾಂಸ ಡಾ| ಶ್ರೀಧರ್ ಹೇಳಿದರು.
ಕನ್ನಡ ಅಕಾಡೆಮಿ ಸಹಯೋಗದಲ್ಲಿ ನ್ಯೂಯಾರ್ಕ್ ಕನ್ನಡ ಕೂಟದಿಂದ ಆರಂಭಿಸಿದ ಕನ್ನಡ ಶಾಲೆ ಉದ್ಘಾಟನೆ ಸಮಾರಂಭ ಫೆ. 27ರಂದು ವರ್ಚುವಲ್ ಮೂಲಕ ನಡೆಯಿತು. ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಅನ್ವಿ ಭುವನಂತಾಯ ವಯೋಲಿನ್ ಮೂಲಕ ಹಚ್ಚೇವು ಕನ್ನಡದ ದೀಪ ಹಾಡನ್ನು ನುಡಿಸಿದರು. ಪವಿತ್ರಾ ಅವರ ಗಣೇಶನ ಸ್ತುತಿಯಿಂದ ಕಾರ್ಯಕ್ರಮ ಆರಂಭಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ| ಶ್ರೀಧರ್ ಅವರು, ಕನ್ನಡ ಕಲಿ, ಕನ್ನಡ ಅಕಾಡೆಮಿ ಮೂಲಕ ಪ್ರಪಂಚದಾದ್ಯಂತ ಎರಡನೇ ಭಾಷೆಯಾಗಿ ಕನ್ನಡವನ್ನು ಕಲಿಸಲು ಶ್ರಮಿಸುತ್ತಿರುವ ಶಿವಗೌಡರ್ ಮತ್ತು ಅವರ ತಂಡದವರಿಗೆ ಅಭಿನಂದನೆ ಸಲ್ಲಿಸಿದರು. ಕನ್ನಡ ಭಾಷೆ ಕಲಿಸುವುದು ಬಹಳ ಮುಖ್ಯ ಎಂದ ಅವರು ಕನ್ನಡವನ್ನು ಹೇಗೆ ಪರಿಣಾಮಕಾರಿಯಾಗಿ ಕಲಿಸಬಹುದು ಎಂಬುದನ್ನು ವಿವರಿಸಿದರು.
ಲೇಖಕ, ಕವಿ ಡಾ| ಬಾ.ರ. ಸುರೇಂದ್ರ ಅವರು ಮಾತನಾಡಿ, ನವಯುಗದ ಪೀಳಿಗೆ ಕನ್ನಡವನ್ನು ಪ್ರಪಂಚದಾದ್ಯಂತ ವಿಸ್ತರಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ಕನ್ನಡವನ್ನು ಕಲಿಸಿಕೊಡುವಲ್ಲಿ, ಪಸರಿಸುವಲ್ಲಿ ಕನ್ನಡ ಅಕಾಡೆಮಿ ಪಾತ್ರ ಬಹಳ ಹಿರಿದು ಎಂದು ಹೇಳಿ ನ್ಯೂಯಾರ್ಕ್‌ನಲ್ಲಿ ಕನ್ನಡ ಕಲಿ ಆರಂಭವಾದ ಹಿನ್ನೆಲೆಯನ್ನು ವಿವರಿಸಿ, ಕನ್ನಡದ ಉತ್ಸಾಹ ಎಂದೂ ಕುಂದದೆ, ಮುಗಿಲೆತ್ತರಕ್ಕೆ ಏರಿ, ಅಮೆರಿಕದ ಎಲ್ಲ ಶಾಲೆಗಳಲ್ಲೂ ಕನ್ನಡ ಕಲಿಕೆ ಆರಂಭವಾಗಲಿ ಎಂದರು.
ಸಮಾಜ ಸೇವೆ ವಿಭಾಗದಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ| ಸುನೀತಾ ನಂದಶೇಖರ್ ಮಾತನಾಡಿ, ಕನ್ನಡ ಕಲಿ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶುಭ ಸಂದೇಶ ಕಳುಹಿಸಿಕೊಟ್ಟ ಪ್ರೊ| ಕೃಷ್ಣೇ ಗೌಡ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ವೀಡಿಯೋ ತುಣುಕು ಪ್ರಸಾರ ಮಾಡಲಾಯಿತು.
ಅಮೆರಿಕದ ಕನ್ನಡ ಅಕಾಡೆಮಿಯ ನವೀನ್ ಮಲ್ಲಿಕಾರ್ಜುನಯ್ಯ, ಅರುಣ್ ಸಂಪತ್, ಸಂಧ್ಯಾ ಸೂರ್ಯಪ್ರಕಾಶ್, ಶಶಿ ಬಸವರಾಜ್, ಶಿವ ಗೌಡರ್ ಅವರು ಕನ್ನಡ ಅಕಾಡೆಮಿ ಬೆಳೆದು ಬಂದ ರೀತಿ ಮತ್ತು ಅಮೆರಿಕದಲ್ಲಿ ಕನ್ನಡ ಭಾಷೆ ಕಲಿಸಲು ಪಟ್ಟ ಶ್ರಮದ ಕುರಿತು ವಿವರಿಸಿದರು.
ನ್ಯೂಯಾರ್ಕ್ ಕನ್ನಡ ಕೂಟದ ಮಾಜಿ ಅಧ್ಯಕ್ಷರಾದ ಶಿವಕುಮಾರ್ ಮಾತನಾಡಿ, ಕಾರ್ಯಕ್ರಮಕ್ಕೆ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಕನ್ನಡ ಕಲಿ ಶಾಲೆಯ ಪ್ರಾಂಶುಪಾಲರಾದ ವೀಣಾ ಮಹೇಶ್ ಮಾತನಾಡಿ, ಶಾಲೆಯ ಚಟುವಟಿಕೆಗಳ ಬಗ್ಗೆ ವಿವರಿಸಿ, ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳು ಕನ್ನಡ ನಾಡುನುಡಿಯನ್ನು ವರ್ಣಿಸುವ, ಭಕ್ತಿಗೀತೆ ಕನ್ನಡ ಹಾಡುಗಳನ್ನು ಹಾಡಿದರು. ಚೈತ್ರಾ ಆನಂದ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಗಿರೀಶ್ ಅವರು ಧನ್ಯವಾದ ಸಲ್ಲಿಸಿದರು.