Advertisement

ಅಮೆರಿಕ: ಶಾರ್ಕ್‌ ದಾಳಿ ಮಂಗಳೂರು ಮೂಲದ ಮಹಿಳೆ ಸಾವು

11:28 AM Dec 04, 2017 | Team Udayavani |

ಮಂಗಳೂರು: ಮಂಗಳೂರು ಮೂಲದ ರೊಹಿನಾ ಭಂಡಾರಿ (49) ಅಮೆರಿಕದ ಕೋಸ್ಟರಿಕಾ ದ್ವೀಪದಲ್ಲಿ  ಟೈಗರ್‌ ಶಾರ್ಕ್‌ ದಾಳಿಯಲ್ಲಿ  ಮೃತಪಟ್ಟ ಘಟನೆ  ಶನಿವಾರ ಸಂಭವಿಸಿದೆ. ಅಮೆರಿಕದ ಮ್ಯಾನ್‌ಹಟನ್‌ನಲ್ಲಿ  ಫೈನಾನ್ಸ್‌ -ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ ಪ್ರೊಫೆಶನಲ್‌ ಆಗಿದ್ದ ರೊಹಿನಾ ಪೆಸಿಫಿಕ್‌ ಸಾಗರದ ಕೋಸ್ಟರಿಕಾ ದ್ವೀಪಕ್ಕೆ  ತಂಡದೊಂದಿಗೆ ವಿಹಾರಕ್ಕೆ ತೆರಳಿದ ಸಂದರ್ಭ  ಈ ಘಟನೆ ಸಂಭವಿಸಿದೆ.

Advertisement

 ಕೋಸ್ಟರಿಕಾ ದ್ವೀಪ ಪ್ರದೇಶದಲ್ಲಿ  ಕೆಲವು ಸಮಯದ ಹಿಂದೆ  2 ಗಂಡು ಹಾಗೂ 1 ಹೆಣ್ಣು ಟೈಗರ್‌ ಶಾರ್ಕ್‌ಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ  ಶಾರ್ಕ್‌ಗಳು  ಕಂಡುಬಂದಿದ್ದ  ಪ್ರದೇಶದಲ್ಲಿ  ಮಾರ್ಕ್‌ ಮಾಡಿ ಅಲ್ಲಿ  ಸ್ಕೂಬಾ ಡೈವಿಂಗ್‌ ಅವಕಾಶ  ನಿರ್ಬಂಧಿಸಲಾಗಿತ್ತು. ಆ ಪ್ರದೇಶದಲ್ಲಿ  ಈ ವರೆಗೆ ಶಾರ್ಕ್‌ದಾಳಿಯ ಘಟನೆ ನಡೆದಿರಲಿಲ್ಲ  ಎನ್ನಲಾಗಿದೆ. 

ರೊಹಿನಾ ಭಂಡಾರಿ ಅವರು  ಮೂಲತಃ  ಕೋಟೆಕಾರಿನವರಾದ , ಚೆನ್ನೈಯಲ್ಲಿ  ಪೊಲೀಸ್‌ ಅಧಿಕಾರಿಯಾಗಿದ್ದ  ಬಾಲಕೃಷ್ಣ ಶೆಟ್ಟಿ  ಅವರ ಮೊಮ್ಮಗಳು. ಪ್ರಸ್ತುತ ರೊಹಿನಾ ಅವರ ಕುಟುಂಬದವರು ಮುಂಬಯಿ ಹಾಗೂ ಅಮೆರಿಕದಲ್ಲಿ  ನೆಲೆಸಿದ್ದಾರೆ. ರೊಹಿನಾ ಭಂಡಾರಿಯವರು ಜಾರ್ಜ್‌ ವಾಷಿಂಗ್ಟನ್‌ ಯೂನಿವರ್ಸಿಟಿಯಲ್ಲಿ ಮಾಸ್ಟರ್‌ ಆಫ್‌ ಸೈನ್ಸ್‌ ಇನ್‌ ಫಿನಾನ್ಸ್‌ ಪದವಿ ಹಾಗೂ  ಏಷಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್‌ ಆಫ್‌ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ಪದವಿಗಳನ್ನು  ಪಡೆದಿದ್ದರು. ನ್ಯೂಯಾರ್ಕ್‌ನ ಮ್ಯಾನ್‌ಹಟನ್‌ ಅಪ್ಪರ್‌ ಇಸ್ಟ್‌  ಸೈಡ್‌ನ‌ಲ್ಲಿ ವಾಸಿಸುತ್ತಿದ್ದು  ಡಬ್ಲ್ಯು ಆ್ಯಂಡ್‌ ಕಂಪೆನಿಯಲ್ಲಿ ಹಿರಿಯ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 

ಸ್ಕೂಬಾ ಡೈವಿಂಗ್‌ ಸಂದರ್ಭ ಸಂಭವಿಸಿದ ಘಟನೆ
ರೊಹಿನಾ ಅವರು  19 ಮಂದಿಯ ತಂಡ ದೊಂದಿಗೆ ವಿಹಾರಕ್ಕೆ ತೆರಳಿದ್ದರು. ಕೋಸ್ಟ ರಿಕಾದ ಕೋಕೋಸ್‌ ದ್ವೀಪದ ಬಳಿ  ಸಾಗರ ದಲ್ಲಿ  ಸ್ಕೂಬಾ ಡೈವಿಂಗ್‌ನಲ್ಲಿ  ನಿರತರಾಗಿದ್ದು, ಅವರಿಗೆ ಪುರುಷ ಮಾರ್ಗದರ್ಶಿಯೋರ್ವರು ಗೈಡ್‌ ಮಾಡುತ್ತಿದ್ದರು. ಈ ಸಂದರ್ಭದಲ್ಲಿ  ದಿಢೀರ್‌ ಆಗಿ  ಟೈಗರ್‌ ಶಾರ್ಕ್‌ವೊಂದು  ಅವರ ಹಾಗೂ ಗೈಡ್‌ ಮೇಲೆ ದಾಳಿ ಮಾಡಿದೆ. ಶಾರ್ಕ್‌ ರೊಹಿನಾ ಅವರ ಎರಡೂ ಕಾಲುಗಳಿಗೆ  ಕಚ್ಚಿ ತೀವ್ರ ಸ್ವರೂಪದ ಗಾಯಮಾಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ  ಅವರಿಗೆ ಚಿಕಿತ್ಸೆ  ನೀಡಲು ವೈದ್ಯರ ತಂಡ ಆಗಮಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು. 
ಜತೆಗಿದ್ದ   ಗೈಡ್‌ನ‌ನ್ನು  ಆಸ್ಪತ್ರೆಗೆ ದಾಖ ಲಿಸಿ ಚಿಕಿತ್ಸೆ ನೀಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ನ್ಯೂಯಾರ್ಕ್‌ ಡೈಲಿ ಸಹಿತ ಸ್ಥಳೀಯ ಸುದ್ದಿ ಮಾಧ್ಯಮಗಳು 
ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next