Advertisement

ಸನ್ನಿ ಇಲ್ಲದ ರಾತ್ರಿಯಲ್ಲಿ ಹೊಸ ವರ್ಷ ಸಂಭ್ರಮ

04:20 PM Dec 16, 2017 | |

ಬೆಂಗಳೂರು: ಈ ಬಾರಿ ಹೊಸ ವರ್ಷಾಚರಣೆಗೆ ಬೆಂಗಳೂರಿಗೆ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಬರ್ತಾರೆ ಎಂದು ತುದಿ ಗಾಲಲ್ಲಿ ನಿಂತು ತಪಸ್ಸು ಮಾಡುತ್ತಿದ್ದ ರಸಿಕರ ಆಸೆ ಮೇಲೆ ಗೃಹ ಸಚಿವ ರಾಮಲಿಂಗಾರೆಡ್ಡಿ ತಣ್ಣೀರೆರಚಿದ್ದಾರೆ. ಕಾರಣ “ಸನ್ನಿ ನೈಟ್ಸ್‌’ ಕ್ಯಾನ್ಸಲ್‌ ಮಾಡಿ ಎಂದು ಸಚಿವರು ಆದೇಶಿಸಿದ್ದಾರೆ! ಹೀಗಾಗಿ “ಸನ್ನಿಪ್ರಿಯ’ ಪಡ್ಡೆಗಳು ಈ ಬಾರಿ ಭಾರವಾದ ಎದೆಯೊಂದಿಗೆ ಹೊಸ ವರ್ಷ ಆಚರಿಸಬೇಕಿದೆ.

Advertisement

ಹೊಸ ವರ್ಷಾಚರಣೆ ಅಂಗವಾಗಿ ಡಿ.31ರಂದು ಮಾನ್ಯತಾ ಟೆಕ್‌ ಪಾರ್ಕ್‌ನ ವೈಟ್‌ ಆರ್ಕಿಡ್‌ನ‌ಲ್ಲಿ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರ “ಸನ್ನಿ ನೈಟ್ಸ್‌’ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ಗೆ ಸೂಚಿಸಿದ್ದಾರೆ. ಸಚಿವರ ಈ ನಿರ್ಧಾರ ಪಡ್ಡೆ ಹುಡುಗರಿಗಷ್ಟೇ ಅಲ್ಲ, ಕೆಲ ಯುವ ಪೊಲೀಸ್‌ ಸಿಬ್ಬಂದಿಗೂ ನುಂಗಲಾರದ ತುತ್ತಾಗಿದೆ.

“ಸನ್ನಿ ಲಿಯೋನ್‌ ಬಂದಿದ್ರೆ ಭದ್ರತೆ ವ್ಯವಸ್ಥೆಯನ್ನ ನಾವು ನೋಡ್ಕೊಳ್ತಿದ್ವಿ. ಕಾರ್ಯಕ್ರಮ ಕ್ಯಾನ್ಸಲ್‌ ಮಾಡಾºರ್ದಿತ್ತು. ಛೇ…,’ ಎಂದು ಸಿಬ್ಬಂದಿ ಬೇಸರಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, “ಹೊಸ ವರ್ಷದ ಅಂಗವಾಗಿ ನಟಿ ಸನ್ನಿ ಲಿಯೋನ್‌ರ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡದಂತೆ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇನೆ.

“ಸನ್ನಿ ನೈಟ್‌’ ನಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಗೆ ಪೂರಕವಲ್ಲ. ಒಂದು ವೇಳೆ ಕಾರ್ಯಕ್ರಮ ಮಾಡಲೇಬೇಕಾದರೆ ರಾಜ್ಯದಲ್ಲಿರುವ ಕಲಾವಿದರನ್ನು ಕರೆಸಿ ನಡೆಸಲಿ. ಒಂದೊಮ್ಮೆ ಅನುಮತಿ ನೀಡಿದ್ದರೆ ಅದನ್ನು ರದ್ದುಗೊಳಿಸುವಂತೆಯೂ ಸೂಚಿಸುತ್ತೇನೆ,’ ಎಂದಿದ್ದಾರೆ.

ದಿ ಟೈಮ್ಸ್‌ ಕ್ರಿಯೇಷನ್ಸ್‌ ಸಂಸ್ಥೆ ಡಿ.31ರಂದು “ಸನ್ನಿ ನೈಟ್ಸ್‌’ ಕಾರ್ಯಕ್ರಮ ಆಯೋಜನೆಗೆ ನಿರ್ಧರಿಸಿದ್ದರು. ಈ ಸಂಬಂಧ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಸಂಪಿಗೆಹಳ್ಳಿ ಪೊಲೀಸ್‌ ಠಾಣೆಗೆ ಮನವಿ ಕೂಡ ಮಾಡಿದ್ದರು. ಆದರೆ, ಮನವಿ ಪರಿಶೀಲಿಸಿದ ಪೊಲೀಸರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಭದ್ರತೆ ವಿಚಾರವಾಗಿ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದರು. 

Advertisement

ಪ್ರತಿಭಟನೆ: ಮನ್ಯಾತಾ ಟೆಕ್‌ ಪಾರ್ಕ್‌ ಉದ್ಯೋಗಿಗಳಿಗಾಗಿ ಆಯೋಜಿಸಿರುವ ಬಾಲಿವುಡ್‌ ನಟಿ ಸನ್ನಿಲಿಯೋನ್‌ ಆವರ ವಿಶೇಷ ಕಾರ್ಯಕ್ರಮವನ್ನು ರದ್ದು ಪಡಿಸಬೇಕು. ಇದರಿಂದ ಭಾರತೀಯ ಸಂಸ್ಕೃತಿಗೆ ಧಕ್ಕೆಯಾಗುತ್ತದೆ ಎಂದು ಕನ್ನಡ ಪರ ಸಂಘಟನೆಗಳು ಶುಕ್ರವಾರ ನಗರದಲ್ಲಿ ಪ್ರತಿಭಟಿಸಿದವು. ಈಗಾಗಲೇ ನಗರದ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಆದರೆ, ಟೈಮ್ಸ್‌ ಕ್ರಿಯೇಷನ್‌ ಸಂಸ್ಥೆ ನೀಲಿ ಚಿತ್ರಗಳ ತಾರೆ ಸನ್ನಿಲಿಯೋನ್‌ ಕರೆತಂದು ಕಾರ್ಯಕ್ರಮ ಮಾಡುವುದು ಎಷ್ಟು ಸರಿ? ಈ ಸಂದರ್ಭದಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದರೆ ನಗರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಕಾರ್ಯಕ್ರಮ ರದ್ದು ಪಡಿಸುವಂತೆ ಮನವಿ ಮಾಡಿದ್ದಾರೆ.

ಟಿಕೆಟ್‌ ಬೆಲೆ 7999 ರೂ. ಮಾತ್ರ!: ಈ ಮಧ್ಯೆ ಸನ್ನಿ ನೈಟ್ಸ್‌ ಕಾರ್ಯಕ್ರಮಕ್ಕೆ 2999ರಿಂದ 7999 ರೂ. ಟಿಕೆಟ್‌ ದರ ನಿಗದಿಪಡಿಸಿ ಬುಕಿಂಗ್‌ ಕೂಡ ಆರಂಭಿಸಿದ್ದರು. ಆದರೆ, ಹೊಸ ವರ್ಷಾಚರಣೆ ವೇಳೆ ನಟಿ ಸನ್ನಿ ಲಿಯೋನ್‌ ಆಗಮಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಹಾಗೂ ಹಿಂದೂ ಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದ್ದವು.

ಜತೆಗೆ ಕಾರ್ಯಕ್ರಮ ರದ್ದು ಪಡಿಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೂ ಮನವಿ ಮಾಡಿದ್ದರು. ಆದರೆ, ಡಿ.31ರಂದು ಕಾರ್ಯಕ್ರಮ ಇರುವುದರಿಂದ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದರು. ಈ ಮಧ್ಯೆಯೇ ಗೃಹ ಸಚಿವ ರಾಮಲಿಂಗಾರೆಡ್ಡಿ ಸನ್ನಿ ನೈಟ್ಸ್‌ ರದ್ದುಪಡಿಸುವಂತೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next