ಅಂತೂ ಇಂತೂ 2020 ಮುಗೀತು. ಈ ವರ್ಷ ಒಂದು ರೀತಿ ಹೆಚ್ಚು ದುಃಖ ಕಡಿಮೆ ಸಂತೋಷ ಇತ್ತು ಅಂತಾನೇ ಹೇಳಬಹುದು. ಕೋವಿಡ್ ಎನ್ನುವ ಮಹಾಮಾರಿ ವೈರಸ್ ಇಡೀ ವಿಶ್ವವನ್ನೇ ತನ್ನ ತಾಳಕ್ಕೆ ತಕ್ಕಂತೆ ಕುಣಿಸಿ ಬಿಟ್ಟಿದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಅಲ್ಲೋಲ್ಲ ಕಲ್ಲೋಲ್ಲ ಸೃಷ್ಟಿಸಿತು. ಇದರಿಂದ ಎಷ್ಟೋ ಜನರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಬಂದಿತ್ತು. ಎಷ್ಟೋ ಮಂದಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಳಾದರು. ಊಹೆಗೂ ಮೀರಿದಷ್ಟು ಜನರು ತಮ್ಮ ಪ್ರಾಣ ಕಳೆದುಕೊಂಡರು. ಎಷ್ಟೋ ಕುಟುಂಬಗಳು ಅನಾಥವಾದವು. ಹೀಗೆ ನಾವೆಲ್ಲ ಈ ವರ್ಷ ಎದುರಿಸಿದ ಸಮಸ್ಯೆಗಳ ಪಟ್ಟಿ ತುಂಬಾ ದೊಡ್ಡದು.
2020 ರ ಪ್ರಾರಂಭದಲ್ಲಿ ವರ್ಷ ಪೂರ್ತಿ ಏನು ಮಾಡಬೇಕು ಅಂತ ಯೋಜನೆಗಳನ್ನು ಹಾಕಿಕೊಂಡಿದ್ದೆವು. ಮನೆ ಕಟ್ಟುವುದು, ಮದುವೆ, ಸ್ವಂತ ಉದ್ಯೋಗ, ಪ್ರವಾಸಗಳು ಹೀಗೆ ಹತ್ತು ಹಲವಾರು ಯೋಜನೆಗಳು. ಆದರೆ ಎಲ್ಲಾ ಯೋಜನೆ ಯೋಚನೆಗಳಿಗೆ ಕೋವಿಡ್ ವೈರಸ್ ಪೂರ್ಣವಿರಾಮ ಹಾಕಿತ್ತು. ಹೀಗಾಗಿ ಈ ಎಲ್ಲಾ ಸಮಸ್ಯೆಗಳ ಮಧ್ಯೆ ಈ ವರ್ಷ ಹೇಗೆ ಕಳೆದು ಹೋಯಿತು ಎಂಬುದು ಗೊತ್ತಾಗಲಿಲ್ಲ. ಇದರ ಜೊತೆಗೆ ಒಂದು ಖುಷಿ ವಿಚಾರ ಅಂದ್ರೆ ಎಷ್ಟೋ ಕುಟುಂಬಗಳು ಹಲವು ವರ್ಷಗಳ ನಂತರ ಒಟ್ಟುಗೂಡಿದ್ದು, ಹೆಚ್ಚು ಸಮಯಗಳನ್ನು ತಮ್ಮ ತಮ್ಮ ಕುಟುಂಬ, ಪ್ರೀತಿಪಾತ್ರರೊಂದಿಗೆ ಕಳೆಯುವ ಅವಕಾಶ ಪಡೆದದ್ದು. ಇದೊಂದು ವಿಷಯಕ್ಕೆ ನಾವು ಕೋವಿಡ್ ಗೆ ಧನ್ಯವಾದ ಹೇಳಲೇಬೇಕು.
ಈಗ ಮತ್ತೆ ಹೊಸ ವರ್ಷ ಬರುತ್ತಿದೆ. ಎಲ್ಲರೂ ಈ ಹೊಸ ವರ್ಷದ ಬರುವಿಕೆಯಲ್ಲಿ ಇದ್ದೇವೆ. 2021 ರಲ್ಲಿ ನಮ್ಮ ಯೋಜನೆಗಳು ಸಫಲವಾಗಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಈ ಬಾರಿ ಪ್ರತಿಯೊಬ್ಬರು ರಾಶಿ ರಾಶಿ ಕನಸುಗಳನ್ನು ಹೊತ್ತು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾತುರರಾಗಿದ್ದೆವೆ.
ಸದ್ಯಕ್ಕೆ 2020 ಕ್ಕೆ ವಿದಾಯ ಹೇಳಿ 2021 ನ್ನು ಸ್ವಾಗತಿಸಬೇಕು. ಈ ಒಂದು ವರ್ಷದಲ್ಲಿ ಪಡೆದ ಅನುಭವಗಳನ್ನು ನಾವು ವಿಮರ್ಶೆಯ ತಕ್ಕಡಿಗೆ ಹಾಕಿ ಒಳ್ಳೆಯದು ಕೆಟ್ಟದ್ದು ಎರಡನ್ನೂ ತೂಗಬೇಕಾಗಿದೆ. ಕೆಟ್ಟದನ್ನು ಅಲ್ಲೇ ಬಿಟ್ಟು ಒಳ್ಳೆಯದನ್ನು ಬದುಕಿನಲ್ಲಿ ಅನುಸರಿಸಿಕೊಂಡು ಹೊಸ ವರುಷವನ್ನು ಹರುಷದಿಂದ ಕಳಯೋಣ. 2021 ಎಲ್ಲರ ಬದುಕಿನಲ್ಲಿ ಹೊಸ ಬದಲಾವಣೆ ತರಲಿ, ಹೊಸ ಉತ್ಸಾಹ ತುಂಬಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
*ರಮ್ಯ.ಬಿ ಉಡುಪಿ