Advertisement
ಕೊಲ್ಲೂರಿನಲ್ಲಿ ಅಪಾರ ಭಕ್ತಸಂದಣಿಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಕಳೆದ ಒಂದು ವಾರದಿಂದ ಭಕ್ತರ ಸಂಖ್ಯೆ ವಿಪರೀತವಾಗಿದ್ದು, ಡಿ.29ರ ಶನಿವಾರ 15 ಸಾವಿರಕ್ಕೂ ಮಿಕ್ಕಿದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ವರ್ಷದ ಕೊನೆಯ ವಾರಾಂತ್ಯ ಹಾಗೂ ಮೂರು ದಿನ ರಜೆ ಇದ್ದ ಕಾರಣ ರಾಜ್ಯ ಹಾಗೂ ಹೊರರಾಜ್ಯಗಳ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದರು.
ದೇವರ ದರ್ಶನಕ್ಕೆ ಭಾರೀ ಉದ್ದದ ಸರತಿ ಸಾಲು ಕಂಡುಬಂದಿದ್ದು, ಇದು ಮುಖ್ಯ ರಸ್ತೆಯವರೆಗೂ ತಲುಪಿತ್ತು. ದೇವರ ದರ್ಶನಕ್ಕೆ ದೇಗುಲದ ವತಿಯಿಂದ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಪರಿಸರದ ಬಹುತೇಕ ಎಲ್ಲ ವಸತಿ ಗೃಹಗಳು ಕಳೆದ ಒಂದು ವಾರದಿಂದ ಭರ್ತಿಯಾಗಿದ್ದು, ದೂರದೂರಿನಿಂದ ಆಗಮಿಸಿದ್ದ ಭಕ್ತರು ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿ ದಣಿವಾರಿಸುತ್ತಿರುವುದು ಕಂಡುಬಂತು.
Related Articles
ವಾಹನ ನಿಲುಗಡೆ ಹಾಗೂ ಸಂಚಾರ ಸಮಸ್ಯೆಯು ಇಲ್ಲಿ ಹಲವು ವರ್ಷಗಳಿಂದ ಇದ್ದು, ಭಕ್ತರ ಸಂಖ್ಯೆ ಹೆಚ್ಚಿದ್ದಾಗ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ರವಿವಾರ ಸಂಚಾರ ಸುವ್ಯವಸ್ಥೆಗೆ ಪೊಲೀಸರು ಹರಸಾಹಸಪಡಬೇಕಾಯಿತು.
Advertisement
ಕುಕ್ಕೆ ಸುಬ್ರಹ್ಮಣ್ಯ: ಭಕ್ತ ಸಂದಣಿಸುಬ್ರಹ್ಮಣ್ಯ: ಸರಣಿ ರಜೆ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರವಿವಾರ ಅಪಾರ ಭಕ್ತ ಸಂದಣಿ ಕಂಡುಬಂತು.
ದೇಗುಲಕ್ಕೆ ದೂರದ ಊರುಗಳಿಂದಲೂ ಭಕ್ತರು ಆಗಮಿಸಿದ್ದರು. ಕ್ಷೇತ್ರದ ವಾಹನ ಪಾರ್ಕಿಂಗ್ ಸ್ಥಳಗಳು ಭರ್ತಿಯಾಗಿದ್ದು, ವಾಹನಗಳನ್ನು ಇತರೆಡೆ ನಿಲ್ಲಿಸಿರುವುದು ಕಂಡುಬಂತು. ದೇಗುಲದ ಹೊರಾಂಗಣ, ರಥಬೀದಿ, ಪೇಟೆಯ ರಸ್ತೆಯಲ್ಲಿ ಜನರ ದಟ್ಟಣೆ ಇತ್ತು. ದೇವರ ದರ್ಶನಕ್ಕೆ ಸುಗಮ ವ್ಯವಸ್ಥೆ ಮಾಡಲಾಗಿತ್ತು. ಕಟೀಲಿನಲ್ಲಿ
ಸರಣಿ ರಜೆಯ ಹಿನ್ನೆಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಯಾತ್ರಿಗಳ ಸಂಖ್ಯೆ ಹೆಚ್ಚಿತ್ತು. ಶೈಕ್ಷಣಿಕ ಪ್ರವಾಸದ ಶಾಲಾ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಅನ್ನಪ್ರಸಾದ ಸ್ವೀಕರಿಸಲು ದೊಡ್ಡ ಸರತಿ ಸಾಲು ಕಂಡುಬಂದಿತು. ಮಧ್ಯಾಹ್ನ ಸುಮಾರು 5 ಸಾವಿರಕ್ಕೂ ಮಿಕ್ಕಿದ ಭಕ್ತರು ದೇವರ ದರ್ಶನ ಪಡೆದಿದ್ದಾರೆ ಎಂದು ದೇಗುಲದ ಮೂಲಗಳು ತಿಳಿಸಿವೆ. ಶ್ರೀ ಕೃಷ್ಣ ಮಠದಲ್ಲಿ
ಉಡುಪಿ ಶ್ರೀಕೃಷ್ಣ ಮಠದಲ್ಲೂ ಭಕ್ತರ ಸಂಖ್ಯೆ ವಿಪರೀತವಾಗಿತ್ತು. ದೇವರ ದರ್ಶನಕ್ಕೆ ಭಾರೀ ಉದ್ದದ ಸಾಲು ಕಂಡುಬಂತು. ಶೈಕ್ಷಣಿಕ ಪ್ರವಾಸ ಬಂದಿದ್ದ ವಿಧ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿದ್ದು, ರಥಬೀದಿಯು ಜನರಿಂದ ತುಂಬಿ ತುಳುಕುತ್ತಿತ್ತು. ಎಲ್ಲೆಲ್ಲೂ ಟ್ರಾಫಿಕ್ ಜಾಮ್
ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಕರಾವಳಿಯ ಪ್ರವಾಸಿ ತಾಣಗಳಿಗೆ ಆಗಮಿಸಿದ್ದರಿಂದ ವಿವಿಧೆಡೆ ಟ್ರಾಫಿಕ್ ಜಾಮ್ ಸಂಭವಿಸಿತು. ದೇಗುಲಗಳ ಪರಿಸರ, ಮಂಗಳೂರು ಮತ್ತು ಉಡುಪಿ ನಗರದಲ್ಲಿ ವಾಹನ ದಟ್ಟಣೆ ಅತಿಯಾಗಿತ್ತು. ಮಂಗಳೂರು ಗಿಜಿಗಿಜಿ
ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರವಿವಾರದಂದು ನಗರದ ವಿವಿಧೆಡೆ ಜನಸಂದಣಿ ಕಂಡುಬಂತು. ವಿವಿಧ ಮಾಲ್‌ಗಳಲ್ಲಿ, ಬೀಚ್, ದೇವಸ್ಥಾನ, ಕರಾವಳಿ ಉತ್ಸವ ಮೈದಾನ, ಮಂಗಳೂರು ಕಂಬಳ ಪ್ರದೇಶದಲ್ಲೂ ಜನದಟ್ಟಣೆ ಕಂಡುಬಂತು. ವರ್ಷಾಂತ್ಯದ ಹಿನ್ನೆಲೆಯಲ್ಲಿ ವಿವಿಧೆಡೆ ಖರೀದಿ ಹಾಗೂ ಮಾರಾಟವೂ ಉತ್ತಮವಾಗಿತ್ತು. ಜನ ವಿವಿಧ ಮಳಿಗೆಗಳಿಗೆ ತೆರಳಿ ಖರೀದಿಯಲ್ಲಿ ತೊಡಗಿಕೊಂಡರು. ವಾಹನಗಳ ಓಡಾಟವೂ ಹೆಚ್ಚಾಗಿದೆ. ಮಂಗಳೂರು ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಎಂದಿಗಿಂತಲೂ ಅಧಿಕ ಪ್ರಯಾಣಿಕರು ಕಂಡುಬಂದರು. ಮಂಗಳೂರಿನ ಕರಾವಳಿ ಉತ್ಸವ ಮೈದಾನದತ್ತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಕರಾವಳಿಯಲ್ಲಿ ವರ್ಷಾಂತ್ಯದಲ್ಲಿ ಸಮಾರಂಭಗಳು ಅಧಿಕ ವಾಗಿದ್ದವು. ಅವುಗಳ ಜತೆ ವಿದೇಶದಿಂದ, ಹೊರ ರಾಜ್ಯಗಳಲ್ಲಿ ಉದ್ಯೋಗದಲ್ಲಿರುವವರು ಊರಿಗೆ ಆಗಮಿಸಿರುವ ಕಾರಣ ಖರೀದಿ, ಮಾರಾಟದ ಭರಾಟೆ ಕಂಡುಬಂತು. ಬೀಚ್‌ಗಳಲ್ಲಿ ಭಾರೀ ಜನಸ್ತೋಮ
ಕರಾವಳಿಯ ಬಹುತೇಕ ಎಲ್ಲ ಬೀಚ್‌ಗಳಲ್ಲೂ ಪ್ರವಾಸಿಗರ ದಟ್ಟಣೆ ಅತಿಯಾಗಿತ್ತು. ಮಂಗಳೂರಿನ ವಿವಿಧ ಬೀಚ್‌ಗಳಲ್ಲೂ ಕೂಡ ಪ್ರವಾಸಿಗರ ಸಂಖ್ಯೆ ಅಧಿಕವಾಗಿತ್ತು. ಪಣಂಬೂರು, ಸೋಮೇಶ್ವರ ಬೀಚ್‌ಗಳಿಗೆ ಹೊರ ಜಿಲ್ಲೆಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಉಡುಪಿಯ ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಮಲ್ಪೇ ಬೀಚ್‌ನಲ್ಲಿ ಜನರ ದಟ್ಟಣೆ ವಿಪರೀತವಾಗಿತ್ತು. ಕಳೆದ ಕೆಲವು ದಿನಗಳಿಂದಲೂ ಇಲ್ಲಿ ಪ್ರವಾಸಿಗರ ಒತ್ತಡ ಅತಿಯಾಗಿದೆ. ಪರಿಣಾಮವಾಗಿ ಉಡುಪಿ- ಮಲ್ಪೆ ರಸ್ತೆಯಲ್ಲಿ ವಾಹನ ದಟ್ಟಣೆಯೂ ಕಂಡುಬಂತು. ಪಾರ್ಕಿಂಗ್‌ಗೂ ಸ್ವಲ್ಪ ಸಮಸ್ಯೆ ಕಂಡುಬಂತು. ಮರವಂತೆ, ಸೋಮೇಶ್ವರ ಬೀಚ್‌ಗಳಲ್ಲಿ ಕೂಡ ಪ್ರವಾಸಿಗರ ಸಂಖ್ಯೆ ಎಂದಿಗಿಂತ ಸಾಕಷ್ಟು ಹೆಚ್ಚಿತ್ತು. ರಸ್ತೆ ಕಾಮಗಾರಿ: ಎಚ್ಚರಿಕೆ ವಹಿಸಿ
ಕರಾವಳಿಯ ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಬದಲಿ ರಸ್ತೆ ಬಳಸಬೇಕಿದೆ. ಆದುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಾಗುವ ಅಗತ್ಯವಿದೆ.