Advertisement

New year: ಹೊಸ ವರ್ಷಾಚರಣೆಗೆ ಮಲೆನಾಡಿಗೆ ಪ್ರವಾಸಿಗರ ಲಗ್ಗೆ

03:31 PM Dec 30, 2023 | Team Udayavani |

ಸಕಲೇಶಪುರ: ಕ್ರಿಸ್‌ಮಸ್‌ ರಜೆ ಹಾಗೂ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಹೊರ ಊರುಗಳಿಂದ ಪ್ರವಾಸಿಗರು ತಾಲೂಕಿಗೆ ಕಳೆದೊಂದು ವಾರದಿಂದ ನಿರಂತರವಾಗಿ ಬರುತ್ತಿದ್ದು, ತಾಲೂಕಿನ ಪ್ರವಾಸೋದ್ಯಮ ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.

Advertisement

ಕೋವಿಡ್‌ ಹೊಸ ತಳಿಯ ಆತಂಕದ ನಡುವೆಯೂ ಹೋಂಸ್ಟೇ ಮತ್ತು ರೆಸಾರ್ಟ್‌ಗಳಿಗೆ ಹೊರ ಊರುಗಳಿಂದ ಪ್ರಕೃತಿ ಸೌಂದರ್ಯ ಸವಿಯಲು ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಟ್ರಾಫಿಕ್‌ ಕಿರಿಕಿರಿ: ಬೆಂಗಳೂರು ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ಪಟ್ಟಣದ ಮೂಲಕ ಹಾದು ಹೋಗಿದ್ದು, ಪ್ರವಾಸಿಗರು ತಾಲೂಕಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಕಳೆದೊಂದು ವಾರದಿಂದ ಆಗಮಿಸುತ್ತಿರು ವುದರಿಂದ ಪಟ್ಟಣದಲ್ಲಿ ಟ್ರಾಫಿಕ್‌ ಕಿರಿಕಿರಿ ವಿಪರೀತವಾ ಗಿದ್ದು, ಪಟ್ಟಣ ವ್ಯಾಪ್ತಿಯಲ್ಲಿರುವ ಜನ ಒಂದು ಬದಿಯಿಂದ ಇನ್ನೊಂದು ಬದಿಗೆ ರಸ್ತೆ ಕ್ರಾಸ್‌ ಮಾಡಲು ಹರಸಾಹಸ ಮಾಡಬೇಕಾಗಿದೆ. ಸ್ಥಳೀಯರು ಒಂದೆರೆಡು ಕಿ.ಮೀ ದೂರ ಹೋಗಲು ತೊಂದರೆಯಾಗುತ್ತಿದೆ.

ಪ್ರವಾಸಿ ಸ್ಥಳಗಳಲ್ಲಿ ಟ್ರಾಫಿಕ್‌ ಜಾಂ: ಪ್ರವಾಸಿ ಸ್ಥಳಗಳಿಗೆ ವಿಪರೀತ ಜನ ಬರುತ್ತಿರುವುದರಿಂದ ವಾಹನಗಳ ನಿಲುಗಡೆ ಮಾಡಲು ಪ್ರವಾಸಿಗರು ಹರಸಾಹಸ ಮಾಡಬೇಕಾಗಿದೆ. ಎಲ್ಲಿ ಬೇಕೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಹಲವು ಕಡೆ ವಾಹನ ದಟ್ಟಣೆ ಆಗುತ್ತಿರುವುದು ಸ್ಥಳೀಯರ ಪರದಾಟಕ್ಕೆ ಕಾರಣವಾಗಿದೆ.

ವಿವಿಧ ಪ್ರವಾಸೋದ್ಯಮ ಸ್ಥಳಗಳು ಫ‌ುಲ್‌ ರಶ್‌:  ತಾಲೂಕಿನ ಪ್ರಮುಖ ಪ್ರವಾಸೋದ್ಯಮ ಸ್ಥಳಗಳಾದ ಮಂಜ್ರಾಬಾದ್‌ ಕೋಟೆ, ಬಿಸ್ಲೆ ಘಾಟ್‌, ಮೂಕನಮನೆ ಜಲಪಾತ, ಮಗಜಹಳ್ಳಿ ಜಲಪಾತ, ಹೊಸಹಳ್ಳಿ ಗುಡ್ಡ, ಬೆಟ್ಟದ ಭೈರವೇಶ್ವರ ದೇವಸ್ಥಾನ ಸೇರಿದಂತೆ ಇನ್ನು ಹಲವು ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ವಿಪರೀತ ಬಿಸಿಲು ಇರುವುದರಿಂದ ಪ್ರವಾಸಿ ಗರು ಜಲಪಾತಗಳಲ್ಲಿ ಆಟವಾಡಲು ಇಷ್ಟಪಡುತ್ತಿದ್ದು, ಅಲ್ಲಿ ಅಪಾರ ಪ್ರವಾಸಿಗರನ್ನು ಕಾಣಬಹುದಾಗಿದೆ.

Advertisement

ಮದ್ಯ ಅಂಗಡಿ, ಬೇಕರಿ, ಹೋಟೆಲ್‌ ರಶ್‌:  ಪ್ರವಾಸಿಗ ರಿಂದ ತಾಲೂಕಿನ ಮಧ್ಯದ ಅಂಗಡಿಗಳಿಗೆ, ಬೇಕರಿ ಹಾಗೂ ಹೋಟೆಲ್‌ಗ‌ಳು, ಮಾಂಸದ ಅಂಗಡಿಗಳಿಗೆ ಉತ್ತಮ ವ್ಯಾಪಾರ ವಹಿವಾಟು ಕಳೆದೊಂದು ವಾರದಿಂದ ನಡೆಯುತ್ತಿದ್ದು ಇದರಿಂದ ತಾಲೂಕಿನ ಆರ್ಥಿಕತೆ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ.

ಪೋಲಿಸರಿಗೆ ತಲೆ ನೋವು: ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಕೆಲವು ಪುಂಡ ಪೋಕರಿಗಳು ಆಗಮಿಸಿ ಮೋಜು ಮಸ್ತಿಗಾಗಿ ಅತಿಯಾದ ಮದ್ಯ ಸೇವನೆ ಮಾಡಿ ದಾಂಧಲೆ ನಡೆಸುವುದರಿಂದ ಇಂತಹವರ ಮೇಲೆ ಕಣ್ಣಿಡ ಬೇಕಾದ ಅನಿವಾರ್ಯತೆಗೆ ಪೊಲೀಸರು ಸಿಲುಕಿದ್ದಾರೆ.

ಹಿಂದೂ ಸಂಘಟನೆ ಎಚ್ಚರಿಕೆ:

ಹೊಸ ವರ್ಷಾಚರಣೆ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವುದು ಕಂಡು ಬಂದಲ್ಲಿ ಅಂತಹ ರೆಸಾರ್ಟ್‌ ಮತ್ತು ಹೋಂ ಸ್ಟೇಗಳ ಮೇಲೆ ದಾಳಿ ನಡೆಸುವುದಾಗಿ ಕೆಲವು ಹಿಂದೂ ಸಂಘಟನೆಗಳು ಎಚ್ಚರಿಸಿವೆ. ಆದರೆ, ರೆಸಾರ್ಟ್‌ ಮತ್ತು ಹೋಂ ಸ್ಟೇಗಳ ಮಾಲೀಕರು ಇದಕ್ಕೆ ತಲೆಕೆಡಿಸಿಕೊಳ್ಳದೇ ಹೊಸ ವರ್ಷ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಹೋಂ ಸ್ಟೇ, ರೆಸಾರ್ಟ್‌ ಭರ್ತಿ :

ಕಳೆದೊಂದು ವಾರದಿಂದ ತಾಲೂಕಿನ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳು ಉತ್ತಮ ವ್ಯವಹಾರ ಕಂಡಿವೆ. ಬಹುತೇಕ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳು ಭರ್ತಿಯಾಗಿದ್ದು, ಎಲ್ಲಿ ನೋಡಿದರಲ್ಲಿ ಪ್ರವಾಸಿಗರು ಕಂಡು ಬರುತ್ತಿದ್ದಾರೆ. ಇದರಿಂದ ರೆಸಾರ್ಟ್‌ ಮತ್ತು ಹೋಂ ಸ್ಟೇ ಮಾಲಿಕರು ಖುಷಿಯಾಗಿದ್ದಾರೆ.

ಕ್ಲಬ್‌ಗಳಲ್ಲೂ ಸಿದ್ಧತೆ :

ಕ್ರಿಸ್‌ಮಸ್‌ ಹಬ್ಬ ಮುಗಿದು ವಾರ ಕಳೆದಿಲ್ಲ, ಇದೀಗ ತಾಲೂಕಿನ ರೆಸಾರ್ಟ್‌ ಮತ್ತು ಹೋಂ ಸ್ಟೇಗಳು ಮಾತ್ರವಲ್ಲದೇ ಹಲವು ಕ್ಲಬ್‌ಗಳಲ್ಲಿ ಹೊಸ ವರ್ಷಾಚರಣೆ ಮಾಡಲು ಸಿದ್ಧತೆ  ನಡೆಸಲಾಗಿದೆ. ಪ್ರವಾಸಿಗರ ಸಂಖ್ಯೆ ಆಧಾರದಲ್ಲಿ ಎಲ್ಲಾ ಹೋಂ ಸ್ಟೇ, ರೆಸಾರ್ಟ್‌ ಹಾಗೂ ಕ್ಲಬ್‌ಗಳಲ್ಲಿ ಸಿದ್ಧತೆ ಮಾಡಲಾಗಿದೆ.

ಹೊಸ ವರ್ಷಾಚರಣೆಗೆ ಹೊರ ಊರುಗಳಿಂದ ಹಲವಾರು ಪ್ರವಾಸಿಗರು ಬರುವುದರಿಂದ ತಾಲೂಕಿನ ಆರ್ಥಿಕತೆ ಚೇತೋಹಾರಿಗೆ ಸಹಾಯವಾಗುತ್ತದೆ. ಆಚರಣೆ ಹೆಸರಿನಲ್ಲಿ ಬರುವವರು ಉತ್ತಮವಾಗಿ ವರ್ತಿಸಬೇಕು. ಯಾರಾದರೂ ಗೊಂದಲ ಸೃಷ್ಟಿ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ಆದೇಶಿಸಲಾಗಿದೆ.-ಸಿಮೆಂಟ್‌ ಮಂಜು,ಶಾಸಕರು, ಸಕಲೇಶಪುರ ಕ್ಷೇತ್ರ 

ಹೊಸ ವರ್ಷಾಚರಣೆಗೆ ವಿವಿಧೆಡೆಯಿಂದ ಸಾವಿರಾರು ಪ್ರವಾಸಿಗರು ತಾಲೂಕಿನ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಿಗೆ ಆಗಮಿಸುತ್ತಿದ್ದಾರೆ. ಬಹುತೇಕ ಎಲ್ಲಾ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಸಿದ್ಧತೆ ನಡೆದಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ತಾಲೂಕಿನಲ್ಲಿ ಮತ್ತಷ್ಟು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು.  -ಹುರುಡಿ ಪ್ರಶಾಂತ್‌, ರೆಸಾರ್ಟ್‌ ಮಾಲೀಕರು 

-ಸುಧೀರ್‌ ಎಸ್‌.ಎಲ್‌.

Advertisement

Udayavani is now on Telegram. Click here to join our channel and stay updated with the latest news.

Next