Advertisement
ಮದ್ಯದ ನಶೆಯಲ್ಲಿ ಡಿಜೆ ಸದ್ದಿಗೆ ತಕ್ಕಂತೆ ಕುಣಿದು ಕುಪ್ಪಳಿಸಿ, ಮೋಜು-ಮಸ್ತಿಯಲ್ಲಿ ತೊಡಗಿದ್ದ ಯುವಕ-ಯುವತಿಯರು ಭಾನುವಾರ ರಾತ್ರಿ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಹೊಸ ವರ್ಷಾಚರಣೆಗೆ ತುದಿಗಾಲಲ್ಲಿ ನಿಂತಿದ್ದ ಬೆಂಗಳೂರಿಗರು ತಡರಾತ್ರಿ 12 ಗಂಟೆ ಆಗುತ್ತಿದ್ದಂತೆ ಮಂದಹಾಸದ ನಗುಮೊಗದಲ್ಲಿ ಅದ್ಧೂರಿಯಾಗಿ ಹೊಸ 2024ನೇ ವರ್ಷವನ್ನು ಸ್ವಾಗತಿಸಿದರು.
Related Articles
Advertisement
ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲೆಂದರಲ್ಲಿ ಖಾಕಿ ಲಾಠಿ ತಿರುಗಿಸುತ್ತಾ ನೆರೆದಿದ್ದ ಲಕ್ಷಾಂತರ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಬೃಹತ್ ಆಕಾರದ ಎಲ್‌ಇಡಿ ಸ್ಕ್ರೀನ್‌ನಲ್ಲಿ ಹ್ಯಾಪಿ ನ್ಯೂ ಇಯರ್ ಎಂಬ ವಾಕ್ಯ ರಾರಾಜಿಸುತ್ತಿತು.
ಪಬ್‌ಗಳಲ್ಲಿ ನಶೆಯಲ್ಲಿ ತೇಲಾಡಿದ ಯುವ ಜನತೆ: ಚರ್ಚ್‌ಸ್ಟ್ರೀಟ್‌ನಲ್ಲಿರುವ ನೂರಾರು ಪಬ್‌ಗಳೆಲ್ಲವೂ ಮದ್ಯ ಪ್ರೀಯರಿಂದ ತುಂಬಿ ತುಳುಕಾಡುತ್ತಿತ್ತು. ಇಲ್ಲಿನ ಬಹುತೇಕ ಪಬ್ ಗಳ ಮುಂದೆ ಸಂಜೆ 6 ಗಂಟೆಯಿಂದಲೇ ಗ್ರಾಹಕರು ಕ್ಯೂ ನಿಂತರು. ಕುಡಿತದ ಅಮಲಿನಲ್ಲಿ ತೇಲಾಡುತ್ತಾ ನಡೆದಾಡಲಾಗದೇ ಒದ್ದಾಡುತ್ತಿದ್ದ ಯುವಕ-ಯುವತಿಯರನ್ನು ಕಾರು, ಆಟೋಗಳಲ್ಲಿ ಮನೆಗೆ ಕಳುಹಿಸುತ್ತಿರುವುದು ಕಂಡು ಬಂತು. ವಾರಕ್ಕೂ ಮೊದಲೇ ಸಿಲಿಕಾನ್ ಸಿಟಿಯ ಬಹುತೇಕ ಪಬ್ ಗಳಲ್ಲಿ ಹೌಸ್ ಫುಲ್ ಆಗಿದ್ದು, ಈ ವರ್ಷ ಕಪಲ್ ಟಿಕೆಟ್‌ಗೆ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು. ಬೇಡಿಕೆಗೆ ಅನುಗುಣವಾಗಿ ಶೇ.25ರಷ್ಟು ದರ ಏರಿಕೆ ಮಾಡಲಾಗಿತ್ತು. ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಯೂಬಿಸಿಟಿ, ರೆಸಿಡೆನ್ಸಿ ರಸ್ತೆ, ಮಾರತ್ತ್ಹಳ್ಳಿ, ಸರ್ಜಾಪುರ ರಸ್ತೆ, ಹೆಣ್ಣೂರು, ಕೆಆರ್‌ಪುರ, ಕಲ್ಯಾಣನಗರ, ಜೆಪಿನಗರದ ರಸ್ತೆಯುದ್ದಕ್ಕೂ ಸಾವಿರಾರು ಪಬ್‌ಗಳಲ್ಲಿ ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸುವ ಕ್ಷಣದಲ್ಲಿ ಯುವ ಜನತೆ ಮಾರು ಹೋಗುತ್ತಿರುವ ದೃಶ್ಯಗಳು ಕಂಡು ಬಂತು.
ಕೆಲ ಪಬ್‌ಗಳಲ್ಲಿ ವ್ಯಾಲಿಡ್ ಐಡಿ ಕಾರ್ಡ್‌ಗಳನ್ನು ಪರಿಶೀಲಿಸಿ ಒಳಗೆ ಬಿಡಲಾಗುತ್ತಿತ್ತು. ಇನ್ನು ಇಂದಿರಾನಗರ, ಮಾರತ್‌ಹಳ್ಳಿ, ಕೋರಮಂಗಲದ ಪಬ್ ಗಳಲ್ಲಿ ಯುವತಿಯರಿಗೆ, ಕಪಲ್ಸ್‌ಗೆ ಬೇರೆ ವ್ಯವಸ್ಥೆ ಮಾಡಲಾಗಿತ್ತು. ಬ್ರಿಗೇಡ್ ರೋಡ್ ಸೇರಿ ಹಲವು ಹ್ಯಾಪನಿಂಗ್ ಸ್ಥಳಗಳಲ್ಲಿ ಕಪಲ್ ಟಿಕೆಟ್ ಬುಕ್ಕಿಂಗ್ ಕಾಯ್ದಿರಿಸಲಾಗಿತ್ತು. ಎಂಜಿ ರಸ್ತೆಯ ದಿ ಪಾರ್ಕ್, ಸರ್ಜಾಪುರದ ಕಾವರ್ ರೆಸ್ಟೋಬಾರ್, ಮೂಲಿ ರೂಫ್ ಟಾಪ್, ಚರ್ಚ್ ಸ್ಟ್ರೀಟ್‌ನ ಎಲ್ ಐಟಿ ರಸ್ಟೋಪಬ್, ಇಂದಿರಾನಗರದ ಹ್ಯಾಂಗ್ ಓವರ್, ರೇವೆಲ್ ಬಾರ್ ಆ್ಯಂಡ್ ಕಿಚನ್, ವೈಟ್ ಫೀಲ್ಡ್‌ನ ದೋಬಾರ, ಕೋರಮಂಗಲದ ಗಿಲ್ಲೀಸ್ ಪಬ್‌ಗಳಲ್ಲಿ ತುಂಡುಡುಗೆಯ ಯುವತಿ ಯರೊಂದಿಗೆ ಯುವಕರು ಡಿಜೆ ಹಾಡಿಗೆ ಜೋಡಿಗಳು ಹೆಜ್ಜೆ ಹಾಕುತ್ತಿರುವುದು ಕಂಡು ಬಂತು.
ಎಲ್ಲೆಂದರಲ್ಲಿ ಮೊಬೈಲ್ ಸೆಲ್ಫಿ : ಬೆಂಗಳೂರಿನಲ್ಲಿ 12 ಗಂಟೆಯಾಗುತ್ತಿದ್ದಂತೆ ಎಲ್ಲೆಂದರಲ್ಲಿ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಹಂಚಿಕೊಳ್ಳುತ್ತಿರುವ ದೃಶ್ಯಗಳೇ ಕಂಡು ಬಂದಿವೆ. ಪ್ರತಿಯೊಬ್ಬರೂ ಮೊಬೈಲ್‌ನಲ್ಲಿ ಆಪ್ತರೊಂದಿಗೆ ಸೆಲ್ಫಿ ತೆಗೆದರೆ, ವಿವಿಧ ಭಂಗಿಯಲ್ಲಿ ಲಲನೆಯರು ಫೋಟೊಗೆ ಫೋಸ್ ಕೊಡುತ್ತಿರುವ ದೃಶ್ಯ ಕಂಡು ಬಂತು.
“ಹಗ್ ಅಸ್ ಇಫ್ ಯೂ ಲೈಕ್ ಅವರ್ ವೈಬ್’: ಸಿಲಿಕಾನ್ ಸಿಟಿಯ ಚರ್ಚಸ್ಟ್ರೀಟ್ ರಸ್ತೆಯಲ್ಲಿ ಯುವಕನೋರ್ವ ಇಂಗ್ಲಿಷ್ ಭಾಷೆಯಲ್ಲಿ “ಹಗ್ ಅಸ್ ಇಫ್ ಯೂ ಲೈಕ್ ಅವರ್ ವೈಬ್’ ಎಂದು ಬೋರ್ಡ್ ಹಿಡಿದು ನಿಂತಿದ್ದ. ಇದನ್ನು ಗಮನಿಸಿದ ಕೆಲವು ಯುವಕ, ಯುವತಿಯರು ಅಚ್ಚರಿ ವ್ಯಕ್ತಪಡಿಸಿ ಆತನನ್ನು ತಬ್ಬಿಕೊಂಡು ಹ್ಯಾಪಿ ನ್ಯೂ ಇಯರ್ ಎಂದು ಶುಭಾಶಯ ಕೋರಿದರು.
ಕುಡಿದ ಅಮಲಿನಲ್ಲಿ ಯುವತಿಯರ ತೂರಾಟ : ಚರ್ಚ್‌ಸ್ಟ್ರೀಟ್‌ನ ಕೆಲವೊಂದು ಪಬ್‌ಗಳಲ್ಲಿ ಬಣ್ಣ-ಬಣ್ಣದ ಲೈಟುಗಳಿಗೆ ಹೆಜ್ಜೆ ಹಾಕುತ್ತಿದ್ದಾಗಲೇ ಯುವತಿಯರು ಅಮಲಿನಲ್ಲಿ ಕೆಳಗೆ ಬಿದ್ದು ತೂರಾಡಿ ದರು. ಪಬ್ ಸಿಬ್ಬಂದಿ ಕೂಡಲೇ ಅವರನ್ನು ಟ್ಯಾಕ್ಸಿಯಲ್ಲಿ ಮನೆಗೆ ಸಾಗಿಸುವ ದೃಶ್ಯ ಕಂಡು ಬಂತು. ಮತ್ತೂಂದೆಡೆ ಡ್ಯಾನ್ಸ್‌ಬಾರ್‌ಗಳಲ್ಲಿ ಲಲನೆಯರ ಬಿನ್ನಾಣಕ್ಕೆ ಮನಸೋತ ಮದ್ಯಾಸುರರು ಅವರೊಂದಿಗೆ ಹೆಜ್ಜೆ ಹಾಕಿ ಮತ್ತಿನಲ್ಲೇ ಹೊಸ ವರ್ಷ ಸ್ವಾಗತಿಸಿ ಸಂಭ್ರಮಿಸಿದರು.
ಪಾರ್ಟಿಗಳಲ್ಲಿ ಡ್ರಗ್ಸ್ ಘಾಟು : ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಪಾರ್ಟಿಗಳಲ್ಲಿ ಡ್ರಗ್ಸ್ ಘಾಟು ಬಡಿದಿದ್ದು, ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್‌ಗಳ ವಹಿವಾಟು ನಡೆದಿರುವ ಶಂಕೆ ವ್ಯಕ್ತವಾಗಿದೆ. ಶ್ರೀಮಂತರ ಕೆಲವು ಪಾರ್ಟಿಗಳಲ್ಲಿ ಎಂಡಿಎಂಎ, ಗಾಂಜಾ, ಟೆಕ್ಸ್‌ಟೆಸಿ ಪಿಲ್ಸ್, ಎಲ್‌ಎಸ್‌ಡಿ, ಬ್ರೌನ್‌ಶುಗರ್ ಸೇರಿದಂತೆ ವಿವಿಧ ಬಗೆಯ ಡ್ರಗ್ಸ್‌ಗಳು ಮಾರಾಟಗೊಂಡಿವೆ ಎನ್ನಲಾಗುತ್ತಿದೆ.
ಬೋರ್ಡ್ ಹಾಕಿ ಗಮನ ಸೆಳೆದ ವ್ಯಕ್ತಿ: ಬ್ರಿಗೇಡ್ ರಸ್ತೆ ಬಳಿ ವ್ಯಕ್ತಿಯೊಬ್ಬರು ಬೆನ್ನಿಗೆ ಬೋರ್ಡ್ ತಗಲಾಕಿಕೊಂಡು ನಿಂತಿದ್ದ ದೃಶ್ಯ ಗಮನ ಸೆಳೆಯುತು. ಆ ಬೋರ್ಡ್‌ನಲ್ಲಿ ನಮಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ, ಕನಿಷ್ಠ ವೇತನದ ಉದ್ಯೋಗಗಳು ಬೇಕು ಎಂದು ಆಗ್ಲ ಭಾಷೆಯಲ್ಲಿ ನಮೂದಿಸಿ ರುವುದು ಕಂಡು ಬಂತು.
ನೂಕು ನುಗ್ಗಲು, ಯುವಕರ ನಡುವೆ ಕಿರಿಕ್: ಸಂಜೆ 4.30ಕ್ಕೆ ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್‌ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಬಳಿಕ ರಸ್ತೆಯ ಎರಡು ಕಡೆಗಳಲ್ಲೂ ಬ್ಯಾರಿಕೇಡ್ ಹಾಕಿ ಪ್ರತ್ಯೇಕವಾಗಿ ನಡೆದು ಹೋಗಲು ಸೂಚಿಸಲಾಗಿತ್ತು. ಆದರೆ, ಜನದಟ್ಟಣೆ ಹೆಚ್ಚಾಗಿದ್ದ ರಿಂದ ನೂಕು ನುಗ್ಗಲು ಉಂಟಾಗಿದ್ದರಿಂದ ಸಾರ್ವಜನಿಕರು ಬ್ಯಾರಿಕೇಡ್ ತೆರವುಗೊಳಿಸುವಂತೆ ಪೊಲೀಸರ ಜತೆ ವಾಗ್ವಾದ ನಡೆಸಿದರು. ಈ ವೇಳೆ ಯುವತಿಯೊಬ್ಬಳು ಬ್ಯಾರಿಕೇಡ್ ನಿಂದ ಜಿಗಿದು ತೆರಳಿರುವುದು ಕಂಡು ಬಂತು. ಅದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಆಕೆಗೆ ಎಚ್ಚರಿಕೆ ನೀಡಿದರು. ಆ ಬಳಿಕ ರಾತ್ರಿ 9.30ರ ಬಳಿಕ ಎಂ.ಜಿ.ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಅದಕ್ಕೂ ಮೊದಲು ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಮೆಯೋ ಹಾಲ್‌ವರೆಗೆ ರಸ್ತೆಯ ಎರಡು ಕಡೆಗಳ ಪಾದಚಾರಿ ಮಾರ್ಗದಲ್ಲಿ ಬ್ಯಾರಿಕೇಡ್ ಹಾಕಿ ಟೇಪ್ ಅಂಟಿಸಿ ಪ್ರತ್ಯೇಕವಾಗಿ ಸಂಚರಿಸಲು ಸೂಚಿಸಲಾಗಿತ್ತು.
ಎಲ್ಲೆಂದರಲ್ಲಿ ಪಟಾಕಿ ಸದ್ದು : ಇನ್ನು ರಾತ್ರಿ 12 ಗಂಟೆಯಾಗುತ್ತಿದ್ದಂತೆ ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಪ್ರಾರಂಭವಾದ ಪಟಾಕಿ ಸದ್ದು ಜ.1ರ ಮುಂಜಾನೆವರೆಗೂ ಮುಂದುವರಿಯಿತು. ಕಿವಿಗಡಚ್ಚುವ ಪಟಾಕಿ ಶಬ್ದಗಳಿಗೆ ಜನ ಸಾಮಾನ್ಯರು ಕಿವಿ ಮುಚ್ಚಿಕೊಂಡೇ ರಾತ್ರಿ ಕಳೆಯಬೇಕಾಯಿತು.
ಮುಖವಾಡ ಧರಿಸಿದ್ದ ಪುಂಡರಿಂದ ಗಲಾಟೆ, ಹಲವೆಡೆ ಮಾರಾಮಾರಿ: ಮತ್ತೂಂದೆಡೆ ಚರ್ಚ್‌ಸ್ಟ್ರೀಟ್‌ನಲ್ಲಿ ಪ್ಲಾಸ್ಟಿಕ್ ಮುಖವಾಡ ಧರಿಸಿ ಪುಂಡರು ಗಲಾಟೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಮುಖವಾಡ ಧರಿಸಿ ಗಲಾಟೆ ಮಾಡುತ್ತಿದ್ದವರಿಗೆ ವಾರ್ನಿಂಗ್ ಕೊಟ್ಟಿದ್ದು, ಅಲ್ಲದೇ ಮಾರಾಟಗಾರರ ಬಳಿಯಿದ್ದ ಮುಖವಾಡಗಳನ್ನು ವಶಕ್ಕೆ ಪಡೆದುಕೊಂಡರು. ಇನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲೂ ಯುವಕರ ನಡುವೆ ಮಾರಾಮಾರಿ ನಡೆದಿದ್ದು, ಮೇಲು ಸೇತುವೆ ಬಳಿ ಯುವಕನ ಮೇಲೆ ಮತ್ತೂಂದು ಯುವಕರ ಗುಂಪು ಹಲ್ಲೆ ನಡೆಸಿ ಪರಾರಿಯಾಗಿದೆ. ರಸ್ತೆ ಬದಿ ಬಿದ್ದಿದ್ದ ಯುವಕನನ್ನು ಪೊಲೀಸರು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೂಂದೆಡೆ ಕೋರಮಂಗಲದಲ್ಲಿ ಯುವಕನೊಬ್ಬ ಅತಿಯಾದ ಮದ್ಯ ಸೇವನೆಯಿಂದ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಿದ್ದಿದ್ದ. ಆತನನ್ನು ಪೊಲೀಸರು ಸುರಕ್ಷತಾ ಸ್ಥಳಕ್ಕೆ ಕರೆದೊಯ್ದರು.
ರೆಸಾರ್ಟ್, ಅಪಾರ್ಟ್‌ಮೆಂಟ್‌ಗಳಲ್ಲಿ ಪಾರ್ಟಿ : ರಾಜ್ಯ ರಾಜಧಾನಿ ಹಾಗೂ ಹೊರ ವಲಯದಲ್ಲಿರುವ ಪ್ರತಿ ರೆಸಾರ್ಟ್‌ಗಳು, ಬಾಡಿಗೆ ಅಪಾರ್ಟ್‌ಮೆಂಟ್‌ಗಳು, ಕೆಲವೊಂದು ಮನೆಗಳಲ್ಲಿ ಸ್ನೇಹಿತರು, ಆಪ್ತರು ಕಾಕ್‌ಟೇಲ್ ಪಾರ್ಟಿ ಮಾಡುವ ಮೂಲಕ ಹೊಸ ವರ್ಷಾಚರಣೆ ಮಾಡಿರುವುದು ವಿಶೇಷವಾಗಿತ್ತು. ಬೆಂಗಳೂರಿನ ಹೊರವಲಯದ ನಂದಿಬೆಟ್ಟದ ತಪ್ಪಲಿನ ಹಲವು ರೆಸಾರ್ಟ್‌ಗಳು, ದೇವನಹಳ್ಳಿಯ ಹ್ಯಾಂಗ್ ಔಟ್ ರೆಸಾಟ್ ìಗಳಲ್ಲಿ ಕುಣಿದು ಕುಪ್ಪಳಿಸಿ. ಶ್ರೀಮಂತ ಜೋಡಿಗಳು ಹೊಸ ವರ್ಷಾಚರಣೆ ಆಚರಿಸಿದರು. ಬಹುತೇಕ ರೆಸಾರ್ಟ್‌ಗಳಲ್ಲಿ ಬಗೆ ಬಗೆಯ ಬೇಕಾದಷ್ಟು ಆಹಾರಗಳು, ಮದ್ಯಗಳು, ಒಪನ್ ಏರಿಯಾದಲ್ಲಿ 50ಕ್ಕೂ ವಿವಿಧ ಬಗೆಯ ಊಟದ ಮೆನುವನ್ನು ರೆಸಾರ್ಟ್ ಸಿಬ್ಬಂದಿ ಉಣ ಬಡಿಸಿದರು.
ಡಿಜೆ ಸದ್ದಿನೊಂದಿಗೆ ಫೈಯರ್ ಕ್ಯಾಂಪ್: ಐಟಿ-ಬಿಟಿ ಉದ್ಯೋಗಿಗಳೇ ಹೆಚ್ಚಾಗಿ ನೆಲೆಸಿರುವ ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ರಸ್ತೆ, ಮಾರತ್ತಹಳ್ಳಿ ಸುತ್ತ-ಮುತ್ತಲೂ ಡಿಜೆ ಪಾರ್ಟಿ ಆಯೋಜಿಸಿದ್ದು ವಿಶೇಷವಾಗಿತ್ತು. ಇದರ ಪಕ್ಕದಲ್ಲೆ ನಿರ್ಮಿಸಿದ್ದ ಫೈಯರ್ ಕ್ಯಾಂಪ್‌ನಲ್ಲಿ ಯುವಕ-ಯುವತಿಯರು ಮೈ ಬೆಚ್ಚನೆ ಮಾಡಿಕೊಂಡು ಮತ್ತೆ ಡಿಜೆ ಹಾಡಿಗೆ ಹೆಜ್ಜೆ ಹಾಕಿದರು. ಕುಡಿದು ಅಸ್ವಸ್ಥಗೊಂಡವರು, ನಶೆಯಲ್ಲಿ ನಡೆದಾಡಲು ಆಗದಿರುವವರಿಗೆ ವಿಶೇಷ ಟೆಂಟ್‌ಗಳನ್ನು ಎಲ್ಲೆಂದರಲ್ಲಿ ನಿರ್ಮಿಸಲಾಗಿತ್ತು.
ನೂರಾರು ಕೋಟಿ ಮದ್ಯ ಮಾರಾಟ : ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರೊಂದರಲ್ಲೇ ನೂರಾರು ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ. ಡಿ.31ರಂದು ಬಿಯರ್, ವಿಸ್ಕಿ ಸೇರಿ ವಿವಿಧ ಬಗೆಯ ಮದ್ಯಗಳ ಖರೀದಿ ಭರಾಟೆ ಜೋರಾಗಿತ್ತು. ಇತ್ತ ಬಾರ್ ಮಾಲೀಕರು, ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಡ್ಯಾನ್ಸ್ ಬಾರ್ ಮಾಲೀಕರು ಫುಲ್ ಖುಶ್ ಆಗಿದ್ದಾರೆ.
ಕನ್ನಡ ಹಾಡಿಗಾಗಿ ಯುವಕನ ಕಿರಿಕ್: ಕೋರಮಂಗಲದ ಪ್ರತಿಷ್ಠಿತ ಪಬ್‌ವೊಂದರಲ್ಲಿ ಎಣ್ಣೆ ಮತ್ತಿನಲ್ಲಿದ್ದ ಯುವಕನೊಬ್ಬ ಕನ್ನಡ ಹಾಡಿಗಾಗಿ ಪಬ್ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ಪ್ರಸಂಗ ನಡೆಯಿತು. ತದ ನಂತರ ಸ್ಥಳಕ್ಕೆ ದೌಡಾಯಿಸಿದ ಬೌನ್ಸರ್‌ಗಳು ಹೊರಗೆ ಕಳುಹಿಸಿದರು. ಆದರೂ, ಆತ ರಸ್ತೆ ನಡುವೆಯೇ ಚೀರಾಡಿದಾಗ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಕರೆದೊಯ್ದರು.