Advertisement

ಅನುದಾನ ಬಂದರಷ್ಟೇ ಹೊಸ ಗ್ರಾಮ ಚಾವಡಿ ಕಟ್ಟಡ!

02:14 AM Jul 06, 2020 | Sriram |

ವಿಶೇಷ ವರದಿಪುತ್ತೂರು: ಕಂದಾಯ ಇಲಾಖೆ ವ್ಯಾಪ್ತಿಯ ಬಹುತೇಕ ಕಚೇರಿಗಳು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡರೂ ಗ್ರಾಮ ಚಾವಡಿ 150 ವರ್ಷಗಳ ಇತಿಹಾಸ ಹೊಂದಿರುವ ಪಟೇಲರ ಕಾಲದ ಕಟ್ಟಡದಲ್ಲೇ ಉಳಿದುಕೊಂಡಿದೆ!

Advertisement

ಮಿನಿ ವಿಧಾನಸೌಧದಲ್ಲಿ ಸ್ಥಳಾವಕಾಶದ ಕೊರತೆ ಇದೆ. ಸರಕಾರದಿಂದ ಅನುದಾನ ಬಂದರಷ್ಟೇ ಹೊಸ ಕಟ್ಟಡ ಕಟ್ಟುವ ಯೋಜನೆ ಇದ್ದು, ಅಲ್ಲಿಯ ತನಕ ಹಳೆ ಕಟ್ಟಡವೇ ಕಂದಾಯ ನಿರೀಕ್ಷಕರಿಗೆ, ಗ್ರಾಮಕರಣಿಕರಿಗೆ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಮೀಸಲು.

ಶತಮಾನದ ಕಟ್ಟಡ
ನಗರದ ಕೋರ್ಟ್‌ ರಸ್ತೆಗೆ ಅಭಿಮುಖ ವಾಗಿರುವ ಈ ಕಟ್ಟಡಕ್ಕೆ 150 ವರ್ಷ ದಾಟಿದೆ ಅನ್ನುವುದು ಹಿರಿಯರ ಅಭಿಪ್ರಾಯ. ಸುಣ್ಣ-ಬಣ್ಣ ಕಾಣದೆ ವರ್ಷಗಳು ಕಳೆದರೂ ಸದೃಢವಾಗಿದೆ. ಒಳಭಾಗ ಸೋರುತ್ತಿಲ್ಲ. ದಾಖಲೆ ಪತ್ರಗಳನ್ನು ಭದ್ರವಾಗಿಡಲು ವ್ಯವಸ್ಥೆಯಿದೆ. ಕಿಟಿಕಿ- ಬಾಗಿಲುಗಳು ಒಂದಷ್ಟು ಕಳೆಗೆಟ್ಟಿವೆ ಎನ್ನು ವುದನ್ನು ಬಿಟ್ಟರೆ, ಮಿಕ್ಕೆಲ್ಲವೂ ಸುಭದ್ರ. ಕಟ್ಟಡದಲ್ಲಿ ಸ್ವಾತಂತ್ರ್ಯಪೂರ್ವದ ಪಟೇಲರ ಅಸ್ತಿತ್ವವನ್ನು ಗುರುತಿಸುವ ಸಾಕ್ಷಿಗಳಿವೆ.

ಗ್ರಾಮ ಲೆಕ್ಕಿಗರ ಕಚೇರಿ ವಿನ್ಯಾಸ ಹಳೆ ಕಟ್ಟಡಗಳ ಶೈಲಿಯಲ್ಲಿದೆ.ಒಳಭಾಗದಲ್ಲಿ ಕುಳಿತುಕೊಳ್ಳಲು ಕಲ್ಲಿನ ಆಸನ, ಗೋಡೆ ಶೈಲಿ ಇನ್ನಷ್ಟು ಚಿತ್ರಣ ತೆರೆದಿಡುತ್ತದೆ.

ಕಂದಾಯ ನಿರೀಕ್ಷಕರ ಕಚೇರಿ
ಗ್ರಾಮಮಟ್ಟದಿಂದ ಭೂ ದಾಖಲೆಗೆ ಸಂಬಂಧಿಸಿ ಬರುವ ಎಲ್ಲ ಕಡತಗಳು ಗ್ರಾಮಕರಣಿಕರ ಮೂಲಕ ಕಂದಾಯ ನಿರೀಕ್ಷಕರ ಕಚೇರಿಗೆ ಬರುತ್ತವೆ. ಅಲ್ಲಿಂದ ಟಪಾಲು ಮೂಲಕ ತಹಶೀಲ್ದಾರ್‌ಗೆ ಸಲ್ಲಿಕೆ ಆಗುತ್ತದೆ.

Advertisement

ಪುತ್ತೂರಿನ ಗ್ರಾಮ ಚಾವಡಿಯಲ್ಲಿ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗರ ಪ್ರತ್ಯೇಕ ಕಚೇರಿಗಳಿವೆ. ಒಂದು ಭಾಗದಲ್ಲಿ ಕಂದಾಯ ನಿರೀಕ್ಷಕರ ಕಚೇರಿ, ಇನ್ನೊಂದು ತಾಲೂಕಿನ ಎಲ್ಲ ಗ್ರಾಮ ಲೆಕ್ಕಿಗರು ಹಾಜಗಾರುವ ನಿಟ್ಟಿನಲ್ಲಿ ಛಾವಡಿ ಇದೆ. ಪುತ್ತೂರು ಹೋಬಳಿಯ ಎಲ್ಲ ಕಂದಾಯ ಲೆಕ್ಕಾಚಾರ ಇಲ್ಲೇ ನಡೆಯುತ್ತದೆ. ಇದು ಅಧಿಕಾರಿಗಳು ಮತ್ತು ಜನರು ದಿನಪೂರ್ತಿ ಓಡಾಟವಿರುವ ಕಚೇರಿಯು ಆಗಿದೆ. ಸುರಕ್ಷೆಯ ದೃಷ್ಟಿಯಲ್ಲಿ ಇದರ ಪುನರ್‌ ನಿರ್ಮಾಣದ ಬೇಡಿಕೆಯೂ ಇದೆ.

ಪಟೇಲರ ದಂಡ
ಪಟೇಲರ ಗೌರವಾರ್ಥ ಸಹಾಯಕ ಹಿಡಿದುಕೊಳ್ಳುವ ದಂಡ, ಪುತ್ತೂರು ಗ್ರಾಮ ಚಾವಡಿಯಲ್ಲಿ ಜೋಪಾನವಾಗಿರುವುದು ವಿಶೇಷ. ನ್ಯಾಯ ತೀರ್ಮಾನದ ಸ್ಥಳದಲ್ಲಿ ಇದನ್ನು ಹಿಡಿದುಕೊಳ್ಳಲಾಗುತ್ತದೆ. ನ್ಯಾಯಾಲಯದಲ್ಲಿ ಈಗಲೂ ದಂಡ ಹಿಡಿದುಕೊಳ್ಳುವ ಸಂಪ್ರದಾಯ ಮುಂದುವರಿದಿದೆ. ದಂಡದ ತುದಿ ಭಾಗದಲ್ಲಿ ಮೂರು ಕಬ್ಬಿಣದ ಪಟ್ಟಿಗಳಿವೆ. ಗ್ರಾಮ ಚಾವಡಿಯ ಹಂಚಿನ ಮೇಲೆ ಮೂರು ಕಲಶಗಳು ಶೋಭಿಸುತ್ತಿವೆ. ದೇವಸ್ಥಾನದ ಮುಗುಳಿ (ಕಲಶ)ಯನ್ನು ಹೋಲುತ್ತಿದ್ದು, ಇದು ಮಣ್ಣಿನ ರಚನೆಯದ್ದಾಗಿದೆ.

ಅನುದಾನ ಈಗಿಲ್ಲ
ಈಗ ಅನುದಾನ ಇಲ್ಲ. ಸರಕಾರದಿಂದ ಬಿಡುಗಡೆಯಾದಲ್ಲಿ ಹೊಸ ಕಟ್ಟಡ ಕಟ್ಟುವ ಬಗ್ಗೆ ಯೋಜನೆ ರೂಪಿಸಲಾಗುತ್ತದೆ.
– ರಮೇಶಬಾಬು
ತಹಶೀಲ್ದಾರ್‌, ಪುತ್ತೂರು

ಸಮಸ್ಯೆ ಉಂಟಾಗಿಲ್ಲ
ಹಳೆ ಕಟ್ಟಡವಾದರೂ ಈ ತನಕ ಸಮಸ್ಯೆ ಆಗಿಲ್ಲ. ಕಂದಾಯ ನಿರೀಕ್ಷಕರ ವ್ಯಾಪ್ತಿಯ ಎಲ್ಲ ಕೆಲಸಗಳು ಇಲ್ಲಿ ನಡೆಯುತ್ತವೆ.
-ರವಿ, ಕಂದಾಯ ನಿರೀಕ್ಷಕ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next