Advertisement

ನೂತನ ಕಿಂಡಿ ಅಣೆಕಟ್ಟಿನಿಂದ ಸಮೃದ್ಧ ಜಲ

08:46 PM Jan 27, 2022 | Team Udayavani |

ಬಂಟ್ವಾಳ: ಗ್ರಾಮೀಣ ಭಾಗ ಗಳಲ್ಲಿ ಕಿಂಡಿ ಅಣೆಕಟ್ಟುಗಳೇ ಕೃಷಿ ತೋಟ ಗಳಿಗೆ ವರದಾನವಾಗುತ್ತಿದ್ದು, ಪಂಜಿಕಲ್ಲು ಗ್ರಾ.ಪಂ. ವ್ಯಾಪ್ತಿಯ ತಿಮರೋಡಿಯಲ್ಲಿ ನಿರ್ಮಾಣಗೊಂಡ ನೂತನ ಕಿಂಡಿ ಅಣೆಕಟ್ಟಿನಿಂದ ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಹಿನ್ನೀರು ಸಂಗ್ರಹಗೊಂಡು ಹತ್ತಾರು ಎಕ್ರೆ ಕೃಷಿ ಭೂಮಿಗೆ ವರದಾನವಾಗಿದೆ.

Advertisement

ತಿಮರೋಡಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಹಾಗೂ ದಿಶಾ ಟ್ರಸ್ಟ್‌ ಎಂಬ ಎನ್‌ಜಿಒ ಸಂಸ್ಥೆಯ ಸಹಯೋಗದಲ್ಲಿ ಒಟ್ಟು ಸುಮಾರು 6.20 ಲಕ್ಷ ರೂ. ವೆಚ್ಚ ದಲ್ಲಿ ನಿರ್ಮಾಣಗೊಂಡ ಈ ಕಿಂಡಿ ಅಣೆ ಕಟ್ಟಿನಿಂದ ಪಂಜಿಕಲ್ಲು, ಕೇಲ್ದೋಡಿ ಭಾಗದ ಕೃಷಿ ಭೂಮಿಯ ಅಂತರ್ಜಲ ವೃದ್ಧಿಗೆ ನೆರವಾಗಲಿದೆ.

ಈ ಕಿಂಡಿ ಅಣೆಕಟ್ಟಿನಲ್ಲಿ ಇದೇ ಮೊದಲ ಬಾರಿಗೆ ನೀರು ಸಂಗ್ರಹಗೊಂಡಿದ್ದು, ಕಾಲುಸಂಕವಾಗಿಯೂ ಇದು ಸ್ಥಳೀಯ ಕೃಷಿಕರಿಗೆ ಪ್ರಯೋಜನವಾಗಲಿದೆ. ಈ ಹಿಂದೆ ಇಲ್ಲಿ ಅಡಿಕೆ ಮರದ ಸೇತುವೆ ಮೂಲಕ ಹಳ್ಳ ದಾಟಲಾಗುತ್ತಿತ್ತು. ಈ ಭಾಗದಲ್ಲಿ ಸಾಕಷ್ಟು ಕಡೆಗಳಲ್ಲಿ ನೀರು ಸಂಗ್ರಹಕ್ಕೆ ಮಣ್ಣಿನ ಕಟ್ಟಗಳಿದ್ದರೂ, ಈ ರೀತಿ ವ್ಯವಸ್ಥಿತವಾಗಿ ಇದೇ ಮೊದಲ ಬಾರಿಗೆ ಅಣೆಕಟ್ಟು ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

7 ಮೀ. ಅಗಲಕ್ಕೆ ನೀರು ಸಂಗ್ರಹ:

ವಿಪರೀತ ಮಳೆಯ ಪರಿಣಾಮ ಅಣೆಕಟ್ಟಿನ ಕಾಮಗಾರಿಗೆ ಅಡ್ಡಿಯಾದ ಪರಿಣಾಮ ಕಾಮಗಾರಿ ಕೊಂಚ ವಿಳಂಬವಾದರೂ, ಸುಮಾರು 25 ದಿನಗಳಿಂದ ಅಣೆಕಟ್ಟಿನಲ್ಲಿ ಎಂ.ಎಸ್‌.ತಗಡಿನ ಹಲಗೆ (ಶೀಟ್‌)ಗಳ ಮೂಲಕ ನೀರು ನಿಲ್ಲಿಸಲಾಗುತ್ತಿದೆ. ಅಣೆಕಟ್ಟಿನ ಫ್ಲಾಸ್ಟರಿಂಗ್‌ ಕೆಲಸ ಬಾಕಿ ಇದ್ದು, ಮುಂದಿನ ದಿನಗಳಲ್ಲಿ ಅದನ್ನು ಪೂರ್ಣ ಗೊಳಿಸಬೇಕಿದೆ. ಆದರೆ ಪ್ರಸ್ತುತ ಯಾವುದೇ ಆತಂಕವಿಲ್ಲದೆ ನೀರು ನಿಲ್ಲಿಸುವ ಕಾರ್ಯ ಮಾಡಲಾಗಿದೆ.

Advertisement

2 ಮೀ. ಸಂಗ್ರಹ:

ಸುಮಾರು 7 ಮೀ. ಅಗಲದಲ್ಲಿ ನೀರು ನಿಲ್ಲುತ್ತಿದ್ದು, 2 ಮೀ. ಎತ್ತರದಲ್ಲಿ 500 ಮೀ. ವರೆಗೆ ಹಿನ್ನೀರು ವ್ಯಾಪಿ ಸಿದೆ. ಪ್ರಸ್ತುತ ತೋಟಕ್ಕೆ ಈ ಕಿಂಡಿ ಅಣೆ ಕಟ್ಟಿನಿಂದ ನೀರು ತೆಗೆಯದೇ ಇದ್ದರೂ, ಅಣೆಕಟ್ಟಿನ ಹಿನ್ನೀರು ಸುಮಾರು 3 ಎಕ್ರೆಯಷ್ಟಿರುವ ಗದ್ದೆಗೆ ಹರಿದು ಹೋಗುತ್ತಿದೆ. ಶೀಟ್‌ ಅಳವಡಿಸಿದ ಪ್ರಾರಂಭದಲ್ಲಿ ಅಣೆಕಟ್ಟಿನ ಮೇಲಿನಿಂದ ನೀರು ಹೋಗುತ್ತಿದ್ದರೂ, ಪ್ರಸ್ತುತ ನೀರು ಕಡಿಮೆಯಾಗಿರುವುದರಿಂದ 2 ಮೀ. ಎತ್ತರದಲ್ಲಿ ಸಂಗ್ರಹಗೊಂಡಿದೆ.

ತಿಮರೋಡಿನಲ್ಲಿ ಒಟ್ಟು  6.20 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟಿಗೆ 3.20 ಲಕ್ಷ ರೂ. ನರೇಗಾದಲ್ಲಿ ಒದಗಿಸಲಾಗಿದ್ದು, 3 ಲಕ್ಷ ರೂ. ದಿಶಾ ಎನ್‌ಜಿಒ ಒದಗಿಸಿದೆ. ಹಳ್ಳದ ಅಗಲ 7 ಮೀ. ಇದ್ದು, 2 ಮೀ. ಎತ್ತರಕ್ಕೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಭತ್ತದ ಗದ್ದೆಯ ಜತೆಗೆ ಅಂತರ್ಜಲ ವೃದ್ಧಿಗೆ ಇದು ನೆರವಾಗಲಿದೆ. -ವಿದ್ಯಾಶ್ರೀ ಕೆ.,  ಪಿಡಿಒ, ಪಂಜಿಕಲ್ಲು.

ನರೇಗಾ ಹಾಗೂ ದಿಶಾ ಟ್ರಸ್ಟ್‌ ಎನ್‌ಜಿಒ ಸಂಸ್ಥೆಯ ಸಹಯೋಗದೊಂದಿಗೆ ನಿರ್ಮಾಣಗೊಂಡ ಈ ಕಿಂಡಿ ಅಣೆಕಟ್ಟಿನಿಂದ ಭತ್ತದ ಗದ್ದೆ ಹಾಗೂ ಅಡಿಕೆ ತೋಟಕ್ಕೆ ನೀರಿನ ಆಶ್ರಯ ಸಿಕ್ಕಿದಂತಾಗಿದ್ದು, 500 ಮೀ. ವ್ಯಾಪ್ತಿವರೆಗೂ ನೀರು ನಿಂತಿದೆ. ಸುಮಾರು 25 ದಿನಗಳ ಹಿಂದೆ ಹಲಗೆ(ಶೀಟ್‌) ಹಾಕಲಾಗಿದ್ದು, ಪ್ರಾರಂಭದಲ್ಲಿ ನೀರು ಮೇಲಿನಿಂದ ಹರಿದು ಹೋಗುತ್ತಿತ್ತು. -ಅರುಣ್‌ ತಿಮರೋಡಿ, ಸ್ಥಳೀಯ ಕೃಷಿಕ.

 

Advertisement

Udayavani is now on Telegram. Click here to join our channel and stay updated with the latest news.

Next