Advertisement

ಭಾರತೀಯ ಕುಸ್ತಿ ಬಿಕ್ಕಟ್ಟಿಗೆ ಹೊಸ ತಿರುವು: ಜೂನಿಯರ್‌ ಕುಸ್ತಿಪಟುಗಳಿಂದ ಪ್ರತಿಭಟನೆ

11:40 PM Jan 03, 2024 | Team Udayavani |

ಹೊಸದಿಲ್ಲಿ: ತಮ್ಮ ಕ್ರೀಡಾ ಬಾಳ್ವೆಯ ಮಹತ್ವದ ಒಂದು ವರ್ಷದ ನಷ್ಟದ ಸ್ಥಿತಿಗೆ ಅಗ್ರ ಕುಸ್ತಿಪಟುಗಳಾದ ಬಜರಂಗ್‌ ಪೂನಿಯ, ಸಾಕ್ಷಿ ಮಲಿಕ್‌ ಮತ್ತು ವಿನೇಶ್‌ ಪೊಗಟ್‌ ಅವರು ಕಾರಣರು ಎಂದು ಆರೋಪಿಸಿರುವ ನೂರಾರು ಜೂನಿಯರ್‌ ಕುಸ್ತಿಪಟುಗಳು ಬುಧವಾರ ಇಲ್ಲಿನ ಜಂತರ್‌ಮಂತರ್‌ನಲ್ಲಿ ಸೇರಿ ಪ್ರತಿಭಟನೆ ನಡೆಸುವ ಮೂಲಕ ಕುಸ್ತಿ ಬಿಕ್ಕಟ್ಟು ಹೊಸ ತಿರುವು ಪಡೆಯಿತು.

Advertisement

ಉತ್ತರ ಪ್ರದೇಶ, ಹರಿಯಾಣ ಮತ್ತು ದಿಲ್ಲಿಯ ವಿವಿಧ ಕಡೆಗಳಿಂದ ಬಸ್‌ಗಳಲ್ಲಿ ಆಗಮಿಸಿದ ಕುಸ್ತಿಪಟುಗಳು ಜಂತರ್‌ ಮಂತರ್‌ನಲ್ಲಿ ಜಮಾಯಿಸಿದರಲ್ಲದೇ ವರ್ಷದ ನಷ್ಟಕ್ಕೆ ಬಜರಂಗ್‌, ಸಾಕ್ಷಿ, ವಿನೇಶ್‌ ಕಾರಣರು ಎಂದು ಹೇಳುವ ಪೋಸ್ಟರ್‌ಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಈ ಮೂವರು ಕುಸ್ತಿಪಟುಗಳಿಂದ ನಮ್ಮ ಕುಸ್ತಿಯನ್ನು ರಕ್ಷಿಸಿ ಎಂದು ಬರೆದಿರುವ ಪೋಸ್ಟರ್‌ಗಳನು½ ಅವರೆಲ್ಲ ಹಿಡಿದಿದ್ದರು. ಜೂನಿ ಯರ್‌ ಕುಸ್ತಿಪಟುಗಳ ಈ ಅನಿರೀಕ್ಷಿತ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ವಿವಿಧ ಅಕಾಡೆಮಿಗಳಲ್ಲಿ ತರಬೇತಿ ಪಡೆಯು ತ್ತಿರುವ ಕುಸ್ತಿಪಟುಗಳು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ಆಶ್ಚರ್ಯವೆಂಬಂತೆ ವರ್ಷದ ಹಿಂದೆ ಇದೇ ಸಮಯ ಮತ್ತು ಸ್ಥಳದಲ್ಲಿ ಬಜರಂಗ್‌ ಪೂನಿಯ, ಸಾಕ್ಷಿ ಮತ್ತು ವಿನೇಶ್‌ ಪೊಗಟ್‌ ಅವರು ಆಗಿನ ಫೆಡರೇಶನ್‌ ಅಧ್ಯಕ್ಷ ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ವಜಾಗೊಳಿಸಲು ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.

ಫೆಡರೇಶನ್‌ಗೆ ವಿರೋಧವಿಲ್ಲ
ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಆಪ್ತ ಸಂಜಯ್‌ ಸಿಂಗ್‌ ಅವರನ್ನು ಫೆಡರೇಶನ್‌ನಿಂದ ದೂರವಿಟ್ಟರೆ ಹೊಸದಾಗಿ ನೇಮಕಗೊಂಡ ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್ಐ) ಬಗ್ಗೆ ನನಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಸಾಕ್ಷಿ ಮಲಿಕ್‌ ಹೇಳಿದ್ದಾರೆ.
ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಸಂಜಯ್‌ ಸಿಂಗ್‌ ಅವರು ಚುನಾವಣೆ ಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ರುವುದನ್ನು ಪ್ರತಿಭಟಿಸಿ ಡಿ. 21ರಂದು ಸಾಕ್ಷಿ ಮಲಿಕ್‌ ಅವರು ಕುಸ್ತಿ ಸ್ಪರ್ಧೆಯಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು.

6 ವಾರಗಳಲ್ಲಿ ಅಂಡರ್‌-15, 20 ರಾ. ಕುಸ್ತಿ
ಹೊಸದಿಲ್ಲಿ: ಜೂನಿಯರ್‌ ಕುಸ್ತಿಪಟುಗಳು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಂತೆ ದೇಶದಲ್ಲಿ ಸದ್ಯ ಕುಸ್ತಿ ವ್ಯವಹಾರಗಳನ್ನು ನಿರ್ವಹಿ ಸುತ್ತಿರುವ ತಾತ್ಕಾಲಿಕ ಸಮಿತಿಯು ಬುಧವಾರ ಮುಂದಿನ ಆರು ವಾರಗಳ ಒಳಗಡೆ ಅಂಡರ್‌- 15 ಮತ್ತು ಅಂಡರ್‌ -20 ರಾಷ್ಟ್ರೀಯ ಕುಸ್ತಿ ಸ್ಪರ್ಧೆ ಆಯೋಜಿಸುವುದಾಗಿ ಪ್ರಕಟಿಸಿದೆ. ಪ್ರತಿಭಟನೆ ವೇಳೆ ಕುಸ್ತಿಪಟುಗಳು ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ ರಚಿಸಿದ ತಾತ್ಕಾಲಿಕ ಸಮಿತಿಯನ್ನು ವಿಸರ್ಜಿಸುವಂತೆ ಆಗ್ರಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next