Advertisement
19 ಅರ್ಥಧಾರಿಗಳು, 6 ಮಂದಿ ಖ್ಯಾತ ಭಾಗವತರು ಸೇರಿ ಒಟ್ಟು 25 ಮಂದಿ ಕಲಾವಿದರಿದ್ದರು. ಏನಾದರೂ ಒಂದು ಹೊಸದನ್ನು ನೀಡಬೇಕು ಎಂಬ ಆಸೆ ಮತ್ತು ಬಯಕೆಯೊಂದಿಗೆ ಚಿಂತಿಸಿದಾಗ ಹುಟ್ಟು ಪಡೆದದ್ದೇ ಈ ಜೋಡು ತಾಳ ಮದ್ದಳೆ ಕೂಟ. ಈ ಕೂಟದ ಹಿಂದೆ ಒಂದು ಸುವ್ಯವಸ್ಥಿತ ಯೋಜನೆಯನ್ನೂ ಚಂದ್ರಹಾಸ ಅವರು ಮಾಡಿದ್ದರು. ಅವರೇ ಹೇಳಿಕೊಂಡ ಪ್ರಕಾರ, ಯಾವ ಹಾಡನ್ನು ಯಾವ ಭಾಗವತರು ಹಾಡಬೇಕು, ಯಾವ ಹಾಡಿಗೆ ಯಾವ ಕಲಾವಿದ ಅರ್ಥ ಹೇಳಬೇಕು, ಒಬ್ಬ ಕಲಾವಿದ ಕನಿಷ್ಠ 2 ಪದ್ಯಗಳಿಗೆ ಅರ್ಥ ಹೇಳಲೇಬೇಕು, ಕಥೆ ಎಲ್ಲಿಂದ ಆರಂಭವಾಗಬೇಕು …ಇತ್ಯಾದಿಗಳನ್ನೆಲ್ಲ ಕಾರ್ಯಕ್ರಮಕ್ಕೆ ಮುಂಚಿತವಾಗಿಯೇ ಕಲಾವಿದರಿಗೆ ಲಿಖೀತವಾಗಿ ತಿಳಿಸಲಾಗಿತ್ತು. ಇವುಗಳನ್ನು ತಿಳಿಸುವ ಹೊತ್ತಿಗೆ ಒಂದು ಮೊತ್ತದ ಗೌರವ ಧನ ಮತ್ತು ಸ್ಮರಣಿಕೆ ನೀಡಲಾಗಿತ್ತು.
ಜೋಡು ತಾಳ ಮದ್ದಳೆ ಕೂಟ ಹೇಗೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಅದಕ್ಕೆ ಉತ್ತರ ಸಿಕ್ಕಿದ್ದು ಆ ವೇದಿಕೆಯಿಂದಲೇ. ಒಂದೊಂದು ಪಾತ್ರದಲ್ಲಿ ಇಬ್ಬಿಬ್ಬರು ಮುಖಾಮುಖಿಯಾಗುವುದು. ಒಬ್ಬ ಹೇಳಿದ ಅರ್ಥಕ್ಕೆ ಎದುರಿನಿಂದ ಮತ್ತೂಬ್ಬ ಉತ್ತರಿಸುವುದು, ಮತ್ತೂಬ್ಬ ಹೇಳಿದ ಅರ್ಥಕ್ಕೆ ಇನ್ನೊಬ್ಬ ಉತ್ತರಿಸುವುದು. ಆಗ ಅಲ್ಲಿ ಚಿಂತನೆ ಹೆಚ್ಚು ವಿಶಾಲವಾಗುತ್ತದೆ. ಒಂದು ಪಾತ್ರ ಒಬ್ಬರು ಕಲಾವಿದರಲ್ಲಿ ಹೊರ ಹೊಮ್ಮುತ್ತದೆ. ಕರ್ಣ ಮತ್ತು ಅರ್ಜುನನಾಗಿ ತಲಾ ನಾಲ್ವರು ಅರ್ಥಧಾರಿಗಳಿದ್ದರು. ಬೆಳಗ್ಗೆ 10.30ಕ್ಕೆ ಆರಂಭವಾದ ಕೂಟ ಮುಸ್ಸಂಜೆ 7.30ರ ವರಗೆ ವಿರಾಮರಹಿತವಾಗಿ ಮುಂದುವರಿದಿತ್ತು. ಮಾತಿನ ಮಂಥನಕ್ಕೆ ಕಿಂಚಿತ್ ಕೊರತೆಯೂ ಆಗಿಲ್ಲ. ವಾದ-ಪ್ರತಿವಾದದ ಖುಷಿಯಲ್ಲಿ ಪ್ರೇಕ್ಷಕರು ಮಿಂದೆದಿದ್ದರು.
Related Articles
ಕೂಟದಲ್ಲಿ ಯಕ್ಷಗಾನದ ಸಂಪ್ರದಾಯಕ್ಕೂ ಮನ್ನಣೆ ನೀಡಲಾಗಿದೆ. ಇಲ್ಲಿ ದ್ವಂದ್ವ ಹಾಡುಗಾರಿಕೆಯಿತ್ತು. ಬೆಳಗ್ಗಿನ ಅವಧಿಯಲ್ಲಿ ಬಲಿಪ ಪ್ರಸಾದ ಮತ್ತು ಪುಂಡಿಕಾ ಗೋಪಾಲ ಕೃಷ್ಣ ಭಟ್ ಅವರಿದ್ದರು. ಒಂದೇ ಶೈಲಿಯ ಇಬ್ಬರನ್ನು ಒಂದೇ ಹೊತ್ತಿನಲ್ಲಿ ದ್ವಂದ್ವಕ್ಕೆ ಆರಿಸಿಕೊಂಡದ್ದೇಕೆ ಎಂಬ ಪ್ರಶ್ನೆಗೆ ಚಂದ್ರಹಾಸ ಅವರು ಉತ್ತರಿಸಿದ್ದು , ಬೆಳಗ್ಗಿನ ಅವಧಿಯಲ್ಲಿ ಆದಷ್ಟು ಸಂಪ್ರದಾಯ ಉಳಿಯಲಿ ಎಂಬ ಉದ್ದೇಶ ಎಂಬುದು.
Advertisement
ಈ ಜೋಡು ತಾಳ ಮದ್ದಳೆ ಕೂಟವು ಚಂದ್ರ ಹಾಸ ಬಾಳರದ್ದೇ ಕಲ್ಪನೆ ಮತ್ತು ಮುಂದೆ ಇಂಥ ಕೂಟ ಮಾಡುವಾಗ ಇವರ ಉಲ್ಲೇಖವಾಗುವುದು ಅಗತ್ಯ. ಹೊಸತನ ಅನ್ವೇಷಣೆಯಲ್ಲಿರುವ ಯಕ್ಷಗಾನ ರಂಗಕ್ಕೆ ಇದೊಂದು ಅಮೂಲ್ಯ ಕೊಡುಗೆಯೇ. ಮುಂದಿನ ದಿನಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಬರುವುದು ಖಚಿತ. ಕಾರ್ಯಕ್ರಮಕ್ಕೆ ದೀರ್ಘ ಕಾಲಾವಕಾಶ ಬೇಕಿದೆಯಾದರೂ ಇಲ್ಲಿ ಮಾತಿನ ಮಂಥನವಾಗುತ್ತದೆ. ಒಂದು ನಿರ್ದಿಷ್ಟ ಪಾತ್ರದಲ್ಲಿ ಯಾವ ಕಲಾವಿದ ಹೆಚ್ಚು ಮಿಂಚಲು ಸಮರ್ಥ ಎಂಬುದಕ್ಕೂ ಇದೊಂದು ಪರೀಕ್ಷಾ ವೇದಿಕೆಯಾಗುತ್ತದೆ.
ಹೀಗೆ ಜೋಡು ತಾಳಮದ್ದಳೆ ಕೂಟವೊಂದನ್ನು ಚಂದ್ರಹಾಸ ಬಾಳ ಅವರು ಯಕ್ಷಗಾನ ರಂಗಕ್ಕೆ ಪರಿಚಯಿಸಿದ್ದಾರೆ. ಮುಂದೆ ಇದರ ಭವಿಷ್ಯ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪುತ್ತಿಗೆ ಪದ್ಮನಾಭ ರೈ