Advertisement
ನಿಮ್ಮ ವಾರ್ಡ್‌ರೋಬ್‌ನಲ್ಲಿ ಹುಡಿ ಇದೆಯಾ?.. ಯಾರಾದ್ರೂ ಹೀಗೆ ಕೇಳಿದರೆ ಹುಬ್ಬೇರಿಸಬೇಡಿ. ಹುಡಿ ಅಂದ್ರೆ, ರಂಗೋಲಿ ಹುಡಿ ಅಲ್ಲ. ಅಕ್ಕಿ, ರಾಗಿ, ಜೋಳದ ಹುಡಿಯೂ ಅಲ್ಲ. ಸ್ವೆಟರ್‌ನಂತೆ ಕಾಣುವ, ಆದರೂ ಸ್ವೆಟರ್ ಅಲ್ಲದ, ಸ್ವೆಟ್ ಶರ್ಟ್‌ಗೆ ಹುಡಿ ಅನ್ನುತ್ತಾರೆ. ಸರಳವಾಗಿ ಹೇಳುವುದಾದ್ರೆ, ತಲೆಗವಸು ಇರುವ ಸ್ವೆಟ್ ಶರ್ಟ್‌ಗೆ ಹುಡಿ ಎಂದು ಹೆಸರು.
ಇವನ್ನು ಜೀನ್ಸ್ ಪ್ಯಾಂಟ್, ಸ್ಕರ್ಟ್ (ಲಂಗ), ಶಾರ್ಟ್ಸ್, ಪೆಡಲ್ ಪುಷರ್ಸ್ (ಮುಕ್ಕಾಲು ಪ್ಯಾಂಟ್), ಡಂಗ್ರೀಸ್, ಮುಂತಾದ ವೆಸ್ಟರ್ನ್ (ಪಾಶ್ಚಾತ್ಯ) ಉಡುಪುಗಳ ಜೊತೆ ಧರಿಸುವ ಅಂಗಿಯ ಮೇಲೆ ಧರಿಸಬಹುದು. ಇಂಥ ಹುಡಿಗಳನ್ನು ಹೆಚ್ಚಾಗಿ ಕ್ಯಾಶುವಲ್ ಪ್ಯಾಂಟ್- ಶರ್ಟ್ ಜೊತೆ ಉಡುತ್ತಾರೆ. ಕುರ್ತಾ, ಚೂಡಿದಾರ್‌ನಂಥ ಸಾಂಪ್ರದಾಯಿಕ ಶೈಲಿಯ ಮೇಲೆ ಸ್ವೆಟರ್‌ನಂತೆ ಕೂಡಾ ತೊಡಬಹುದು. ಸ್ವೆಟರ್ ಅನ್ನು ಚಳಿ-ಮಳೆಗಾಲದಲ್ಲಿ ಮಾತ್ರ ಧರಿಸಬಹುದು. ಬೇಸಿಗೆಯಲ್ಲಿ ಸ್ವೆಟರ್ ಧರಿಸಿ ಓಡಾಡುವುದು ಫ್ಯಾಷನ್ ಅನ್ನಿಸಿಕೊಳ್ಳದು. ಆದರೆ, ಹುಡಿಯನ್ನು ಎಲ್ಲ ಕಾಲದಲ್ಲಿಯೂ ಧರಿಸಬಹುದು.
Related Articles
ದಿನ ನಿತ್ಯ ತೊಡುವ ಧರಿಸಿನ ಜೊತೆ ಇಂಥ ಹುಡಿಗಳು ಅಂದವಾಗಿ ಕಾಣುತ್ತವೆ. ದುಪಟ್ಟಾದ ಹಂಗಿಲ್ಲದೆ ಧರಿಸಬಹುದಾದ ಲೆಗಿಂಗ್-ಕುರ್ತಾ ಮೇಲೆ ಹುಡಿ ಧರಿಸಲು ಯುವತಿಯರು ಇಷ್ಟಪಡುತ್ತಿದ್ದಾರೆ. ಅಂಗಿ ಅಥವಾ ಕುರ್ತಿಗೆ ಇಸ್ತ್ರಿ ಹಾಕಿಲ್ಲ, ಇಸ್ತ್ರಿ ಹಾಕಲು ಪುರುಸೊತ್ತಿಲ್ಲ ಅಂತಾದರೆ ಅದರ ಮೇಲೆ ಹುಡಿ ತೊಡಬಹುದು! ಹಾಗಾಗಿ, ದಿನನಿತ್ಯ ಗಡಿಬಿಡಿಯಲ್ಲಿ ಹೊರಡುವ ಹೆಚ್ಚಿನ ಯುವತಿಯರು ನಾಲ್ಕೈದು ಹುಡಿಗಳನ್ನು ವಾರ್ಡ್‌ರೋಬ್‌ಗ ಸೇರಿಸಿಕೊಳ್ಳಬಹುದು.
Advertisement
ವಿಧವಿಧದ ಹುಡಿಜೇಬುಗಳಿರುವ ಹುಡಿ, ಜಿಪ್, ಲಾಡಿ, ಬಟನ್ (ಗುಂಡಿಗಳು), ಬಕಲ್ ಅಥವಾ ಹುಕ್‌ಗಳಿರುವ ಹುಡಿಗಳು, ಟಿ-ಶರ್ಟ್‌ನಂತೆ ಫನ್ನಿ ಸ್ಲೋಗನ್ (ಘೋಷವಾಕ್ಯಗಳು) ಇರುವ ಹುಡಿ, ವ್ಯಂಗ್ಯ ಚಿತ್ರಗಳು, ನಿಯಾನ್ ಬಣ್ಣಗಳಿಂದ (ಕತ್ತಲೆಯಲ್ಲಿ ಬೆಳಗುವ ಬಣ್ಣ) ಮೂಡಿಸಿದ ಅಕ್ಷರಗಳು, ಪದಗಳು, ಚಿಹ್ನೆಗಳು, ಆಕಾರಗಳು, ಚಿತ್ರಗಳಿರುವ ಹುಡಿ…ಹೀಗೆ, ಹುಡಿಗಳ ಸಾಮ್ರಾಜ್ಯ ವಿಸ್ತಾರವಾಗಿದೆ. ಸ್ವಲ್ಪ ಬಿಗಿಯಾದ ಹುಡಿ, ಸಡಿಲವಾದ ಓವರ್ ಸೈಜ್ಡ್ ಹುಡಿ, ಬಾಯ್‌ಫ್ರೆಂಡ್ ಹುಡಿ, ಮೊಣಕಾಲಿಗಿಂತ ಸ್ವಲ್ಪ ಮೇಲಕ್ಕೆ ತಲುಪುವ ಹುಡಿ, ಸೊಂಟದವರೆಗೆ ಬರುವಂಥ ಹುಡಿ, ಹೊಟ್ಟೆ ಕಾಣುವಂಥ ಕ್ರಾಪ್ ಟಾಪ್ ಮಾದರಿಯ ಹುಡಿ… ಹೀಗೆ, ಅನೇಕ ಸ್ಟೈಲ್‌ನ ಹುಡಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಹುಡಿ, ಬಿಂದಾಸಾಗಿ ತೊಡಿ ಹುಡಿಗಳನ್ನು ಕಾಲೇಜು, ಆಫೀಸ್, ಜಿಮ…, ಜಾಗಿಂಗ್, ಸೈಕ್ಲಿಂಗ್, ಟ್ರೆಕಿಂಗ್, ಶಾಪಿಂಗ್‌ನಂಥ ಎಲ್ಲ ಕ್ಯಾಶುವಲ್ ಔಟಿಂಗ್‌ಗೂ ತೊಡಬಹುದು. ಸದ್ಯಕ್ಕೆ, ಇಂಗ್ಲಿಷ್ ಹಾಡುಗಳ ಸಾಲನ್ನು ಹೊಂದಿರುವ ಹುಡಿಗಳು ಟ್ರೆಂಡ್ ಆಗುತ್ತಿವೆ. ಅವುಗಳ ಪೈಕಿಯಲ್ಲಿ ಆರಿಯಾನಾ ಗ್ರಾಂಡೆನ ಥ್ಯಾಂಕ್ ಯು ನೆಕ್ಸ್ಟ್ನ ಸಾಲುಗಳ ಹುಡಿಗೆ ಬಹಳ ಬೇಡಿಕೆ ಇದೆ. ಪಾಪ್ ಗಾಯಕ, ಗಾಯಕಿಯರು ತಮ್ಮ ತಂಡದ ಹೆಸರು, ಭಾವಚಿತ್ರ, ಹಾಡಿನ ಸಾಲುಗಳು ಅಥವಾ ಆಟೋಗ್ರಾಫ್ ಉಳ್ಳ ಹುಡಿಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಮಾರಾಟಕ್ಕೆ ಇಡುತ್ತಾರೆ. ಅಭಿಮಾನಿಗಳು ಅವುಗಳನ್ನು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಹಾಗಾಗಿ ಈ ಹುಡಿ, ಫ್ಯಾಷನ್ ಲೋಕದಲ್ಲಿ ಬಹಳಷ್ಟು ಸಮಯ ಉಳಿಯುವುದಂತೂ ಸತ್ಯ! ಗ್ಲಾಮರಸ್ ಕ್ರಾಪ್ ಹುಡಿ
ಸ್ವೆಟರ್‌ನಂತೆ ಭಾಸವಾಗುವ ಹುಡಿಗಳಲ್ಲಿ, ಕ್ರಾಪ್ ಹುಡಿಗೆ ಭಾರೀ ಬೇಡಿಕೆಯಿದೆ. ಜ್ಯಾಕೆಟ್‌ನಂತೆ ಮೈತುಂಬಾ ಕವರ್ ಆಗುವ ಹುಡಿಗಳಿಗಿಂತ, ಕ್ರಾಪ್ ಹುಡಿ ಭಿನ್ನವಾಗಿದೆ. ನೋಡಲು ಗಿಡ್ಡವಾಗಿರುವ ಈ ಹುಡಿ, ಹೊಟ್ಟೆಯಿಂದ ಮೇಲೆ, ಸೈಡ್‌ನಲ್ಲಿ ಕೊಂಚ ಬಾಗಿದಂತೆ ಇದ್ದು, ಗ್ಲಾಮರಸ್ ಲುಕ್ ನೀಡುತ್ತದೆ. ನೀಳಕಾಯದ ಯುವತಿಯರನ್ನು ಮತ್ತಷ್ಟು ಎತ್ತರವಾಗಿ ಬಿಂಬಿಸುತ್ತದೆ. ನಾರ್ಮಲ್ ಪ್ಯಾಂಟ್, ಪಲಾಝೋ, ಜೊತೆಗೆ ಕ್ರಾಪ್ ಹುಡಿಯನ್ನು ಧರಿಸಬಹುದು. ಮಕ್ಕಳಿಗೂ ಇದೆ!
ಹುಡಿಯ ಹವಾ, ಮಕ್ಕಳ ಫ್ಯಾಷನ್ ಲೋಕದಲ್ಲಿಯೂ ಇದೆ. ಉದ್ದ ತೋಳುಗಳ ಕ್ರಾಪ್ ಹುಡಿ, ಪ್ರಾಣಿಗಳ ಮುಖದ ಚಿತ್ರ ಹಾಗೂ ಟೊಪ್ಪಿಯ ಜಾಗದಲ್ಲಿ ಪ್ರಾಣಿಗಳ ಕಿವಿ ಇರುವ ಹುಡಿಗಳು ಮಕ್ಕಳನ್ನು ಇನ್ನಷ್ಟು ಮುದ್ದಾಗಿ ಕಾಣುವಂತೆ ಮಾಡುತ್ತವೆ. -ಹುಡಿ ಧರಿಸಿದಾಗ ಫ್ರೀ ಹೇರ್‌ಸ್ಟೈಲ್ ಚೆನ್ನಾಗಿ ಒಪ್ಪುತ್ತದೆ.
-ಮೇಕಪ್ ಹಾಗೂ ಆ್ಯಕ್ಸಸರೀಸ್‌ಗಳು ಕೂಡಾ ಮಿತವಾಗಿರಲಿ.
-ಆಫೀಸ್‌ಗೆ ಪ್ಲೇನ್ (ಯಾವುದೇ ಬರಹಗಳಿಲ್ಲದ) ಹುಡಿಯೇ ಚೆನ್ನ.
-ಸ್ವಲ್ಪ ದಪ್ಪಗಿರುವವರು ಸ್ಲಿಮ್ ಫಿಟ್‌ನ ಹುಡಿಗಳನ್ನು ಆಯ್ದುಕೊಳ್ಳಿ.
-ಮೊಣಕಾಲಿನವರೆಗೆ ಬರುವ ಹುಡಿಯನ್ನು ನೈಟ್ ಡ್ರೆಸ್‌ನಂತೆ ತೊಡಬಹುದು. – ಅದಿತಿಮಾನಸ ಟಿ.ಎಸ್.