Advertisement

ಜ್ಞಾನವರ್ಧನೆಗೆ ವಾರಕಾಲ ಏಳು ಪುಸ್ತಕಗಳ ಖೋ

06:00 AM Jun 17, 2018 | Team Udayavani |

ಮಂಗಳೂರು: ಸದಾ ಕಚ್ಚಾಡುತ್ತಾ, ಅವರಿವರಿಗೆ ಬೈಯುತ್ತಾ ಕಾಲಹರಣ ಮಾಡುವ ಪೋಸ್ಟ್‌ಗಳೇ ಕಾಣಸಿಗುವ ಫೇಸ್ಬುಕ್‌ನಲ್ಲಿ ಕಳೆದೈದು ದಿನಗಳಿಂದ ಪುಸ್ತಕ ಚಾಲೆಂಜ್‌ ಟ್ರೆಂಡ್‌ ಶುರುವಾಗಿದೆ. “ಏಳು ದಿನ ಏಳು ಪುಸ್ತಕ’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ತಾವು ಓದಿದ ಏಳು ನೆಚ್ಚಿನ ಪುಸ್ತಕಗಳ ಮುಖಪುಟವನ್ನು ಸಪ್ತಾಹ ಮಾದರಿಯಲ್ಲಿ ಏಳು ದಿನಗಳ ಕಾಲ ಫೇಸುºಕ್‌ನಲ್ಲಿ ಪ್ರಕಟಿಸಿ ಇತರರಿಗೆ ಖೋ ಕೊಡುವ ಹೊಸ ಆಟವಿದು.

Advertisement

ವಿಶೇಷವೆಂದರೆ ಈ ಖೋ ಆಟದಲ್ಲಿ ಸಾಹಿತಿಗಳು, ಅಂಕಣಕಾರರೂ ಭಾಗವಹಿಸಿ ಯುವಕರಲ್ಲಿ ಪುಸ್ತಕ ಪ್ರೇಮ ಬೆಳೆಸಲು ಕಾರಣರಾಗುತ್ತಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್‌ “ಹಂ ಫಿಟ್‌ ತೋ ಇಂಡಿಯಾ ಫಿಟ್‌’ ಎನ್ನುವ ಒಕ್ಕಣೆಯೊಂದಿಗೆ ಸಾಮಾಜಿಕ ತಾಣದಲ್ಲಿ ಫಿಟ್ನೆಸ್‌ ಚಾಲೆಂಜ್‌ ಶುರು ಮಾಡಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟಿಗ ವಿರಾಟ್‌ ಕೊಹ್ಲಿ ಕೂಡ ಪರಸ್ಪರ ಖೋ ನೀಡಿ ತಾವು ಮಾಡಿದ ಯೋಗ, ವ್ಯಾಯಾಮದ ವೀಡಿಯೋವನ್ನು ಪ್ರಕಟಿಸಿದ್ದರು. ಈ ಹೊಸ ಟ್ರೆಂಡ್‌ನಿಂದ ಆಸಕ್ತರಾದ ಹಲವರು ಫೇಸ್ಬುಕ್‌ನಲ್ಲಿ ಪುಸ್ತಕ ಓದುವ ಚಾಲೆಂಜ್‌ ಹಮ್ಮಿಕೊಳ್ಳುತ್ತಿದ್ದಾರೆ. ದೈಹಿಕ ದೃಢತೆಯೊಂದಿಗೆ ಜ್ಞಾನ ಸಂಪನ್ನರಾಗುವುದು ಕೂಡ ಅಗತ್ಯ ಎನ್ನುವ ಉದ್ದೇಶದಿಂದ ಈ ಸವಾಲನ್ನು ಆರಂಭಿಸಲಾಗಿದೆ. ಆದರೆ ಇದನ್ನು ಯಾರು ಶುರು ಮಾಡಿದರು ಎಂಬುದು ತಿಳಿದಿಲ್ಲ.

ಸಾಹಿತಿಗಳು, ಬರಹಗಾರರು
ಇದರಲ್ಲಿ ಸಾಹಿತಿಗಳು, ಅಂಕಣಕಾರರು ಮತ್ತು ಹವ್ಯಾಸಿ ಬರಹಗಾರರೇ ಹೆಚ್ಚು ಪಾಲ್ಗೊಳ್ಳುತ್ತಿದ್ದಾರೆ. ಫೇಸುºಕ್‌ ಪುಸ್ತಕ ಪ್ರೇಮದತ್ತ ಕೊಂಡೊಯ್ಯುತ್ತಿರುವುದು ಬರಹಗಾರರಲ್ಲಿ, ಪುಸ್ತಕ ಪ್ರೇಮಿಗಳಲ್ಲಿ ಹೊಸ ಆಸಕ್ತಿ ಮೂಡಿಸಿದೆ. ದಿನಕ್ಕೊಂದು ಪುಸ್ತಕ ಓದಿ ಅಥವಾ ಈ ಹಿಂದೆ ಓದಿದ ಮೆಚ್ಚಿನ ಪುಸ್ತಕದ ಮುಖಪುಟವನ್ನು ಫೇಸ್ಬುಕ್‌ ವಾಲ್‌ನಲ್ಲಿ ಛಾಪಿಸುವುದು, ಪುಸ್ತಕದ ಬಗ್ಗೆ ಒಂದಷ್ಟು ಬರೆಯುವುದು,  ಚಾಲೆಂಜ್‌ನ್ನು ಇತರರಿಗೆ ದಾಟಿಸುವುದು ಈ ಖೋ ಆಟದ ಹೂರಣ. ಸಾಮಾಜಿಕ ತಾಣಗಳಿಂದಾಗಿ ಓದುವ ಹವ್ಯಾಸ ಕಡಿಮೆಯಾಗಿದ್ದ ಯುವಕರಲ್ಲಿ ಮತ್ತೆ ಆ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಪುಸ್ತಕ ಚಾಲೆಂಜ್‌ ಮಹತ್ವದ್ದಾಗಿದೆ.

ಯೋಗ, ವ್ಯಾಯಾಮಕ್ಕೂ ಚಾಲೆಂಜ್‌!
ಸೆಲೆಬ್ರಿಟಿ ವರ್ಗದಲ್ಲಿ ಮಾತ್ರ ವ್ಯಾಪಕವಾಗಿದ್ದ ಫಿಟೆ°ಸ್‌ ಚಾಲೆಂಜ್‌ಗೆ ಜನಸಾಮಾನ್ಯನೂ ತೆರೆದುಕೊಳ್ಳುತ್ತಿದ್ದಾನೆ. ಪರಸ್ಪರ ಚಾಲೆಂಜ್‌ ಹಾಕಿ ತಾವು ಮಾಡಿದ ವ್ಯಾಯಾಮ, ಯೋಗ, ಸೂರ್ಯ ನಮಸ್ಕಾರ ಇತ್ಯಾದಿ ವೀಡಿಯೋವನ್ನು ಫೇಸ್ಬುಕ್‌ನಲ್ಲಿ ಪ್ರಕಟಿಸಿ, ಸವಾಲನ್ನು ಇತರರಿಗೆ ದಾಟಿಸುವ ಕ್ರೇಜ್‌ ಶುರುವಾಗಿದೆ. ಓದುವಿಕೆಯ ಚಾಲೆಂಜ್‌ ಟ್ರೆಂಡ್‌ ಮಾದರಿಯಲ್ಲಿ ಕೆಲವು ಸಿನೆಮಾ ಪ್ರಿಯರು ದಿನಕ್ಕೊಂದು ಸಿನೆಮಾದ ಬಗ್ಗೆ ಪ್ರಕಟಿಸುವ ಖೋ ಆಟವನ್ನು ಶುರು ಮಾಡಿಕೊಂಡಿದ್ದಾರೆ.

ದೈಹಿಕ ದೃಢತೆ ಜತೆ ಮಾನಸಿಕ ದೃಢತೆ
ಕೇಂದ್ರ ಸಚಿವರು ಫಿಟ್ನೆಸ್‌ ಚಾಲೆಂಜ್‌ದೇಶದ ಜನತೆಯ ಮುಂದಿಟ್ಟಿದ್ದಾರೆ. ಅದನ್ನು ಸ್ವೀಕರಿಸುವುದರೊಂದಿಗೆ ಮಾನಸಿಕ ದೃಢತೆ ಕಾಯ್ದುಕೊಳ್ಳುವುದೂ ಅಗತ್ಯ. ಅದು ನಮ್ಮದಾಗಬೇಕಾದರೆ ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಮಾನಸಿಕ ದುಗುಡ, ಯಾತನೆಗಳೆಲ್ಲ ದೂರವಾಗಿ ನಿರುಮ್ಮಳರಾಗುತ್ತೇವೆ ಜ್ಞಾನವರ್ಧನೆಯಾಗ ಬೇಕಾದರೆ ಪುಸ್ತಕ ಓದಲೇಬೇಕು. ಈ ನಿಟ್ಟಿನಲ್ಲಿ ಪುಸ್ತಕ ಚಾಲೆಂಜ್‌ ಪೂರಕ. ಯಾವುದರಿಂದ ಪುಸ್ತಕ ಓದುವಿಕೆ ಕಡಿಮೆಯಾಗಿದೆ ಎನ್ನುವ ಅಸಮಾಧಾನ ಗಳಿದ್ದವೋ, ಅದೇ ಸಾಮಾಜಿಕ ತಾಣ ಪುಸ್ತಕ ಓದುವಿಕೆಗೆ ಪ್ರೇರೇಪಿಸುತ್ತಿರುವುದು ಖುಷಿಯ ವಿಚಾರ ಎನ್ನುತ್ತಾರೆ ಪುಸ್ತಕ ಚಾಲೆಂಜ್‌ ಸ್ವೀಕರಿಸಿದ ಹವ್ಯಾಸಿ ಬರಹಗಾರ ಶಿವಪ್ರಸಾದ್‌ ಸುರ್ಯ.

Advertisement

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next