ಪ್ರವಾಸಕ್ಕೆ ಹೋಗುವುದಾದರೆ ನಮ್ಮ ಹೆಗಲಿಗೆ ಚೆಂದದ ಬ್ಯಾಗ್ ಇರಬೇಕು ಎಂದೆನಿಸುತ್ತದೆ.ಇಂದು ಮಾರುಕಟ್ಟೆಯಲ್ಲಿ ಹಲವು ಬಗೆಯ ಬ್ಯಾಗ್‌ಗಳನ್ನು ನೋಡಬಹುದಾಗಿದೆ. ಭಾರವೆನಿಸದ ಮತ್ತು ತಳ್ಳಿಕೊಂಡು ಹೋಗಬಹುದಾದ ಬ್ಯಾಗ್‌ಗಳನ್ನು ಕಾಣಬಹುದಾಗಿದೆ. ಹೀಗಾಗಿ ಗ್ರಾಹಕರು ಹೆಚ್ಚು ತಮ್ಮ ಅನುಕೂಲಕ್ಕೆ ತಕ್ಕಂತೆ ಬ್ಯಾಗ್‌ಗಳನ್ನು ಖರೀದಿಗೆ ಮುಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಬ್ಯಾಗ್‌ಗಳ ಬೇಡಿಕೆ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ದಿನನಿತ್ಯದ ಜಂಜಾಟಗಳಿಂದ ಹೊರ ಬಂದು ದೂರದೂರಿಗೆ ಹೋಗಿ ಬರಬೇಕು. ಒಂದಷ್ಟು ದಿನ ಯಾವುದೋ ಊರಿನಲ್ಲಿ ಕಳೆಯಬೇಕು. ಆ ಮೂಲಕ ಮನಸ್ಸಿಗೆ ನಿರಾಳತೆ ತಂದುಕೊಳ್ಳಬೇಕೆನಿಸುವುದು ಸಾಮಾನ್ಯ. ಅದಕ್ಕಾಗಿಯೇ ರಜಾ ಅವಧಿಗಳನ್ನು ಲೆಕ್ಕ ಹಾಕಿ ದೂರದೂರಿಗೆ ಪ್ರವಾಸ ಏರ್ಪಡಿಸಲಾಗುತ್ತದೆ. ಹೀಗೆ ಹೋಗುವಾಗ ದಿನಗಳಿಗೆ ಬೇಕಾದಷ್ಟು ಬಟ್ಟೆ, ಅವಶ್ಯ ವಸ್ತುಗಳನ್ನು ಕೊಂಡೊಯ್ಯಬೇಕು. ಅದಕ್ಕಾಗಿ ದೊಡ್ಡದಾದ ಲಗೇಜ್ ಬ್ಯಾಗ್ ಬೇಕೇ ಬೇಕು.
ಪ್ರವಾಸಕ್ಕೆಂದೇ ಸಿದ್ಧವಾಗಿ ನಿಂತಿರುವ ಟ್ರೆಕ್ಕಿಂಗ್ ಬ್ಯಾಗ್‌ಗಳು ನಿಮ್ಮ ಬಟ್ಟೆಬರೆ ತುಂಬಿಕೊಳ್ಳುವುದರೊಂದಿಗೆ ನಿಮ್ಮ ಅಂದವನ್ನೂ ಹೆಚ್ಚಿಸುವಷ್ಟು ಹೊಸತನ ಪಡೆದುಕೊಂಡಿದೆ ಎಂದರೆ ನೀವು ನಂಬಲೇಬೇಕು. ಹೊಸದಾಗಿ ಮಾರುಕಟ್ಟೆಯಲ್ಲಿ ಅನೇಕ ವೆರೈಟಿ ಲಗೇಜ್ ಅಥವಾ ಟ್ರಕ್ಕಿಂಗ್ ಬ್ಯಾಗ್‌ಗಳು ಲಭ್ಯವಿವೆ.
ಸಣ್ಣ ಮಕ್ಕಳಿಗೆ ಲೈಟ್‌ವೈಟ್ ಬ್ಯಾಗ್‌ಗಳಿಂದ ಹಿಡಿದು ದೊಡ್ಡವರಿಗೆ ದೊಡ್ಡದಾದ ಲಗೇಜ್ ಬ್ಯಾಗ್‌ಗಳು ಈಗ ಮಾರುಕಟ್ಟೆಯಲ್ಲಿವೆ. ಹೆಚ್ಚು ಶ್ರಮ ಬೀಳದಂತೆ ಬೆನ್ನಿಗೆ ಹಾಕುವುದರೊಂದಿಗೆ ಹೊಟ್ಟೆಗೆ ಬ್ಯಾಗ್‌ನ್ನು ಕಟ್ಟಿಕೊಳ್ಳುವುದರಿಂದ ಹೆಚ್ಚು ಒತ್ತಡ ಬೀಳದಂತೆ ತಡೆಯುವ ಬ್ಯಾಗ್‌ಗಳು ಮಾರುಕಟ್ಟೆಯಲ್ಲಿವೆ. ಈ ರೀತಿಯ ಬ್ಯಾಗ್‌ಗಳಿಗೆ ಚಕ್ರ ಮತ್ತು ಹ್ಯಾಂಡಲ್ ಸಹಾಯದಿಂದ ಸುಲಭವಾಗಿ ಕೊಂಡೊಯ್ಯಬಹುದು. ಬೆನ್ನಿನ ಹೊರೆ ಇಳಿಸಲು ಈ ಮಾದರಿಯ ಬ್ಯಾಗ್‌ಗಳು ಸಹಕಾರಿ. ಆದರೆ, ಚಕ್ರ ಹೊಂದಿರುವ ಬ್ಯಾಗ್‌ಗಳನ್ನು ಪ್ರವಾಸ ಹೋಗುವಾಗ ಕೊಂಡೊ ಯ್ಯಬಹುದೇ ಹೊರತು ಟ್ರೆಕ್ಕಿಂಗ್‌ಗೆ ಆಗುವುದಿಲ್ಲ. ಸ್ವಂತ ವಾಹನಗಳಲ್ಲಿ ಹೋದರೆ ಇದರ ಬಳಕೆ ಸುಲಭ. ಬಸ್, ರೈಲಿನಲ್ಲಿ ತೆರಳುವವರಿಗೆ ಸಾಗಿಸುವುದು ಸ್ವಲ್ಪ ಕಷ್ಟವಾಗಬಹುದು.
ವಾರಗಟ್ಟಲೆ ಪ್ರವಾಸ ಯೋಜನೆ ಹಾಕಿದರೆ ಡಫೆಲ್ ಬ್ಯಾಗ್‌ಗಳನ್ನು ಕೊಂಡೊಯ್ದರೆ ಹೆಚ್ಚು ಉತ್ತಮ. ಏಕೆಂದರೆ, ಇದರಲ್ಲಿ ಸ್ಥಳಾವಕಾಶ ಸಾಕಷ್ಟಿದ್ದು, ವಾರಗಳ ಬೇಕಾಗುವ ಎಲ್ಲ ದಿನನಿತ್ಯದ ಬಳಕೆಯ ವಸ್ತುಗಳನ್ನು ಇದರಲ್ಲಿ ತುಂಬಿಸಿಕೊಳ್ಳಬಹುದು. ಮಧ್ಯದ ಕಂಫಾರ್ಟ್ ಮೆಂಟ್ ತುಂಬಾ ಅಗಲ ವಾಗಿರುವುದರಿಂದ ಇದು ಹೆಚ್ಚು ಸೂಕ್ತ. ಕ್ರೀಡಾ ಸಾಮಗ್ರಿ ಸಹಿತ ಇತರ ವಸ್ತುಗಳನ್ನು ಸಾಗಿಸಲು ಈ ರೀತಿಯ ಬ್ಯಾಗ್‌ಗಳು ಹೆಚ್ಚು ಉಪಯೋಗವಾಗುತ್ತವೆ. ಆದರೆ, ಇದರ ಒಂದು ನೆಗೆಟಿವ್ ಅಂಶ ಏನೆಂದರೆ, ಇದನ್ನು ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕೇ ವಿನಾ ಬೆನ್ನಲ್ಲಿ ಧರಿಸಲು ಸಾಧ್ಯವಾಗುವುದಿಲ್ಲ. ರೋಲಿಂಗ್ ಡಫೆಲ್ ಬ್ಯಾಗ್‌ಗಳು ಕೂಡ ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿದ್ದು, ಸ್ವಲ್ಪ ಎತ್ತರವಾಗಿರುವ ಬ್ಯಾಗ್‌ಗಳು ಇದಾಗಿದೆ. ಮೆಸೆಂಜರ್ ಬ್ಯಾಗ್‌ಗಳನ್ನು ಹೆಚ್ಚಾಗಿ ಕೆಮರಾ, ನೀರು, ಚಾಕು ಸಹಿತ ಚಿಕ್ಕಪುಟ್ಟ ವಸ್ತುಗಳನ್ನು ಇಟ್ಟುಕೊಳ್ಳಲು ಉಪಯೋಗ ಮಾಡುತ್ತೇವೆ. ಮಕ್ಕಳಿಗೆ ಕೂಡ ವಿವಿಧ ವಿನ್ಯಾಸಗಳ ಬ್ಯಾಗ್‌ಗಳು ಲಭ್ಯವಿವೆ. ಹೆಚ್ಚಾಗಿ ಸ್ಕೂಲ್ ಬ್ಯಾಗ್, ಡೋರ್‌ಪ್ಲೇ ಹಾರ್ಡ್ ಟ್ರೋಲಿ ಬ್ಯಾಗ್, ಡೀಪರ್ ಬ್ಯಾಗ್, ಡಿಸ್ನೀ ಬ್ಯಾಗ್, ಡಿಸೀ ಕಾಮಿಕ್ ಬ್ಯಾಗ್ ಸಹಿತ ನಾನಾ ವಿನ್ಯಾಸಗಳ ಬ್ಯಾಗ್‌ಗಳು ಮಾರುಕಟ್ಟೆಯಲ್ಲಿವೆ.
ಆನ್‌ಲೈನ್‌ನಲ್ಲಿ ಬ್ಯಾಗ್ ಬೇಡಿಕೆ
ಆನ್‌ಲೈನ್‌ನಲ್ಲಿ ಬ್ಯಾಗ್‌ಗಳ ಖರೀದಿಗೆ ಸದ್ಯ ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿದೆ. ವಿವಿಧ ರಿಯಾಯಿತಿಗಳಿರುವುದರಿಂದ ಮತ್ತು ಬೆಲೆ ಕಡಿಮೆ ಇರುವುದರಿಂದ ಆನ್‌ಲೈನ್ ತಾಣಗಳಲ್ಲೇ ಪ್ರವಾಸಿಗರು ಬ್ಯಾಗ್ ನೋಡುತ್ತಾರೆ. ಇದರೊಂದಿಗೆ ಬ್ಯಾಗ್ ಅಂಗಡಿಗಳಲ್ಲಿಯೂ ವಿಶೇಷ ದಿನಗಳಂದು ರಿಯಾಯಿತಿಗಳಿರುವುದರಿಂದ ಗ್ರಾಹಕರಿಂದ ಬ್ಯಾಗ್ ಖರೀದಿಗೆ ಒಲವು ಇರುತ್ತದೆ.
ಟ್ರಾವೆಲ್ ಲ್ಯಾಪ್‌ಟಾಪ್ ಕೇಸ್ ಬ್ಯಾಗ್
ಈ ಬ್ಯಾಗ್‌ಗಳ ವಿನ್ಯಾಸ ಲ್ಯಾಪ್ ಟಾಪ್ ಬ್ಯಾಗ್ ತರಹವೇ ಇದ್ದು, ಇದರಲ್ಲಿ ಲ್ಯಾಪ್‌ಟಾಪ್, ಅಂಗಿ, ನೀರು, ಕ್ಯಾಮರಾ, ವಯರ್‌ಗಳು ಸೇರಿದಂತೆ ಇನ್ನಿತರ ವಸ್ತು ಸಾಗಿಸಬಹುದು. ಇತ್ತೀಚಿನ ದಿನಗಳಲ್ಲಿ ಸೂಟ್‌ಕೇಸ್ ಉಪಯೋಗ ಕಡಿಮೆಯಾದರೂ, ಲ್ಯಾಪ್‌ಟಾಪ್ ಕೇಸ್ ಬ್ಯಾಗ್‌ಗಳ ಬಳಕೆ ಜಾಸ್ತಿ ಇದೆ.
ಗಾಲ್ಫ್ ಟ್ರಾವೆಲ್ ಬ್ಯಾಗ್
ಇದೊಂದು ರೀತಿಯ ಉದ್ದನೆಯ ಮಾದರಿಯ ಬ್ಯಾಗ್ ಆಗಿದ್ದು, ಟ್ರಾವೆಲ್‌ಗೆ ಸೂಕ್ತವಾಗಿದೆ. ಒಂದೆರಡು ದಿನಗಳ ಕಾಲ ಉಳಿಯುವ ಮಂದಿಗೆ ಈ ಬ್ಯಾಗ್ ಬೆಸ್ಟ್. ಇದು ಉದ್ದವಾಗಿರುವುದರಿಂದ ಮತ್ತು ಒಳಭಾಗದಲ್ಲಿ ಜಾಗ ಕಡಿಮೆ ಇರುವುದರಿಂದ ದಿನದ ಮಟ್ಟಿಗಷ್ಟೇ ಸುಲಭ. ಇದಕ್ಕೆ ಸ್ಟಾಂಡ್ ಸೌಲಭ್ಯವೂ ಇದ್ದು, ನೆಲದಲ್ಲಿ ಇಡಲು ಸಾಧ್ಯವಾಗುತ್ತದೆ. ಈ ಮಾದರಿಯ ಬ್ಯಾಗ್ ಪ್ರಸ್ತುತ ಹೊಸತಾಗಿದೆ.
- ಧನ್ಯಾ ಬಾಳೆಕಜೆ