ಗಂಗಾವತಿ: ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಅನೇಕ ಪ್ರವಾಸಿತಾಣಗಳಲ್ಲಿ ಜನರು ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ.
ಕೋವಿಡ್ ರೋಗದ ಪರಿಣಾಮ ಅನೇಕ ಪ್ರವಾಸಿ ತಾಣಗಳಲ್ಲಿ ವ್ಯಾಪಾರ ಹಾಗೂ ಇತರೆ ಕೆಲಸ ಮಾಡುವವರು ಉದ್ಯೋಗ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರವಾಸೋದ್ಯಮ ನೀತಿ 2020-25ನ್ನುಬಿಡುಗಡೆ ಮಾಡಿದ್ದು, ನೂತನ ಪ್ರವಾಸೋದ್ಯಮ ನೀತಿಯಲ್ಲಿ ಅಂಜನಾದ್ರಿಬೆಟ್ಟ, ಪಂಪಾಸರೋವರ,ಹೇಮಗುಡ್ಡ, ಕುಮ್ಮಟದುರ್ಗಾ, ಕನಕಗಿರಿ, ಕೊಪ್ಪಳ, ಕುಕನೂರು ಪ್ರವಾಸಿ ತಾಣಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಉತ್ತರ ಮತ್ತು ಕಲ್ಯಾಣ ಕರ್ನಾಟದ ಜಿಲ್ಲೆಗಳಿಗೆ ಭಾರಿ ಅನ್ಯಾಯ ಎಸಗಲಾಗಿದೆ.
ಈ ಹಿಂದೆ 2015-20ನೇಪ್ರವಾಸೋದ್ಯಮ ನೀತಿಯಲ್ಲಿ ಉತ್ತರ ಮತ್ತು ಕಲ್ಯಾಣ ಕರ್ನಾಟಕಕ್ಕೆ ಭಾರಿ ಕೊಡುಗೆ ನೀಡಲಾಗಿತ್ತು. ಪ್ರಸ್ತುತ ನೂತನನೀತಿಯಲ್ಲಿ ಹಳೆಯ ಯೋಜನೆ ರದ್ದು ಮಾಡಲಾಗಿದ್ದು, ಪ್ರವಾಸೋದ್ಯಮಕ್ಕೆ ಹಿನ್ನೆಲೆಯಾಗುವ ಲಕ್ಷಣಗಳಿಗೆ. ಡಾ| ನಂಜುಂಡಪ್ಪ ವರದಿ ಹಿನ್ನೆಲೆಯಲ್ಲಿ 319 ಪ್ರವಾಸಿತಾಣಗಳನ್ನು ಗುರುತಿಸಿ ಆದ್ಯತೆ ಮೇರೆಗೆ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಕಾರ್ಯ ಮತ್ತು ಸಬ್ಸಿಡಿ ಯೋಜನೆ ಅನುಷ್ಠಾನ ಮಾಡಲಾಗಿತ್ತು.
ನೂತನ ಪ್ರವಾಸೋದ್ಯಮ ನೀತಿಯಲ್ಲಿ 270 ಪ್ರವಾಸಿ ತಾಣಗಳಿಗೆ ಮಾತ್ರ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಯೋಜನೆ ಅನುಷ್ಠಾನಕ್ಕೆ ಹಲವು ನಿಯಮಗಳನ್ನು ಜಾರಿ ಮಾಡಲಾಗಿದೆ. ಈ ಹಿಂದೆ ಜಿಲ್ಲಾ ಧಿಕಾರಿ ನೇತೃತ್ವದ ಪ್ರವಾಸೋದ್ಯಮ ಕಮಿಟಿ15 ಕೋಟಿ ರೂ. ವರೆಗೆ ಯೋಜನೆ ಮಾಡಲು ಅವಕಾಶವಿತ್ತು. ಈಗ 5 ಕೋಟಿಗೆ ಇಳಿಸಲಾಗಿದೆ. ಈ ಹಿಂದೆ ಪ್ರವಾಸೋದ್ಯಮ ಯೋಜನೆಯಲ್ಲಿ ನೆರವು ಪಡೆಯಲು ಶೇ. 40 ಸಬ್ಸಿಡಿ ಇತ್ತು ಈಗ ಶೇ. 25ಕ್ಕೆ ಇಳಿಸಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜನ ಮಾಡಲು ಹೋಟೆಲ್, ಹೋಮ್ ಸ್ಟೇ, ವಸ್ತು ಸಂಗ್ರಹಾಲಯ, ಉದ್ಯಾನವನ ಈಜುಗೊಳ, ಸಾಂಸ್ಕೃತಿಕ ಗ್ರಾಮ ಹೋಟೆಲ್ ಹೀಗೆ ವಿವಿಧ ಯೋಜನೆಗೆ ಸರಕಾರ 5 ಕೋಟಿ ರೂ.ವರೆಗೆ ಸಬ್ಸಿಡಿ ಕೊಡುತ್ತಿತ್ತು ಈಗ 2 ಕೋಟಿ ರೂ.ಗೆ ಇಳಿಸಲಾಗಿದೆ. ಈ ಹಿಂದೆ ಜಿಲ್ಲೆಯ ಪ್ರವಾಸಿತಾಣ ಗಳನ್ನು ಪ್ರತ್ಯೇಕವಾಗಿ ಗುರುತಿಸಿ ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ಹೋಟೆಲ್, ರೆಸಾರ್ಟ್ ಹೀಗೆ ಪ್ರವಾಸಿಗರಿಗೆ ನೆರವಾಗುವಂತಹ ಯೋಜನೆ ಮಾಡಿಕೊಳ್ಳಲು ಸರಕಾರ ಆರ್ಥಿಕ ನೆರವು ನೀಡುತ್ತಿತ್ತು. ಈಗ ಪ್ರವಾಸಿ ತಾಣಕ್ಕೆ ಯೋಜನೆ ಸೀಮಿತಗೊಳಿಸಿದೆ.
ಕೊಪ್ಪಳದಲ್ಲಿ 3 ತಾಣ ಆಯ್ಕೆ: ನೂತನ ಪ್ರವಾಸೋದ್ಯಮ ನೀತಿಯಲ್ಲಿ ಜಿಲ್ಲೆಯ ಆನೆಗೊಂದಿ, ಇಟಗಿ, ಮುನಿರಾಬಾದ್ ಮಾತ್ರ ಆಯ್ಕೆಯಾಗಿವೆ. ಈ ಹಿಂದೆ ಡಾ| ನಂಜುಂಡಪ್ಪ ವರದಿ ಪ್ರಕಾರ ಇಡೀ ಜಿಲ್ಲೆಯನ್ನು ಪ್ರವಾಸಿ ತಾಣವಾಗಿ ಗುರುತಿಸಿ ಪ್ರವಾಸೋದ್ಯಮ ಇಲಾಖೆಯಿಂದ ಹಲವಾರು ಯೋಜನೆ ಅನುಷ್ಠಾನ ಮಾಡಲಾಗಿತ್ತು. ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿ ಮಾಡುವ ದೂರದೃಷ್ಟಿ ಯೋಜನೆ ಅಗತ್ಯವಿದ್ದರೂ ರಾಜ್ಯ ಸರಕಾರದ ನೂತನ ಪ್ರವಾಸೋದ್ಯಮ ನೀತಿ ಸಮಗ್ರರಾಜ್ಯವನ್ನು ಪ್ರತಿನಿ ಧಿಸುತ್ತಿಲ್ಲ. ಪ್ರಾದೇಶಿಕ ಅಸಮತೋಲನಕ್ಕೆ ದಾರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಶಾಸಕರು, ಸಂಸದರು, ಸಚಿವರು ಈ ನೀತಿಯನ್ನು ಪರಿಷ್ಕರಿಸಲು ಒತ್ತಡ ಹೇರಬೇಕಾಗಿದೆ.
ನೂತನ ಪ್ರವಾಸೋದ್ಯಮ ನೀತಿಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿ ಅಂಜನಾದ್ರಿ, ಕುಕುನೂರು, ಪುರ, ಕನಕಗಿರಿ, ಹೇಮಗುಡ್ಡ, ಕುಮ್ಮಟದುರ್ಗಾ ಮತ್ತು ಪಂಪಸರೋವರ ಕ್ಷೇತ್ರಗಳನ್ನು ಆದ್ಯತಾ ಪ್ರವಾಸಿ ತಾಣಗಳಾಗಿ ಗುರುತಿಸಬೇಕು. ಪ್ರವಾಸಿತಾಣಗಳಿರುವ ಇಡೀ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ನೂತನ ಪ್ರವಾಸೋದ್ಯಮ ನೀತಿಯಲ್ಲಿ ಕೈಬಿಡಲಾದ ಆದ್ಯತಾ ಪ್ರವಾಸಿತಾಣಗಳನ್ನು ಮುಂದುವರಿಸಬೇಕು. ಮೊದಲಿದ್ದಂತೆ ಶೇ. 40ರಷ್ಟು ಸಬ್ಸಿಡಿ ಯೋಜನೆ ಮುಂದುವರಿಸುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ.
-ಕರಡಿ ಸಂಗಣ್ಣ, ಸಂಸದರು
ಕೆ.ನಿಂಗಜ್ಜ