Advertisement

ತಿಂಗಳಿಗೊಮ್ಮೆ ಎಲ್ಲಾ ಜಿಲ್ಲೆಗಳಲ್ಲಿ “ರೈತ ಸ್ಪಂದನ’

06:05 AM Aug 16, 2018 | Team Udayavani |

ಬೆಂಗಳೂರು: “ರೈತರ ಸಂಭ್ರಮದಲ್ಲಿ ಭಾಗಿಯಾಗುವ ಮತ್ತು ಅವರಿಗೆ ಆಧುನಿಕ ಕೃಷಿ ಬಗ್ಗೆ ಮಾಹಿತಿ ನೀಡಲು ತಿಂಗಳಿಗೊಮ್ಮೆ ರೈತ ಸ್ಪಂದನ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳಲು ಉದ್ದೇಶಿಸಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

Advertisement

ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಗೆ ಸಂದೇಶ ನೀಡಿದ ಮುಖ್ಯಮಂತ್ರಿಗಳು, “ರೈತರ ಬದುಕು ಹಸನು ಮಾಡುವ ನನ್ನ ಹೊಸ ಚಿಂತನೆಯೇ “ರೈತ ಸ್ಪಂದನ’ಕಾರ್ಯಕ್ರಮ’ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಸೀತಾಪುರದಲ್ಲಿ ಇತ್ತೀಚೆಗೆ ಗ್ರಾಮಸ್ಥರೊಂದಿಗೆ ಭತ್ತ ನಾಟಿಯಲ್ಲಿ ಭಾಗವಹಿಸಿದ್ದೆ. ಈ ಬಾರಿ ವರುಣನ ಕೃಪೆಯಿಂದಾಗಿ ರೈತರು ಸಂಭ್ರಮದಿಂದ ಬೇಸಾಯದಲ್ಲಿ ತೊಡಗಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ನಾನೂ ಭಾಗಿಯಾಗಿದ್ದೆ. ಈ ರೀತಿ ರೈತರೊಂದಿಗೆ ಸಂಭ್ರಮಿಸುವ ಹಾಗೂ ಅವರಿಗೆ ಆಧುನಿಕ ಕೃಷಿ ಬಗ್ಗೆ ಮಾಹಿತಿ ನೀಡಲು ತಿಂಗಳಿಗೊಮ್ಮೆ ರೈತ ಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದೇನೆ ಎಂದರು.

“ಚೀನಾ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ’ಎಂಬ ಪರಿಕಲ್ಪನೆಯೊಂದಿಗೆ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಷ್ಟರ್‌ಗಳ ಸ್ಥಾಪನೆ ಮೂಲಕ ಸ್ಥಳೀಯರಿಗೆ ಉದ್ಯೋಗ ಒದಗಿಸಲು ಕಾರ್ಯೋನ್ಮುಖರಾಗಿದ್ದೇವೆ. ಉನ್ನತ ಶಿಕ್ಷಣ ನಮ್ಮ ಯುವ ಜನರಿಗೆ ಉದ್ಯೋಗ ಒದಗಿಸುವ ಸಾಮರ್ಥಯ ಹೊಂದಿರಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ “ಕೌಶಲ್ಯಾಧಾರಿತ ವಿವಿ’ ಸ್ಥಾಪಿಸುವ ತೀರ್ಮಾನ ಮಾಡಿದ್ದೇವೆ ಎಂದರು.

ತಾವು ವ್ಯಾಸಂಗ ಮಾಡಿದ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಧನ ಸಹಾಯ ಮಾಡಲು ಇಚ್ಛಿಸುವವರಿಗೆ ಸಹಾಯಕವಾಗುವಂತೆ ಪೋರ್ಟಲ್‌ ಅನ್ನು ತೆರೆಯಲಾಗುವುದು. ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಲ್ಲಿ ಶಾಲೆಗಳ ಅಭಿವೃದ್ಧಿಗೆ ಸಹಾಯ ಹಸ್ತ ಚಾಚುವ ಕಾರ್ಪೋರೇಟ್‌ ಸಂಸ್ಥೆಗಳಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ವಿಸ್ತರಿಸಲಿದೆ ಎಂದರು.

Advertisement

2 ಸಾವಿರ ಕಿ.ಮೀ. ಹೆದ್ದಾರಿ ಅಭಿವೃದ್ಧಿ: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ 3ನೇ ಹಂತದಲ್ಲಿ 3,831 ಕಿ.ಮೀ. ಹೆದ್ದಾರಿ ರಸ್ತೆಗಳ ಅಭಿವೃದ್ಧಿಯನ್ನು ಪೂರ್ಣಗೊಳಿಸಲಾಗುವುದು. 4ನೇ ಹಂತದಲ್ಲಿ 2,722 ಕಿ. ಮೀ. ಹೆದ್ದಾರಿ ರಸ್ತೆಗಳನ್ನು 3,480 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾಡಳಿತ ನಡುವೆ ಸಮನ್ವಯ ಸಾಧಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪ್ರತಿ ತಿಂಗಳು ವಿಡಿಯೋ ಸಂವಾದ ನಡೆಸುತ್ತಿದ್ದಾರೆ ಎಂದರು.

ಹಸಿರು ಕರ್ನಾಟಕ ಯೋಜನೆಗೆ ಚಾಲನೆ
ಸಾಮಾಜಿಕ ಅರಣ್ಯ ಬೆಳವಣಿಗೆಗೆ ಒತ್ತು ನೀಡಲು ರಾಜ್ಯದೆಲ್ಲಡೆ ಸರ್ಕಾರಿ ಜಮೀನಿನಲ್ಲಿ ಗಿಡ ನೆಡುವ ಬೃಹತ್‌ ಕಾರ್ಯಕ್ರಮವಾದ “ಹಸಿರು ಕರ್ನಾಟಕ’ ಯೋಜನೆಗೆ ಇದೇ ವೇಳೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಸಿ ನೆಡುವ ಮತ್ತು ಸಸಿಗಳನ್ನು ವಿತರಣೆ ಮಾಡುವ ಮೂಲಕ ಯೋಜನೆಗೆ ಚಾಲನೆ ಕೊಟ್ಟರು. ಇದಕ್ಕೂ ಮೊದಲು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಶಾಲೆ-ಕಾಲೇಜು,ಸಂಘ-ಸಂಸ್ಥೆಗಳು, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಾರ್ವಜನಿಕರೂ ಉತ್ಸಾಹದಿಂದ ಈ ಯೋಜನೆಯಲ್ಲಿ ಭಾಗಿಯಾಗುವಂತೆ ಸಿಎಂ ಮನವಿ ಮಾಡಿದರು.

451 ಸಣ್ಣ ಸಂಪರ್ಕ
ಸೇತುವೆಗಳ ನಿರ್ಮಾಣ

ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಈ ವರ್ಷ ಸುರಿದ ಮಳೆಯಿಂದಾಗಿ ಸಂಕಗಳು ಮತ್ತು ಸಣ್ಣ ಸೇತುವೆಗಳಿಗೆ ಹಾನಿಯಾಗಿ ಅನಾಹುತ ಸಂಭವಿಸಿರುವುದನ್ನುಗಮನಿಸಿದ್ದೇನೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳ ಅನುಕೂಲಕ್ಕಾಗಿ 451 ಸಣ್ಣ ಸಂಪರ್ಕ ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಬೆಳಗಾವಿ ನಗರಕ್ಕೂ ನನಗೂ ಅವಿನಾಭಾವ ಸಂಬಂಧ. ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಆರಂಭಿಸಿದ ಹೆಮ್ಮೆ,ಸುವರ್ಣಸೌಧ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ತೃಪ್ತಿ ನನ್ನದು.ನನ್ನ ಗ್ರಾಮವಾಸ್ತವ್ಯ ಕಾರ್ಯಕ್ರಮ ಆರಂಭವಾಗಿದ್ದು ಬೆಳಗಾವಿ ಜಿಲ್ಲೆಯಲ್ಲೇ. 47 ಗ್ರಾಮ ವಾಸ್ತವ್ಯಗಳಲ್ಲಿ 27 ಗ್ರಾಮ ವಾಸ್ತವ್ಯಗಳನ್ನು ಉತ್ತರ ಕರ್ನಾಟಕದಲ್ಲೇ ಮಾಡಿದ್ದೇನೆ. ನನ್ನ ಅಭಿಮಾನದ ಬೆಳಗಾವಿಗೆ ಕೆಲವು ಇಲಾಖೆಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
–  ಎಚ್‌.ಡಿ. ಕುಮಾರಸ್ವಾಮಿ,
ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next