Advertisement

ನೂತನ ತಾ |ವ್ಯಾಪ್ತಿ ಅಂತಿಮಗೊಳಿಸಲು ಸಚಿವರ ಸೂಚನೆ

11:56 AM Sep 27, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಮೂಡಬಿದಿರೆ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯನ್ನು ಅಂತಿಮಗೊಳಿಸಲು ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ರ್ಚಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದಾರೆ.

Advertisement

ಸಚಿವ ರೈ ಅವರ ಅಧ್ಯಕ್ಷತೆಯಲ್ಲಿ ನೂತನ ತಾಲೂಕು ರಚನೆಗಳ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಭೆ ನಡೆದಿದ್ದು, ಸೂಚನೆಗಳನ್ನು ನೀಡಿದರು. ನೂತನ ತಾಲೂಕು ವ್ಯಾಪ್ತಿಯ ಬಗ್ಗೆ ಕೆಲವು ಗೊಂದಲಗಳು ಸಾರ್ವಜನಿಕರಲ್ಲಿವೆ. ಮೂಡಬಿದಿರೆ ತಾಲೂಕಿಗೆ ಗುರುಪುರ ಹೋಬಳಿಯ ಸೇರ್ಪಡೆಗೆ ವಿರೋಧ ಕಂಡು ಬಂದಿದೆ. ಮಂಗಳೂರು ಉತ್ತರ ಶಾಸಕರೂ ಗುರುಪುರ ಹೋಬಳಿ ಯನ್ನು ಮೂಡಬಿದಿರೆಗೆ ಸೇರಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮೂಡಬಿದಿರೆಗೆ ಹತ್ತಿರದಲ್ಲಿರುವ ಗುರುಪುರ ಹೋಬಳಿಯ ಗ್ರಾಮಗಳನ್ನು ಮಾತ್ರ ಮೂಡಬಿದಿರೆ ತಾಲೂಕಿಗೆ ಸೇರಿಸುವ ಬಗ್ಗೆ ಪರಿಶೀಲಿಸಬೇಕು. ತಾಲೂಕು ರಚನೆ ಪ್ರಕ್ರಿಯೆ ಅಂತಿಮಕ್ಕೆ ಪ್ರಸ್ತುತ ಮೂಡಬಿದಿರೆ ಹೋಬಳಿಯನ್ನು ಮಾತ್ರ ತಾಲೂಕಿಗೆ ಸೀಮಿತಗೊಳಿಸಿ ಪ್ರಸ್ತಾವನೆ ಕಳುಹಿಸುವಂತೆ ಹೇಳಿದರು. ಜತೆಗೆ ಗುರುಪುರ ಹೋಬಳಿ, ಮೂಲ್ಕಿ ಹಾಗೂ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳ ಸೇರ್ಪಡೆ ಸಂಬಂಧ ಆ ಭಾಗದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲು ಸೂಚಿಸಿದರು.

ಕಡಬ ತಾಲೂಕಿನ ವ್ಯಾಪ್ತಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಹಾಗೂ ಕೊಕ್ಕಡ ಹೋಬಳಿಯ ಗ್ರಾಮಗಳನ್ನು ಸೇರಿಸುವ ಕುರಿತೂ ಶೀಘ್ರವೇ ಅಂತಿಮ ನಿರ್ಧಾರ ಕೈಗೊಳ್ಳಲು ಸಚಿವ ರಮಾನಾಥ ರೈ ನಿರ್ದೇಶನ ನೀಡಿದರು. ಮೂಡಬಿದಿರೆ ಹಾಗೂ ಕಡಬ ತಾಲೂಕು ಕಚೇರಿಗಳಿಗೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ತತ್‌ಕ್ಷಣ ಸೂಕ್ತ ಜಮೀನು ಗುರುತಿಸಿ, ಕಟ್ಟಡ ನಿರ್ಮಾಣಕ್ಕೆ ಯೋಜನೆ ತಯಾರಿಸಿ ಸಲ್ಲಿಸಲು ಸಚಿವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಶಾಸಕ ಅಭಯಚಂದ್ರ ಜೈನ್‌, ಜಿಲ್ಲಾಧಿಕಾರಿ ಡಾ| ಕೆ. ಜಿ. ಜಗದೀಶ್‌, ಅಪರ ಜಿಲ್ಲಾಧಿಕಾರಿ ಕುಮಾರ್‌, ಜಿಲ್ಲಾ ಪಂಚಾಯತ್‌ ಸದಸ್ಯ ಪಿ. ಪಿ. ವರ್ಗೀಸ್‌ ಕಡಬ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next