ಬೆಳಗಾವಿ: ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಬೆಳಗಾವಿ ಜಿಲ್ಲೆಯ ಮೂರು ಕಾಲೇಜುಗಳಿಗೆ ಹೊಸದಾಗಿ ಪರೀಕ್ಷಾ ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ ಎಂದು ಕುಲಪತಿ ಪ್ರೊ| ಎಂ. ರಾಮಚಂದ್ರಗೌಡ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆ ಚಿಕ್ಕೋಡಿ ತಾಲೂಕಿನ ಅಂಕಲಿ, ಜೊಲ್ಲೆ ಶಿಕ್ಷಣ ಸಂಸ್ಥೆಯ ನಿಪ್ಪಾಣಿ ಹಾಗೂ ಗೋಕಾಕದ ಎನ್‌ಎಸ್‌ಎಫ್‌ನ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ ನಂತರ ಹೊಸದಾಗಿ ಪರೀಕ್ಷಾ ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ ಎಂದರು. ಕಾಲೇಜಿನ ಪ್ರಾಚಾರ್ಯರು ಹಾಗೂ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಪರೀಕ್ಷೆಗಳಲ್ಲಿ ನಕಲು ಮಾಡುವ ವಿವಿ ವ್ಯಾಪ್ತಿಯಲ್ಲಿನ 40ಕ್ಕೂ ಅಧಿಕ ಕಾಲೇಜುಗಳನ್ನು ಈಗಾಗಲೇ ಗುರುತಿಸಿದ್ದಾರೆ. ಇದಲ್ಲದೆ ಐದಾರು ಕಾಲೇಜುಗಳಿಗೆ ತಾವು ಹಾಗೂ ಕುಲಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಪರೀಕ್ಷಾ ಕೇಂದ್ರಗಳಲ್ಲಿ ನಕಲು ಮಾಡಲು ಸಹಕರಿಸುವ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿವಿಗೆ ಶಾಶ್ವತ ಜಾಗದ ಸಮಸ್ಯೆ: ಒಂದು ವಿಶ್ವವಿದ್ಯಾಲಯವು ಸಮರ್ಥವಾಗಿ ಕಾರ್ಯನಿರ್ವಹಿಸಲು ಕನಿಷ್ಠ 500 ಎಕರೆ ಜಾಗಬೇಕು. ಆದರೆ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿವಿಗೆ 100 ಎಕರೆ ಮಾತ್ರ ಜಾಗವಿದೆ. ಅದೂ ಸಹ ಕೇಂದ್ರ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವುದರಿಂದ ವಿವಿಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಯಾವುದೇ ಒಂದು ಕಾಮಗಾರಿ ಆರಂಭಿಸಲು ಅರಣ್ಯ ಇಲಾಖೆಯ ಅನುಮತಿ ಬೇಕು. ಈ ಹಿನ್ನೆಲೆಯಲ್ಲಿ ಬೇರೆ ಕಡೆಗೆ ವಿವಿಗೆ ಭೂಮಿ ಗುರುತಿಸಲಾಗಿದೆ. ಬೆಳಗಾವಿ ಸಮೀಪದ ಹಿರೇಬಾಗೇವಾಡಿ ಬಳಿ 127 ಸರ್ಕಾರಿ ಭೂಮಿ ಇದೆ. ಇದಲ್ಲದೆ ಅಲ್ಲಿನ ರೈತರು 90 ಎಕರೆ ಭೂಮಿ ನೀಡಲು ಮುಚ್ಚಳಿಕೆ ಪತ್ರ ನೀಡಿದ್ದಾರೆ ಎಂದು ಹೇಳಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಜಾಗದ ಕೊರತೆಯಿಂದ ಸದ್ಯ 19 ವಿವಿಧ ವಿಭಾಗಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. 50ಕ್ಕೂ ಅಧಿಕ ವಿವಿಧ ವಿಷಯಗಳ ಕುರಿತು ವಿಭಾಗಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆದಿದೆ ಎಂದರು.
ವಿವಿ ಸ್ಥಳಾಂತರದ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಲಪತಿಗಳು, ವಿವಿ ಸ್ಥಳಾಂತರ ವಿಚಾರವಾಗಿ ಜಿಲ್ಲಾಧಿಕಾರಿಗಳು ಸ್ಥಳ ಗುರುತಿಸುವಂತೆ ಹೇಳಿದ್ದರು. ಅದರಂತೆ ನಾವು ಜಾಗ ಗುರುತಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದೇವೆ. ಸರ್ಕಾರಕ್ಕೆ ಜಾಗದ ಕುರಿತು ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ರೈತರ ಜಮೀನು ಪಡೆದ ಬಳಿಕ ಅವರಿಗೆ ವಿವಿಯಿಂದ ಹಣ ನೀಡಬೇಕಾಗುತ್ತದೆ. ಈ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು. ಕುಲಸಚಿವ ಪ್ರೊ| ಬಸವರಾಜ ಪದ್ಮಶಾಲಿ, ಪ್ರೊ| ಎಸ್.ಎಂ. ಗಂಗಾಧರಯ್ಯ, ಡಾ| ಶೋಭಾ ನಾಯಕ ಪತ್ರಿಕಾಗೋಷ್ಠಿಯಲ್ಲಿದ್ದರು.