ಇಸ್ಲಾಮಾಬಾದ್: ಅಲ್ ಖಾಯಿದಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನನ್ನು ಅಮೆರಿಕದ ನೇವಿ ಸೀಲ್ಸ್ ಪಡೆಯು ಏಕಾಏಕಿ ದಾಳಿ ನಡೆಸಿ ಹ*ತ್ಯೆಗೈದ ನಂತರ ಪಾಕಿಸ್ತಾನದ ಅಬೋಟಾಬಾದ್ ಪ್ರದೇಶದ ಹೆಸರು ಜಗಜ್ಜಾಹೀರಾಗುವ ಮೂಲಕ ಪ್ರಚಾರ ಪಡೆದಿತ್ತು. ಇದೀಗ ಬರೋಬ್ಬರಿ 12-13 ವರ್ಷಗಳ ಬಳಿಕ ಮತ್ತೆ ಅಬೋಟಾಬಾದ್ ಹೆಸರು ಮುನ್ನಲೆಗೆ ಬಂದಿದೆ. ಅದಕ್ಕೆ ಕಾರಣ ಭಾರತ ಸರ್ಕಾರ ನಿಷೇಧ ಹೇರಿರುವ ಲಷ್ಕರ್ ಇ ತಯ್ಬಾ, ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಗಳು ಪಾಕ್ ನ ಅಬೋಟಾಬಾದ್ ನಲ್ಲಿ ಜಂಟಿಯಾಗಿ ತರಬೇತಿ ಕೇಂದ್ರವನ್ನು ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಪಾಕಿಸ್ತಾನದ ಅಬೋಟಾಬಾದ್ ನಲ್ಲಿನ ನೂತನ ಟೆರರ್ ಫ್ಯಾಕ್ಟರಿ ಸಮೀಪವೇ ಪಾಕ್ ಸೇನೆ, ಐಎಸ್ ಐನ ಕ್ಯಾಂಪಸ್ ಇದ್ದಿರುವುದಾಗಿ ಮೂಲಗಳು ಎನ್ ಡಿಟಿವಿಗೆ ತಿಳಿಸಿವೆ. ಮೂಲಗಳ ಪ್ರಕಾರ, ಪಾಕಿಸ್ತಾನದ ಸೇನಾ ಶಿಬಿರದ ಪಕ್ಕದಲ್ಲೇ ಉಗ್ರರ ತರಬೇತಿ ಕೇಂದ್ರ ಇದ್ದಿರುವುದರಿಂದ ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಅಷ್ಟೇ ಅಲ್ಲ ಒಂದು ವೇಳೆ ಅಪರಿಚಿತರು, ಹೊರಗಿನವರು ಉಗ್ರರ ತರಬೇತಿ ಕೇಂದ್ರದ ಬಳಿ ತೆರಳಲು ಸಾಧ್ಯವೇ ಇಲ್ಲ. ಪಾಕ್ ಸೇನೆಯ ಅನುಮತಿ ಇಲ್ಲದೇ ಆ ಪ್ರದೇಶಕ್ಕೆ ಕಾಲಿಡಲು ಅಸಾಧ್ಯ ಎನ್ನಲಾಗಿದೆ.
ಅಬೋಟಾಬಾದ್ ನ ಉಗ್ರರ ತರಬೇತಿ ಕೇಂದ್ರದ ಮೇಲ್ವಿಚಾರಣೆಗಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐನ ಜನರಲ್ ಒಬ್ಬರನ್ನು ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಟೆರರ್ ಫ್ಯಾಕ್ಟರಿಯಲ್ಲಿ ಯುವಕ, ಯುವತಿಯರಿಗೆ ಶಸ್ತ್ರಾಸ್ತ್ರ ಬಳಕೆ ಸೇರಿದಂತೆ ಹಲವು ಯುದ್ಧ ತಂತ್ರಗಳ ತರಬೇತಿ ನೀಡಲಾಗುತ್ತಿದೆಯಂತೆ!
ಅಬೋಟಾಬಾದ್ ನ ಸುರಕ್ಷಿತ ತಾಣದಲ್ಲಿ ಇದ್ದ ಒಸಾಮಾ ಬಿನ್ ಲಾಡೆನ್ ನನ್ನು ಅಮೆರಿಕದ ವಿಶೇಷ ಪಡೆ 2011ರ ಮೇ ತಿಂಗಳಿನಲ್ಲಿ ದಾಳಿ ನಡೆಸಿ ಹ*ತ್ಯೆಗೈದಿದ್ದರು. ನಂತರ 2012ರಲ್ಲಿ ಪಾಕ್ ಸರ್ಕಾರ ಆ ಕಟ್ಟಡವನ್ನು ಧ್ವಂಸಗೊಳಿಸಿತ್ತು.
ಗುಪ್ತಚರ ಮೂಲಗಳು ತಿಳಿಸಿರುವ ಪ್ರಕಾರ, ಉಗ್ರರ ನೂತನ ತರಬೇತಿ ಕೇಂದ್ರ, ಒಂದು ವೇಳೆ ಬಿನ್ ಲಾಡೆನ್ ವಾಸವಾಗಿದ್ದ ಕಟ್ಟಡದ ಪ್ರದೇಶದಲ್ಲಿಯೇ ನಿರ್ಮಾಣ ಮಾಡಲಾಗಿದೆಯೇ ಅಥವಾ ಅದರ ಸಮೀಪ ನೂತನ ಕಟ್ಟಡ ಕಟ್ಟಲಾಗಿದೆಯೇ ಎಂಬುದು ಸ್ಪಷ್ಟಪಡಿಸಿಲ್ಲ. ಈ ಟೆರರ್ ಫ್ಯಾಕ್ಟರಿಯನ್ನು ಲಷ್ಕರ್ ನ ಹಫೀಜ್ ಸಯೀದ್, ಹಿಜ್ಬುಲ್ ಸಂಘಟನೆಯ ಸೈಯದ್ ಸಲಾಹುದ್ದೀನ್ ಮತ್ತು ಜೈಶ್ ಉಗ್ರ ಸಂಘಟನೆಯ ಮಸೂದ್ ಅಜಹರ್ ನಡೆಸುತ್ತಿದ್ದು, ಇವರ ಇಶಾರೆಯಲ್ಲಿ ಎಲ್ಲಾ ಚಟುವಟಿಕೆ ನಡೆಯುತ್ತಿದೆ ಎನ್ನಲಾಗಿದೆ.
ಈ ಮೂರು ಭಯೋತ್ಪಾದಕ ಸಂಘಟನೆಗಳು ಭಾರತದ ಭಯೋತ್ಪಾದಕ ನಿಗ್ರಹ ದಳ ಎನ್ ಐಎನ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಪಟ್ಟಿಯಲ್ಲಿದೆ. ನೂತನ ಟೆರರ್ ಫ್ಯಾಕ್ಟರಿ ಮೂರು ಭಯೋತ್ಪಾದಕ ಸಂಘಟನೆಗಳ ನೇಮಕಾತಿ ಕೇಂದ್ರವಾಗಿದೆ.
ಬಾರಾಮುಲ್ಲಾ ಜಿಲ್ಲೆಯಲ್ಲಿ ಗುರುವಾರ (ಅ.24) ರಾತ್ರಿ ಸೇನಾ ವಾಹನದ ಮೇಲೆ ದಾಳಿ ಸೇರಿದಂತೆ ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಉ*ಗ್ರರ ದಾಳಿ ನಡೆಯುತ್ತಿದ್ದು, ಏತನ್ಮಧ್ಯೆ ಅಬೋಟಾಬಾದ್ ನ ಉಗ್ರರ ನೂತನ ತರಬೇತಿ ಕೇಂದ್ರದ ಸುದ್ದಿ ಬೆಳಕಿಗೆ ಬಂದಿದೆ.