Advertisement

ಸಂಚಾರ ದಟ್ಟಣೆ ರಸ್ತೆಗಳ ಸಮೀಕ್ಷೆಗೆ ಹೊಸ ತಂಡ!

11:32 AM May 03, 2022 | Team Udayavani |

ಮಹಾನಗರ: ಮಂಗಳೂರು ನಗರ ವಿಸ್ತಾರಗೊಳ್ಳುತ್ತಿದೆ. ಅಷ್ಟೇ ವೇಗದಲ್ಲಿ ಸಂಚಾರ ದಟ್ಟಣೆ ಪ್ರಮಾಣ ಕೂಡ ಏರಿಕೆಯಾಗುತ್ತಿದೆ. ಸಂಚಾರ ದಟ್ಟಣೆ ಎಂಬುದು ಮಂಗಳೂರು ನಗರವನ್ನು ಇತ್ತೀಚೆಗೆ ಕಾಡುತ್ತಿರುವ ಪ್ರಮುಖ ಸಮಸ್ಯೆಯೂ ಹೌದು. ಈ ನಿಟ್ಟಿನಲ್ಲಿ ನಗರದಲ್ಲಿ ಅತೀ ಹೆಚ್ಚು ಸಂಚಾರ ದಟ್ಟಣೆ (ಹೈಡೆನ್ಸಿಟಿ) ರಸ್ತೆಗಳ ಸಮೀಕ್ಷೆ ನಡೆಸಿ ಅದರ ನಿರ್ವಹಣೆಗೆ ಪೂರಕ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ತಜ್ಞರ ತಂಡ ರಚಿಸಲು ಮಂಗಳೂರು ಪಾಲಿಕೆ ಚಿಂತನೆ ನಡೆಸಿದೆ.

Advertisement

ದೇಶದ ಪ್ರಮುಖ ನಗರಗಳಲ್ಲಿ ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ರೀತಿಯ ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಬೆಂಗಳೂರಿನಲ್ಲಿ ಒಂದೆರಡು ವರ್ಷದ ಹಿಂದೆ ನಗರದ ಪ್ರಮುಖ 12 ಹೈಡೆನ್ಸಿಟಿ ರಸ್ತೆಗಳಲ್ಲಿ ಸಮೀಕ್ಷೆ ನಡೆಸಿ ಅದರ ವರದಿ ಆಧರಿಸಿ ಸಂಚಾರ ದಟ್ಟಣೆ ಸಮಸ್ಯೆ ನಿರ್ವಹಣೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ವಾಹನ ಸಂಚಾರದ ವೇಗ, ಪಾದಚಾರಿ ಮಾರ್ಗ, ಬೀದಿದೀಪಗಳು, ನೀರು ನಿಲ್ಲುವ ಸ್ಥಳ, ಸುಗಮ ಸಂಚಾರಕ್ಕೆ ತೊಡಕಾಗುವ ಅಂಶಗಳನ್ನು ಸಮೀಕ್ಷೆಯಲ್ಲಿ ಗುರುತಿ ಸಲಾಗುತ್ತದೆ. ಇದರ ಜತೆಗೆ ಈ ರಸ್ತೆಯಲ್ಲಿ ಸಂಭವಿಸುವ ಅಪಘಾತಗಳ ಸಂಖ್ಯೆ, ಪಾದಚಾರಿ ಮಾರ್ಗ ಇದ್ದರೂ ಜನರು ಯಾಕೆ ರಸ್ತೆಯನ್ನು ಬಳಸುತ್ತಾರೆ? ಎಂಬ ಎಲ್ಲ ರೀತಿಯ ಅಂಶವೂ ಸಮೀಕ್ಷೆಯಲ್ಲಿ ಒಳಗೊಳ್ಳುತ್ತದೆ.

ಸಮೀಕ್ಷೆಯ ವರದಿ ಬಂದ ಬಳಿಕ ಅದನ್ನು ಮಂಗಳೂರು ಮಹಾನಗರ ಪಾಲಿಕೆ, ಸಂಚಾರ ಪೊಲೀಸ್‌ ವಿಭಾಗ ಹಾಗೂ ತಜ್ಞರು ಪರಿಶೀಲನೆ ನಡೆಸುತ್ತಾರೆ. ಅದರ ಆಧಾರದಲ್ಲಿ ಮುಂದಿನ ಕಾರ್ಯಯೋಜನೆ ಸಿದ್ಧಗೊಳಿಸಬಹುದು. ಪ್ರಮುಖವಾಗಿ ನಿರ್ದಿಷ್ಟ ರಸ್ತೆಯಲ್ಲಿ ಯಾವುದೆಲ್ಲಾ ಕಡೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸುವ ಅಗತ್ಯವಿದೆ? ಎಲ್ಲೆಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲು ಸಾಧ್ಯವಿದೆ? ಸೂಚನ ಫಲಕಗಳ ಅಳವಡಿಕೆ, ಸ್ಕೈವಾಕ್‌ ನಿರ್ಮಾಣದ ಅವಶ್ಯಕತೆ, ರಸ್ತೆ ವಿಭಾಜಕಗಳ ಅಳವಡಿಕೆ, ಸಿಗ್ನಲ್‌ ದೀಪಗಳ ಅಳವಡಿಕೆ, ಪಾದಚಾರಿಗಳ ಮಾರ್ಗ ಉನ್ನತೀಕರಣ, ಬಸ್‌ ನಿಲ್ದಾಣಗಳ ನಿರ್ಮಾಣ, ಆಟೋರಿಕ್ಷಾಗಳ ಪಾರ್ಕಿಂಗ್‌ಗೆ ಅವಕಾಶ, ರಸ್ತೆ ಉಬ್ಬು ನಿರ್ಮಾಣ, ಯೂಟರ್ನ್ ವ್ಯವಸ್ಥೆ, ಜಂಕ್ಷನ್‌ಗಳ ವಿಸ್ತೀರ್ಣ, ವೃತ್ತಗಳ ನಿರ್ಮಾಣಕ್ಕೆ ಅವಕಾಶ ಸಹಿತ ಸುಗಮ ಸಂಚಾರಕ್ಕೆ ಪೂರಕವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ಸಂಚಾರ ದಟ್ಟಣೆ ನಿರ್ವಹಣೆಗೆ ಪ್ರಮುಖ ನಗರಗಳಲ್ಲಿ ಸಂಚಾರ ಪೊಲೀಸರು ಇತ್ತೀಚೆಗೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ದಿಮತ್ತೆ) ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ನಗರದ ಪ್ರಮುಖ ಸಿಗ್ನಲ್‌ಗ‌ಳಲ್ಲಿ ಈ ರೀತಿಯ ತಂತ್ರಜ್ಞಾವನ್ನು ಅಳವಡಿಸಲಾಗುತ್ತಿದೆ. ಇಂತಹ ಪರಿಕಲ್ಪನೆ ಮಂಗಳೂರಿನಲ್ಲಿ ಜಾರಿಯಾದರೆ ಹೆಚ್ಚು ಉಪಯೋಗಿ.

Advertisement

ಸಮೀಕ್ಷಾ ತಂಡ ರಚನೆ

ಮಂಗಳೂರಿಗೆ ನಗರೋತ್ಥಾನ ಯೋಜನೆ ಬರುವಾಗಲೇ ಸಂಚಾರ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿ ಹೆಚ್ಚು ಆದ್ಯತೆ ನೀಡಲಾಗುತ್ತಿತ್ತು. ಸದ್ಯ ಸಂಚಾರ ಸಮಸ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ತುರ್ತಾಗಿ ನಾವು ಮಾಡಬೇಕಾದದ್ದು ಏನು ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ಇದಕ್ಕಾಗಿ ಪಾಲಿಕೆ, ಸಂಚಾರಿ ಪೊಲೀಸರು, ಆರ್‌ಟಿಒ ಸಹಿತ ತಜ್ಞರ ಉಪಸ್ಥಿತಿಯಲ್ಲಿ ಸಮೀಕ್ಷಾ ತಂಡ ರಚನೆ ಮಾಡಲಾಗುವುದು. -ಪ್ರೇಮಾನಂದ ಶೆಟ್ಟಿ, ಮೇಯರ್, ಪಾಲಿಕೆ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next