ಮಂಗಳೂರು: ಬಹುನಿರೀಕ್ಷಿತ ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ ಪ್ರಕ್ರಿಯೆ ಸಂಬಂಧ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ಈಗಾಗಲೇ ಪ್ರಕಟವಾಗಿದ್ದು, ಇದರಂತೆ ದಕ್ಷಿಣ ಕನ್ನಡ ಜಿಲ್ಲೆಗೆ 575 ಮತ್ತು ಉಡುಪಿ ಜಿಲ್ಲೆಗೆ 258 ಸೇರಿ ಒಟ್ಟು 833 ಶಿಕ್ಷಕರು ಅರ್ಹತೆ ಪಡೆದಿದ್ದಾರೆ.
ನೇಮಕಾತಿಯ ಫಲಿತಾಂಶವನ್ನು ಶಿಕ್ಷಣ ಇಲಾಖೆಯು ನ. 18ರಂದು ಬಿಡುಗಡೆ ಮಾಡಿದೆ. ಇದು ತಾತ್ಕಾಲಿಕ ಪಟ್ಟಿ. ಕೆಲವೇ ದಿನಗಳಲ್ಲಿ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಅಲ್ಪ ಸ್ವಲ್ಪ ಬದಲಾವಣೆ ಹೊರತುಪಡಿಸಿದರೆ ಬಹು ತೇಕ ಇದೇ ಅಂತಿಮ ಪಟ್ಟಿಯಾಗುವ ಸಾಧ್ಯತೆ ಇದೆ. ಹೊಸ ಶಿಕ್ಷಕರು ಜನವರಿ ವೇಳೆಗೆ ಶಾಲೆ ಗಳಿಗೆ ಆಗಮಿಸಿ ಕರ್ತವ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ.
6, 7, 8ನೇ ತರಗತಿಯ ಮಕ್ಕಳ ಸಂಖ್ಯೆಗೆ ಅನುಗುಣ ವಾಗಿ ಅವಶ್ಯವಿರುವ ಖಾಲಿ ಹುದ್ದೆಗಳ ಪಟ್ಟಿಯನ್ನು ಎರಡೂ ಜಿಲ್ಲೆಗಳಿಂದ ಶಿಕ್ಷಣ ಇಲಾಖೆಗೆ ಕಳುಹಿಸಲಾಗಿತ್ತು. ವಿವಿಧ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಹಲವರು ಅರ್ಹತೆ ಪಡೆದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಕೆಲವು ತಿಂಗಳ ಹಿಂದೆ ನಡೆದ ಅರ್ಜಿ ಪರಿಶೀಲನೆ ವೇಳೆ ಸುಮಾರು 925 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಬಳಿಕ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ರೂಪಿಸುವಂತೆ ಸರಕಾರ ತಿಳಿಸಿದ ಹಿನ್ನೆಲೆಯಲ್ಲಿ 575 ಮಂದಿಯನ್ನು ಆಯ್ಕೆ ಮಾಡಿ ತಾತ್ಕಾಲಿಕ ಪಟ್ಟಿ ಸಿದ್ಧಗೊಳಿಸಲಾಗಿದೆ.
ಈಗ 6ರಿಂದ 8ನೇ ತರಗತಿಗೆ ಶಿಕ್ಷಕರ ಆಯ್ಕೆ ನಡೆದಿದ್ದು, ಫೆಬ್ರವರಿ ವೇಳೆ ಪ್ರೌಢಶಾಲಾ ಶಿಕ್ಷಕರ ಹೊಸ ಆಯ್ಕೆಪಟ್ಟಿ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆಯಿದೆ.
“ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕ ಆಗದೆ ಶೈಕ್ಷಣಿಕ ಚಟುವಟಿಕೆಗಳಿಗೆ ಸಮಸ್ಯೆ ಎದುರಾಗಿದೆ. ಈ ಪೈಕಿ 6, 7 ಮತ್ತು 8ನೇ ತರಗತಿಗಳಿಗೆ ಹೊಸ ಶಿಕ್ಷಕರು ಬರುವುದಾದರೆ, 1ರಿಂದ 5ನೇ ತರಗತಿಯ ಖಾಲಿ ಹುದ್ದೆಗಳಿಗೆ ನೇಮಕಾತಿಯೂ ತುರ್ತಾಗಿ ನಡೆಯಬೇಕು’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಆಗ್ರಹಿಸಿದ್ದಾರೆ.
ಶಿಕ್ಷಕರ ತಾತ್ಕಾಲಿಕ ಪಟ್ಟಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಗೆ 575 ಹಾಗೂ ಉಡುಪಿ ಜಿಲ್ಲೆಗೆ 258 ಶಿಕ್ಷಕರು ಬರಲಿದ್ದಾರೆ. ಅಂತಿಮ ಪಟ್ಟಿ ಕೆಲವೇ ದಿನಗಳಲ್ಲಿ ಪ್ರಕಟವಾಗ ಲಿದ್ದು, ಆ ಬಳಿಕ ಸರಿಯಾದ ಚಿತ್ರಣ ದೊರೆಯಲಿದೆ.
– ಸುಧಾಕರ ಕೆ., ಶಿವರಾಜ್
ಡಿಡಿಪಿಐ, ದ.ಕ., ಉಡುಪಿ