Advertisement
ಈ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಸರ್ಕಾರ ಇದಕ್ಕೆ ಅನುಮತಿ ನೀಡಿದರೆ, ನಗರದ ಆಸ್ತಿ ಮಾಲೀಕರು ಇನ್ನು ಮುಂದೆ ಪ್ರತಿವರ್ಷ ಆಸ್ತಿ ತೆರಿಗೆಯೊಂದಿಗೆ ಆರೋಗ್ಯ, ಗ್ರಂಥಾಲಯ ಹಾಗೂ ಭೀಕ್ಷಕರ ಉಪಕರ ಪಾವತಿಸುವುದರ ಜತೆಗೆ ಶೇ.2 ಹೆಚ್ಚುವರಿ ಭೂ ಸಾರಿಗೆ ಉಪಕರವೂ ಪಾವತಿ ಮಾಡಬೇಕಾಗುತ್ತದೆ. ಭೂ ಸಾರಿಗೆ ಉಪ ಕರದಿಂದ ಸಂಗ್ರಹವಾಗುವುದನ್ನು ಪಾಲಿಕೆ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳುವುದಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.
Related Articles
Advertisement
ಕಾಂಗ್ರೆಸ್ ನಿರ್ಣಯ ರದ್ದು: ಈ ಹಿಂದೆ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ಜಕ್ಕೂರು ವಾರ್ಡ್‌ನ ಬೆಳ್ಳಿಹಳ್ಳಿ ವೃತ್ತಕ್ಕೆ “ಬೆಳ್ಳಳ್ಳಿ ಟಿಪ್ಪು ಸುಲ್ತಾನ್ ವೃತ್ತ’ ಎಂದು ನಾಮಕರಣ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಆ ನಿರ್ಣಯವನ್ನು ಪಾಲಿಕೆ ಸಭೆಯಲ್ಲಿ ರದ್ದು ಪಡಿಸಲಾಯಿತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್, ಒಮ್ಮೆ ಒಂದು ಪಕ್ಷ ತೆಗೆದುಕೊಂಡ ನಿರ್ಣ ಯವನ್ನು ಮತ್ತೂಂದು ಪಕ್ಷ ತೆಗೆಯುವುದು ಸಮಂಜಸವಲ್ಲ. ಪಾಲಿಕೆಯಲ್ಲಿ ಬಿಜೆಪಿ ಹೊಸ ಸಂಪ್ರದಾಯ ಸೃಷ್ಟಿಸುತ್ತಿದೆ ಎಂದು ಅಸಮಾಧಾನ ಗೊಂಡರು. ಈ ಬಗ್ಗೆ ಸ್ಪಷ್ಟನೆ ನೀಡಿದ ಮೇಯರ್ ಗೌತಮ್‌ಕುಮಾರ್, ಸ್ಥಳೀಯರು ವೃತ್ತಕ್ಕೆ ಟಿಪ್ಪು ಸುಲ್ತಾನ್ ವೃತ್ತ ಎಂದು ನಾಮಕರಣ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರದ್ದುಪಡಿ ಸಲಾಗಿದೆ ಎಂದರು.
ಪ್ರಮುಖ ನಿರ್ಣಯ: ಸಮೃದ್ಧಿ ಲೇಔಟ್‌ನ ಉದ್ಯಾನವನಕ್ಕೆ “ಪೇಜಾವರ ವಿಶ್ವೇಶತೀರ್ಥ ಶ್ರೀಗಳು’, ಕೆಂಗೇರಿ ಉಪನಗರದಿಂದ ಕೊಮ್ಮಟಕ್ಕೆ ಹೋಗುವ ಮುಖ್ಯರಸ್ತೆಗೆ “ಡಾ.ಶ್ರೀ ಶಿವಕುಮಾರ ಸ್ವಾಮೀಜಿ’ ರಸ್ತೆ, ಪದ್ಮನಾಭನಗರ ವಾರ್ಡ್‌ನ ಕುಮಾರಸ್ವಾಮಿ ಲೇಔಟ್ ಗೋವಿನಾಯಕನಹಳ್ಳಿಯ ಕ್ರೀಡಾಂಗಣಕ್ಕೆ “ದೀನದಯಾಳ್ ಉಪಾಧ್ಯಾಯರ’ ಕ್ರೀಡಾಂಗಣ, ಸುಬ್ರಹ್ಮಣ್ಯ ನಗರದ 7ನೇ ಮುಖ್ಯರಸ್ತೆಯಿಂದ ಎ-ಬ್ಲಾಕ್‌ನ ರಸ್ತೆಯವರಿಗೆ “ಪದ್ಮಾನಂದ ಗುರೂಜಿ ರಸ್ತೆ’, ವಸಂತನಗರ 11ನೇ ಮುಖ್ಯರಸ್ತೆಗೆ ಮುನೇಶ್ವರ ದೇವಸ್ಥಾನದ ರಸ್ತೆ, ಮಲ್ಲೇಶ್ವರಂನಲ್ಲಿ ನಿರ್ಮಿಸಿರುವ ವಸತಿ ಗೃಹಗಳಿಗೆ “ಶ್ರೀ ಸರದಾರ್ ವಲ್ಲಭ ಬಾಯಿ ಪಟೇಲ್ ವಸತಿ ಕುಟೀರ’, ದೊಮ್ಮಲೂರು ಬಡಾವಣೆಯ ಒಂದನೇ ಮುಖ್ಯ ರಸ್ತೆಗೆ “ಕನಕ ಕಲ್ಯಾಣ ಮಂದಿರ ರಸ್ತೆ ಸೇರಿದಂತೆ ವಿವಿಧ ರಸ್ತೆ, ಉದ್ಯಾನವನಕ್ಕೆ ನಾಮಕರಣ ನಿರ್ಣಯ ಅಂಗೀಕರಿಸಲಾಯಿತು.
ಪಾಲಿಕೆಯಿಂದ ಕೆಎಎಸ್- ಐಎಎಸ್ ತರಬೇತಿ: ಕೆೆಎಎಸ್ ಮತ್ತು ಐಎಎಸ್ ತರಬೇತಿ ನೀಡುವುದಕ್ಕೆ ಪಾಲಿಕೆಯಿಂದಲೇ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಮೇಯರ್ ಎಂ.ಗೌತಮ್‌ಕುಮಾರ್ ಹೇಳಿದರು. ಈ ಸಂಬಂಧ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯಿಂದ 5 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಕೇಂದ್ರದ ಮೂಲಕ ನಗರದ ಎಲ್ಲ ವರ್ಗದ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. 74 ವಿದ್ಯಾರ್ಥಿಗಳಿಗೆ ಸದ್ಯ ತರಬೇತಿ ನೀಡಲು ಯೋಜನೆ ರೂಪಿಸಿಕೊಳ್ಳಲಾಗಿದ್ದು, ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ಅಂದಾಜು 1.97 ಲಕ್ಷ ಖರ್ಚಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಫಟಾಫಟ್ ನಿರ್ಣಯ!: ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ವಿಷಯಾಧಾರಿತ ಚರ್ಚೆ ನಡೆಯದೆ ಕೇಲವೇ ನಿಮಿಷಗಳಲ್ಲಿ 30 ವಿಷಯಗಳಿಗೆ ಅನುಮೋದನೆ ಪಡೆದು ಕೊಳ್ಳಲಾಯಿತು. ಮಂಗಳವಾರ ನಿಗದಿಯಂತೆ ಬೆಳಗ್ಗೆ 11 ಗಂಟೆಗೆ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ಆದರೆ, 11.40ಕ್ಕೆ ಸಭೆ ಆರಂಭವಾಯಿತು. ನಿರ್ಣಯಗಳ ಸಂಖ್ಯೆಯನ್ನು ಓದದೆ ಇರುವುದಕ್ಕೆ ಮಾಜಿ ಮೇಯರ್ ಜಿ. ಪದ್ಮಾವತಿ ಹಾಗೂ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಸೇರಿದಂತೆ ಮತ್ತಿತರರು ವಿರೋಧ ವ್ಯಕ್ತಪಡಿಸಿದರು.
ಕೋರಂ ಕೊರತೆ ಎಲ್ಲಿದೆ ತೋರಿಸಿ?!: ಸಭೆಯ ಕೋರಂ ಕಡಿಮೆ ಇರುವುದರಿಂದ ಸಭೆಯನ್ನು ಮುಂದೂಡಬೇಕು ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಆಗ್ರಹಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ, ಕೋರಂ ಕೊರತೆ ಇರುವುದು ವಿರೋಧ ಪಕ್ಷದಲ್ಲಿ ಆಡಳಿತ ಪಕ್ಷದಲ್ಲಿ ಅಲ್ಲ ಎಂದು ತಿವಿದರು.ಅಲ್ಲದೆ, ಲೆಕ್ಕ ಹಾಕಿಕೊಳ್ಳಿ ಆಡಳಿತ ಪಕ್ಷದಲ್ಲಿ ಎಷ್ಟು ಜನ ಇದ್ದಾರೆ ಎಂದು ಹೇಳಿದರು.
ಚಿಮೂಗೆ ಸಂತಾಪ: ಇತ್ತೀಚೆಗೆ ನಿಧನರಾದ ಸಂಶೋಧಕ ಡಾ. ಚಿದಾನಂದಮೂರ್ತಿ ಹಾಗೂ ಮಾಜಿ ರಾಜ್ಯಪಾಲರಾದ ಟಿ.ಎನ್. ಚತುರ್ವೇದಿ ಅವರಿಗೆ ಮೇಯರ್ ಗೌತಮ್ ಕುಮಾರ್, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮತ್ತಿತರರು ಸಂತಾಪ ಸೂಚಿಸಿದರು.
ಭೂ ಸಾರಿಗೆ ಉಪ ಕರ ಸಂಗ್ರಹಿಸುವುದರಿಂದ ಪಾಲಿಕೆಗೆ ವಾರ್ಷಿಕವಾಗಿ ಸುಮಾರು 150 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ. ಸಂಗ್ರಹಿಸುವ ಭೂ ಸಾರಿಗೆ ಉಪ ಕರವನ್ನು ಪಾಲಿಕೆಯೇ ಬಳಕೆ ಮಾಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.-ಗೌತಮ್‌ಕುಮಾರ್, ಬಿಬಿಎಂಪಿ ಮೇಯರ್