Advertisement

ಜನವರಿ 1ರಿಂದ ಹೊಸ ತಾಲೂಕುಗಳು ಅಸ್ತಿತ್ವಕ್ಕೆ

09:07 AM Dec 05, 2017 | |

ಬೆಂಗಳೂರು: ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಮತ್ತು ಸರ್ಕಾರದ ತೀರ್ಮಾನದಂತೆ ರಾಜ್ಯದ 50 ಹೊಸ ತಾಲೂಕುಗಳು ಹೊಸ ವರ್ಷದಿಂದ ಅಸ್ತಿತ್ವಕ್ಕೆ ಬರಲಿವೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಘೋಷಣೆಯಾಗಿರುವ 50 ಹೊಸ ತಾಲೂಕುಗಳು 2018ರ ಜ.1ರಿಂದ ಅಸ್ತಿತ್ವಕ್ಕೆ ಬರಲಿದ್ದು, ಇನ್ನೂ ಏಳೆಂಟು ಪ್ರದೇಶಗಳನ್ನು ಹೊಸ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕೆಂಬ ಬೇಡಿಕೆಗಳು ಬಂದಿವೆ. ಆದರೆ, ಅವುಗಳ ಬಗ್ಗೆ ಇನ್ನೂ ಪರಿಶೀಲನೆ ನಡೆಸಬೇಕಾಗಿದೆ ಎಂದರು.

ಅದೇ ರೀತಿ ಹೊಸ ಕಂದಾಯ ಗ್ರಾಮಗಳು ಸಹ ಜ.1ರಿಂದಲೇ ಅಸ್ತಿತ್ವಕ್ಕೆ ಬರಲಿವೆ. 1 ಸಾವಿರ ಜನ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಸ್ತಾವನೆಯಿದೆ. ಈ ಪೈಕಿ ಈಗಾ  ಗಲೇ 600 ಜನವಸತಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ 400 ಪ್ರದೇಶಗಳಿಗೆ ಅಧಿಸೂಚನೆ ಹೊರಡಿಸುವ ಕಾರ್ಯ ಪ್ರಗತಿಯಲ್ಲಿದೆ. ಒಟ್ಟಿನಲ್ಲಿ ಹೊಸ ವರ್ಷದಿಂದ 50 ಹೊಸ ತಾಲೂಕುಗಳ ಜೊತೆಗೆ 1 ಸಾವಿರ ಕಂದಾಯ ಗ್ರಾಮಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು. 

ವಾಸಿಸುವವನೇ ಮನೆಯೊಡೆಯ ಕಾಯ್ದೆಗೆ
ರಾಷ್ಟ್ರಪತಿಯವರು ಅಂಕಿತ ಹಾಕಿದ್ದಾರೆ. ಇದರ ವ್ಯಾಪ್ತಿಗೆ ಬರುವ ಫ‌ಲಾನುಭವಿಗಳಿಗೆ ಫೆಬ್ರವರಿಯಿಂದ ಹಕ್ಕುಪತ್ರ ನೀಡಲಾಗುವುದು. ಅಲ್ಲದೇ, ಇನಾಮು ರದ್ದತಿ ಕಾಯ್ದೆ ಇದೆ. ಆದರೆ, 14 ಇನಾಮು ಪ್ರಕಾರಗಳು ಉಳಿದಿವೆ. ಈ ಇನಾಮು ಜಮೀನಿನ ಗೇಣಿದಾರರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಅಂತಹವರಿಗೆಲ್ಲ ಹಕ್ಕುಪತ್ರ ನೀಡುವ ಸಂಬಂಧ ಮುಂದಿನ ಅಧಿವೇಶನದಲ್ಲಿ ಇನಾಮು ರದ್ದತಿ
ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದರು. 

ಅರ್ಜಿ ವಜಾ: ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುವವರಿಗೆ ಒಂದಾವರ್ತಿ ಸಾಗುವಳಿ ಚೀಟಿ ನೀಡಲು 100 ಜಾನುವಾರುಗಳಿಗೆ 30 ಎಕರೆ ಗೋಮಾಳ ಇರಬೇಕೆಂಬ ನಿಯಮಕ್ಕೆ ತಿದ್ದುಪಡಿ ತರಲಾಗಿತ್ತು. ಆದರೆ, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಇದೀಗ ನ್ಯಾಯಾಲಯ ರಿಟ್‌ ಅರ್ಜಿ ವಜಾಗೊಳಿಸಿದ್ದು, ಗೋಮಾಳ ಹಿಡುವಳಿದಾರರಿಗೆ ಸಾಗುವಳಿ ಚೀಟಿ ನೀಡಲು
ತಕ್ಷಣದಿಂದಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ನ್ಯಾಯಾಲಯ ರಿಟ್‌ ಅರ್ಜಿ ವಜಾಗೊಳಿಸಿದ್ದರಿಂದ 2.5 ಲಕ್ಷ ಬಗರ್‌ಹುಕುಂ ಸಾಗುವಳಿದಾರರಿಗೆ ನ್ಯಾಯ ಸಿಕ್ಕಂತಾಗಿದೆ. ಅದೇ ರೀತಿ ಬಿ ಖರಾಬ್‌ ಹಾಗೂ
ಗುಂಡುತೋಪು ಜಮೀನುಗಳಲ್ಲಿ ಸಾಗುವಳಿ ಮಾಡು ವವರಿಗೂ ಸಾಗುವಳಿ ಚೀಟಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

Advertisement

ನಾನು ಚುನಾವಣೆಗೆ ಸ್ಪರ್ಧಿಸುವುದನ್ನು ಪಕ್ಷ ತೀರ್ಮಾನಿಸುತ್ತದೆ. ಪುತ್ರಿಗೆ ಟಿಕೆಟ್‌ ಕೊಡುವುದು ಪಕ್ಷಕ್ಕೆ ಬಿಟ್ಟಿದ್ದು. ಚುನಾವಣೆಗೆ ಸ್ಪರ್ಧಿಸುವಂತೆ ನಾನು ಹೇಳಲ್ಲ. ಅದು ಅವರಿಗೆ ಬಿಟ್ಟಿದ್ದು. ಏಕೆಂದರೆ, ಚುನಾವಣೆ ಅಷ್ಟೊಂದು ಸುಲಭವಲ್ಲ. ನನ್ನ ಸಾರ್ವಜನಿಕ ಜೀವನದಲ್ಲಿ ಅನೇಕ ಚುನಾವಣೆಗಳಲ್ಲಿ ಸೋಲು-ಗೆಲವು ಎರಡನ್ನೂ ಕಂಡಿದ್ದೇನೆ. ಚುನಾವಣೆ ದಂಧೆಯೂ ಅಲ್ಲ, ಉದ್ಯಮವೂ ಅಲ್ಲ. ಸಮಾಜಸೇವೆ ಮಾಡುವ ಕ್ಷೇತ್ರ ಅಂದುಕೊಂಡವನು ನಾನು.
 ●ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next