Advertisement
2017ರಲ್ಲಿ ರಾಜ್ಯ ಸರ್ಕಾರ ಘೊಷಿಸಿದ 49 ತಾಲೂಕುಗಳಲ್ಲಿ ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ಕೂಡಾ ಒಳಗೊಂಡಿವೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿರುವ ಈ ಪಟ್ಟಣಗಳನ್ನು ತಾಲೂಕು ಕೇಂದ್ರವನ್ನಾಗಿಸಿ, ನೂತನ ತಾಲೂಕುಗಳನ್ನು ರಚಿಸಬೇಕು ಎಂಬುದು ಆ ಭಾಗದ ಜನರ ವರ್ಷಗಳ ಬೇಡಿಕೆಯಾಗಿತ್ತು. ಅದಕ್ಕಾಗಿ ನಿರಂತರ ಹೋರಾಟಗಳೂ ನಡೆದಿದ್ದವು. ಅದಕ್ಕೆ ಸ್ಪಂದಿಸಿದ್ದ ಅಂದಿನ ಸರ್ಕಾರ ಜಿಲ್ಲೆಗೆ ಎರಡು ಸ್ವತಂತ್ರ ತಾಲೂಕುಗಳನ್ನು ಘೊಷಿಸಿತ್ತು. ಅಲ್ಲದೇ, ಅವು ಒಂದೇ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಯಿಸುವಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅಂದಿನ ನಾಯಕರು ಭರವಸೆ ನೀಡಿದ್ದರು.
Related Articles
Advertisement
ಗಜೇಂದ್ರಗಡದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಪ್ರವಾಸಿ ಮಂದಿರದಲ್ಲಿ ತಹಶೀಲ್ದಾರ್ ಕಚೇರಿ ಆರಂಭಿಸಲಾಗಿದೆ. ಜೊತೆಗೆ ಹೊಸದಾಗಿ ಉಪಖಜಾನೆ, ತಾಪಂ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದರೆ, ಅಗತ್ಯ ಸಿಬ್ಬಂದಿ, ಕಂಪ್ಯೂಟರ್, ಪೀಠೊಪಕರಣಗಳ ಕೊರತೆ ಎದುರಿಸುತ್ತಿವೆ.
ಇತರೆ ಇಲಾಖೆಗಳ ಮಾತೇ ಇಲ್ಲ: ನೂತನ ತಾಲೂಕುಗಳಾಗಿ ವರ್ಷಗಳು ಕಳೆಯುತ್ತಿದ್ದರೂ, ಕಂದಾಯ ಮತ್ತು ತಾ.ಪಂ. ಹೊರತಾಗಿ ಇನ್ನಿತರೆ ಇಲಾಖೆಗಳನ್ನು ಆರಂಭಿಸುವ ಬಗ್ಗೆ ಸರ್ಕಾರ ಚಕಾರವೆತ್ತುತ್ತಿಲ್ಲ. ಹೀಗಾಗಿ, ಕೃಷಿ, ಅಗ್ನಿಶಾಮಕ, ಸಿಪಿಐ ಕಚೇರಿ, ಅರಣ್ಯ, ತೋಟಗಾರಿಕೆ, ಕಾರ್ಮಿಕ, ಶಿಕ್ಷಣ, ಆರೋಗ್ಯ ಸೇರಿದಂತೆ ಹತ್ತಾರು ಇಲಾಖೆಗಳಲ್ಲಿ ಈಗಾಗಲೇ ಸಿಬ್ಬಂದಿ ಕೊರತೆಯಿದೆ. ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ನೇಮಕಾತಿಯೇ ನಡೆದಿಲ್ಲ. ಇದರ ನಡುವೆ ಹೊಸ ತಾಲೂಕುಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒದಗಿಸುವುದು ಸವಾಲಿನ ಕೆಲಸವೆಂದು ಭಾವಿಸಿರುವ ಸರ್ಕಾರ, ಹಳೇ ತಾಲೂಕಿನ ಅಧಿಕಾರಿಗಳ ಮೂಲಕವೇ ಆಡಳಿತವನ್ನು ಮುಂದುವರಿಸಿದೆ. ಪರಿಣಾಮ ನೂತನ ತಾಲೂಕು ರಚನೆಯಿಂದ ಸಿಗಬಹುದಾದ ಸೇವೆ ಮತ್ತು ಸೌಲಭ್ಯಗಳಿಂದ ಸ್ಥಳೀಯರು ವಂಚಿತರಾಗುತ್ತಿದ್ದಾರೆ.
ತಾಲೂಕು ಆಸ್ಪತ್ರೆಯಾಗಿ ಉನ್ನತೀಕರಣವಾಗಬೇಕಿದ್ದ ಉಭಯ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಗಳು ಯಥಾಸ್ಥಿತಿಯಲ್ಲಿ ಮುಂದುವರಿ ದಿವೆ. ಹೆಚ್ಚಿನ ಹಾಸಿಗೆ ಇಲ್ಲದೇ, ಗುಣಮಟ್ಟದ ಚಿಕಿತ್ಸೆಗಾಗಿ ಜನರು ಹಳೇ ತಾಲೂಕಿನ ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ.
ಹೊಸ ತಾಲೂಕುಗಳ ಬಗ್ಗೆ ಅಸಡ್ಡೆ? ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ಹೊಸ ತಾಲೂಕುಗಳಾಗಿ ಅಸ್ಥಿತ್ವಕ್ಕೆ ಬಂದು ವರ್ಷಗಳು ಕಳೆಯುತ್ತಿವೆ. ಮಿನಿ ವಿಧಾನಸೌಧಕ್ಕೆ ಜಾಗ ಗುರುತಿಸುವಂತೆ ಸೂಚಿಸಿರುವ ಸರ್ಕಾರ, ಇತರೆ ಇಲಾಖೆಗಳಿಂದ ತಾಲೂಕು ಕಚೇರಿಗಳ ಸ್ಥಾಪನೆ, ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಜಾಗ ಗುರುತಿಸುವಂಥ ಯಾವುದೇ ಪ್ರಕ್ರಿಯೆಗಳಿಗೆ ಚಾಲನೆ ನೀಡಿಲ್ಲ. ಹಳೇ ತಾಲೂಕಿನ ಅಧಿಕಾರಿಗಳನ್ನೇ ನೆಚ್ಚಿಕೊಳ್ಳುವಂತಾಗಿದೆ.
ಭೂ ದಾಖಲೆಗಳಿಗೆ ಪರದಾಟ: ಹೊಸ ತಾಲೂಕುಗಳಲ್ಲಿ ತಹಶೀಲ್ದಾರ್ ಕಚೇರಿ ಮಾತ್ರ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯಕ್ಕೆ ಪಹಣಿ ನೀಡುವುದು, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿಲೇವಾರಿ ಮಾಡಲಾಗುತ್ತಿದೆ. ಇನ್ನುಳಿದ ಜಮೀನುಗಳಿಗೆ ಸಂಬಂಸಿ ಅರ್ಜಿಗಳ ವಿಲೇವಾರಿಗೆ ದಾಖಲೆಗಳೇ ಲಭ್ಯವಿಲ್ಲ. ಹೀಗಾಗಿ, ಲಕ್ಷ್ಮೇಶ್ವರಕ್ಕೆ ಸಂಬಂಧಿಸಿದ ಕಡತಗಳಿಗಾಗಿ ಶಿರಹಟ್ಟಿ ಹಾಗೂ ಗಜೇಂದ್ರಗಡ ತಾಲೂಕಿನ ಕಡತಗಳಿಗಾಗಿ ರೋಣ ಕಚೇರಿಗೆ ಅಲೆದಾಟ ತಪ್ಪುತ್ತಿಲ್ಲ. ಇದರಿಂದಾಗಿ ಕೆಲವೊಮ್ಮೆ ತಹಶೀಲ್ದಾರರು ತುರ್ತು ನಿರ್ಧಾರ ಕೈಗೊಳ್ಳಲು ಸಾಧ್ಯವಾಗದು ಎಂಬುದು ರೈತರ ಅಳಲು.
ಅನುದಾನದ ಕೊರತೆ ಇಲ್ಲ: ಗಜೇಂದ್ರಗಡ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಿಗೆ ಕಳೆದ ಒಂದು ವರ್ಷದಿಂದ ಅನುದಾನದ ಕೊರತೆ ಇಲ್ಲ. ಕಚೇರಿಗೆ ಬೇಕಿರುವ ಸ್ಟೇಷನರಿ ಮತ್ತು ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಖಾತೆಗೆ ಸರ್ಕಾರದಿಂದ ನೇರವಾಗಿ ಹಣ ಜಮಾ ಆಗುತ್ತಿದೆ. ಇತ್ತೀಚೆಗೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಸಿಡಿಲು ಬಡಿದು ಎತ್ತುಗಳು ಮೃತಪಟ್ಟಿದ್ದರಿಂದ ಮಾಲೀಕರಿಗೆ ಎರಡು ದಿನದಲ್ಲಿ ಪರಿಹಾರ ಪಾವತಿಸಲಾಗಿದೆ ಎನ್ನುತ್ತಾರೆ ಲಕ್ಷ್ಮೇಶ್ವರ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ..
ಬಹುದೊಡ್ಡ ಕನಸಿನೊಂದಿಗೆ ಹೊಸ ತಾಲೂಕುಗಳು ರಚನೆಯಾಗಿವೆ. ಆದರೆ, ಇಂದಿನ ಬಿಜೆಪಿ ಸರ್ಕಾರ ಅವುಗಳ ಸಬಲೀಕರಣಕ್ಕೆ ಒತ್ತು ನೀಡುತ್ತಿಲ್ಲ. ಹೊಸ ತಾಲೂಕುಗಳು ರಚನೆಯಾದರೂ, ಹಳೇ ತಾಲೂಕು ಕೇಂದ್ರಕ್ಕೆ ಅಲೆದಾಡ ತಪ್ಪುತ್ತಿಲ್ಲ. ಕಾಟಾಚಾರಕ್ಕೆ ಮುರ್‍ನಾಲ್ಕು ಕಚೇರಿಗಳನ್ನು ಆರಂಭಿಸಿದ್ದು ಬಿಟ್ಟರೆ, ಮತ್ಯೇನೂ ಇಲ್ಲ. ಹೊಸ ತಾಲೂಕುಗಳು ಹೆಸರಿಗೆ ಸೀಮಿತವಾಗಿವೆ. –ಮಾರುತಿ ಚಿಟಗಿ, ಸಿಐಟಿಯು ಮುಖಂಡರು
-ವೀರೇಂದ್ರ ನಾಗಲದಿನ್ನಿ