ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನ್ನ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ವಲಸಿಗ ಸಚಿವರಿಗೆ ಹಿಂದಿನ ಖಾತೆಗಳನ್ನೇ ಮುಂದುವರಿಸಿರುವ ಸಿಎಂ ಬೊಮ್ಮಾಯಿ ಹೊಸದಾಗಿ ಸೇರ್ಪಡೆಯಾದವರಿಗೆ ಬಂಪರ್ ಖಾತೆಗಳನ್ನು ನೀಡಿದ್ದಾರೆ.
ಮೊದಲ ಬಾರಿಗೆ ಸಚಿವ ಸ್ಥಾನ ಪಡೆದ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ರಿಗೆ ಗೃಹ ಖಾತೆ ನೀಡಲಾಗಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ಇಂಧನ ಖಾತೆ, ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದಾಗ ‘ಜನತಾ ಪರಿವಾರ’ ದಿಂದ ಬಂದವರು ಎಂಬ ಮಾತುಗಳು ಮುನ್ನೆಲೆಗೆ ಬಂದಿದ್ದವು. ವಿರೋಧ ಪಕ್ಷಗಳು ಕೂಡಾ ಇದೇ ಅಂಶವನ್ನು ಇಟ್ಟುಕೊಂಡು ಟೀಕೆ ಮಾಡಿದ್ದವು. ಸಂಘ ಪರಿವಾರ ಅಥವಾ ಮೂಲ ಬಿಜೆಪಿಗರಿಗೆ ಸಿಎಂ ಸ್ಥಾನ ನೀಡದೆ, ಹೊರಗಿನಿಂದ ಬಂದವರಿಗೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬಂದಿತ್ತು.
ಇದನ್ನೂ ಓದಿ:ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಬೊಮ್ಮಾಯಿ: ಹಲವರಿಗೆ ಅಚ್ಚರಿ,ಹೊಸಬರಿಗೆ ಬಂಪರ್ ಖಾತೆಗಳು
ಆದರೆ ಸಚಿವರ ಖಾತೆ ಹಂಚಿಕೆ ಸಮಯದಲ್ಲಿ ಈ ಮಾತುಗಳನ್ನು ತೊಡೆದುಹಾಕುವ ಪ್ರಯತ್ನ ಮಾಡಿರುವುದು ಎದ್ದು ಕಾಣುತ್ತಿದೆ. ಸಂಘ ಪರಿವಾರ ಮೂಲದಿಂದ ಬಂದ ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್ ಗೆ ಪ್ರಮುಖ ಖಾತೆಗಳನ್ನು ನೀಡಿರುವುದು ಇದಕ್ಕೆ ಕಾರಣ. ಯಡಿಯೂರಪ್ಪ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ನಿರ್ವಹಿಸುತ್ತಿದ್ದ ಗೃಹ ಖಾತೆಯನ್ನು ಮೊದಲ ಬಾರಿಗೆ ಸಚಿವರಾದ ಅರಗ ಜ್ಞಾನೇಂದ್ರ ಅವರಿಗೆ ನೀಡಲಾಗಿದೆ. ಈ ಹಿಂದೆ ಡಿ ಕೆ ಶಿವಕುಮಾರ್, ನಂತರ ಸ್ವತಃ ಯಡಿಯೂರಪ್ಪ ತನ್ನ ಬಳಿ ಇಟ್ಟುಕೊಂಡಿದ್ದ ಪವರ್ ಪುಲ್ ಇಂಧನ ಖಾತೆಯನ್ನು ಸುನೀಲ್ ಕುಮಾರ್ ಅವರಿಗೆ ನೀಡಲಾಗಿದೆ. (ಶೋಭಾ ಕರಂದ್ಲಾಜೆ ಅವರೂ ಈ ಖಾತೆಯನ್ನು ನಿರ್ವಹಿಸಿದ್ದರು)
ವಲಸಿಗರ ರಕ್ಷಣೆ ಮಾಡಿದ ಬಿಎಸ್ ವೈ: ಕಾಂಗ್ರೆಸ್- ಜೆಡಿಎಸ್ ನಿಂದ ವಲಸೆ ಬಂದು ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಸಚಿವರಾದವರು ತಮ್ಮ ಹಳೆಯ ಖಾತೆಗಳನ್ನೇ ಮರಳಿ ಪಡೆದಿದ್ದಾರೆ. ವಲಸಿಗರ ರಕ್ಷಣೆ ಮಾಡುವಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸಫಲರಾಗಿದ್ದಾರೆ.
ರಾಮುಲು, ಸಿ.ಸಿ.ಪಾಟೀಲ್ ಗೆ ಪ್ರಮೋಶನ್?: ಕಳೆದ ಬಾರಿ ಆರೋಗ್ಯ ಖಾತೆಯನ್ನು ಬಿಟ್ಟುಕೊಟ್ಟಿದ್ದ ಶ್ರೀರಾಮುಲು ಗೆ ಈ ಬಾರಿ ಪ್ರಮೋಶನ್ ನೀಡಲಾಗಿದೆ. ಯಡಿಯೂರಪ್ಪ ಸರ್ಕಾರದಲ್ಲಿ ಲಕ್ಷ್ಷಣ ಸವದಿ ನಿರ್ವಹಿಸಿದ್ದ ಸಾರಿಗೆ ಖಾತೆಯನ್ನು ಈ ಬಾರಿ ರಾಮುಲು ಪಡೆದುಕೊಂಡಿದ್ದಾರೆ. ಕಳೆದ ಬಾರಿ ಸಣ್ಣ ಕೈಗಾರಿಕೆ ಸಚಿವರಾಗಿದ್ದ ಸಿ.ಸಿ.ಪಾಟೀಲ್ ಅವರಿಗೆ ಪ್ರಮುಖ ಲೋಕೊಪಯೋಗಿ ಖಾತೆ ನೀಡಲಾಗಿದೆ.