ಸಿನಿಮಾರಂಗದಲ್ಲಿ ಯಶಸ್ಸು ಸುಲಭವಲ್ಲ. ಪರಿಶ್ರಮ, ಶ್ರದ್ಧೆ ಇರಲೇಬೇಕು. ಇವೆರೆಡು ಇದ್ದರೂ, ಇಲ್ಲಿ ಅದೃಷ್ಟ ಅನ್ನೋದು ಬಹಳ ಮುಖ್ಯ. ತಮ್ಮ ಅದೃಷ್ಟಕ್ಕಾಗಿ ಅದೆಷ್ಟೋ ಸಿನಿಮಾ ಮಂದಿ ತಮ್ಮ ಹೆಸರನ್ನು ಬದಲಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಅದು ನಾಯಕ, ನಾಯಕಿ, ನಿರ್ದೇಶಕ, ನಿರ್ಮಾಪಕರಿಂದ ಹಿಡಿದು ತಂತ್ರಜ್ಞರವರೆಗೂ ಪಟ್ಟಿ ಸಿಗುತ್ತೆ. ಆ ಸಾಲಿಗೆ ಈಗ ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್ ಕೂಡ ತಮ್ಮ ಹೆಸರು ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಹೌದು, ಗುಂಡ್ಲುಪೇಟೆ ಸುರೇಶ್ ಇನ್ನು ಮುಂದೆ ಎಲ್.ಎಂ.ಸೂರಿ ಎಂಬ ಹೆಸರಿನೊಂದಿಗೆ ಗುರುತಿಸಿಕೊಳ್ಳಲಿದ್ದಾರೆ. ಕಾರಣ, ಸಂಖ್ಯಾಶಾಸ್ತ್ರ. ಹೌದು, ಸಿನಿಮಾ ಮಂದಿಗೆ ಹೆಸರು ಬದಲಿಸಿಕೊಂಡರೆ ಅದೃಷ್ಟ ಹುಡುಕಿ ಬರುತ್ತೆ ಎಂಬುದು ಬಲವಾದ ನಂಬಿಕೆ. ಹೆಸರು ಬದಲಿಸಿಕೊಂಡ ಬೆರಳೆಣಿಕೆ ಮಂದಿ ಯಶಸ್ಸು ಪಡೆದಿದ್ದೂ ಇದೆ. ಹಾಗಾಗಿ, ಈಗ ಗುಂಡ್ಲುಪೇಟೆ ಸುರೇಶ್ ಅವರು ಎಲ್.ಎಂ.ಸೂರಿಯಾಗಿದ್ದಾರೆ. ಅವರ ತಂದೆ ಹೆಸರು ಲಕ್ಕೇಗೌಡ, ತಾಯಿ ಮಾದಮ್ಮ.
ಅವರಿಬ್ಬರ ಹೆಸರಿನ ಮೊದಲ ಅಕ್ಷರವನ್ನು ಬಳಸಿ ಎಲ್.ಎಂ.ಸೂರಿ ಎಂದು ಕರೆಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಕುರಿತು ಹೇಳುವ ಎಲ್.ಎಂ.ಸೂರಿ, “ತಂದೆ, ತಾಯಿ ನನಗೆ ಸ್ಫೂರ್ತಿ. ಅವರು ಕಷ್ಟದಲ್ಲಿದ್ದವರು, ನನ್ನನ್ನು ಪ್ರೀತಿಯಿಂದ ಬೆಳೆಸಿದವರು. ಅವರೀಗ ಇಲ್ಲ. ಆದರೆ, ಅವರ ನೆನಪು ಸದಾ ಇರುತ್ತೆ. ಹಾಗಾಗಿ ನನ್ನ ಹೆಸರಿನೊಂದಿಗೆ ಅವರು ಇರಬೇಕು ಎಂಬ ಕಾರಣಕ್ಕೆ ನಾನು ಎಲ್.ಎಂ.ಸೂರಿ ಎಂದು ಹೆಸರು ಬದಲಿಸಿಕೊಂಡಿದ್ದೇನೆ’ ಎನ್ನುತ್ತಾರೆ ಅವರು. ಎಲ್.ಎಂ.ಸೂರಿ ಇಂಡಸ್ಟ್ರಿಗೆ ಬಂದು ಒಂದುವರೆ ದಶಕವಾಗಿದೆ.
ಇದುವರೆಗೆ 17 ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದಾರೆ. “ಪೆರೋಲ್’ ಅವರ ಮೊದಲ ಚಿತ್ರ. ಅದಾದ ಬಳಿಕ “ಹುಡುಗ ಹುಡುಗಿ’,”ಬರ್ಫಿ’, “ನಾನಿ’, “ಭುಜಂಗ’, “ಕಾಜಲ್’, “ಕಾಲಚಕ್ರ’, “ನನ್ ಮಗಳೇ ಹೀರೋಯಿನ್’, “ಕಾಳಿದಾಸ ಕನ್ನಡ ಮೇಷ್ಟ್ರು’ ಸೇರಿದಂತೆ ಹಲವು ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದಾರೆ. ಇಷ್ಟೆಲ್ಲಾ ಮಾಡಿದರೂ, ಯಶಸ್ಸು ದೂರ. “ಎಂಆರ್‌ಪಿ’ ನಿರ್ದೇಶಕ ಬಾಹುಬಲಿ, “ಸರ್, ಎಲ್ಲರೂ ನಿಮ್ಮನ್ನ ಸ್ಟಿಲ್ ಫೋಟೋಗ್ರಾಫರ್ ರೀತಿ ನೋಡುತ್ತಿದ್ದಾರೆ. ಈಗಾದರೂ ನಿಮ್ಮ ಹೆಸರು ಬದಲಿಸಿಕೊಳ್ಳಿ’ ಅಂದಿದ್ದಕ್ಕೆ “ಎಂಆರ್‌ಪಿ’ ಚಿತ್ರದ ಮೂಲಕ ಎಲ್.ಎಂ.ಸೂರಿಯಾಗುತ್ತಿದ್ದಾರೆ ಅವರು.