ಮಂಗಳೂರು: ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡ ನೂತನ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡದ ಉದ್ಘಾಟನೆ ಆ. 15ರಂದು ಸಂಜೆ 3ಕ್ಕೆ ನಡೆಯಲಿದೆ ಎಂದು ವೆನ್ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ| ಜೆಸಿಂತ ಡಿಸೋಜಾ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ಸ್ಪೀಕರ್ ಯು.ಟಿ. ಖಾದರ್, ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎಸ್. ಅವರು ಉಪಸ್ಥಿತಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಉದ್ಘಾಟಿಸುವರು.ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.
ಆಧುನಿಕ ವೈದ್ಯಕೀಯ ತಂತ್ರಜ್ಞಾನಕ್ಕೆ ಅನುಗುಣವಾಗಿ ಸಚಿವ ದಿನೇಶ್ ಅವರು ಸ್ಮಾರ್ಟ್ ಸಿಟಿಯಿಂದ 7 ಕೋಟಿ ರೂ. ವೆಚ್ಚದ ಆಧುನಿಕ ವೈದ್ಯಕೀಯ ಯಂತ್ರೋಪ ಕರಣಗಳನ್ನು ಒದಗಿಸಿದ್ದಾರೆ. ಸರಕಾರದ ವತಿಯಿಂದ 2 ಕೋಟಿ ರೂ. ಹಾಗೂ ಕೆಎಂಸಿ ವತಿಯಿಂದ 4 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
56 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸರ್ಜಿಕಲ್ ಕಟ್ಟಡವು ತಳ, ನೆಲ ಸೇರಿ 7 ಅಂತಸ್ತು ಗಳನ್ನು ಹೊಂದಿದೆ. 250 ಹಾಸಿಗೆಗಳ ಸೌಲಭ್ಯವಿದ್ದು, 4ನೇ ಅಂತಸ್ತಿನವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡದ ತಳ ಅಂತಸ್ತಿನಲ್ಲಿ ಕ್ಯಾಥ್‌ಲ್ಯಾಬ್ ಮತ್ತು ರೇಡಿಯಾಲಜಿ ವಿಭಾಗಗಳಿವೆ. ನೆಲ ಅಂತಸ್ತಿನಲ್ಲಿ 15 ಹಾಸಿಗೆಗಳ ತುರ್ತು ಚಿಕಿತ್ಸಾ ವಿಭಾಗ, 8 ಹಾಸಿಗೆಗಳ ತುರ್ತು ಚಿಕಿತ್ಸಾ ಐಸಿಯು, ಎಂಡೋಸ್ಕೋಪಿ ಮತ್ತು ತುರ್ತು ಶಸ್ತ್ರ ಚಿಕಿತ್ಸಾ ಕೊಠಡಿಗಳಿವೆ ಎಂದು ಅವರು ವಿವರಿಸಿದರು.
ಡಾ| ನವೀನ್, ಡಾ| ಸದಾನಂದ ಪೂಜಾರಿ ಉಪಸ್ಥಿತರಿದ್ದರು.