Advertisement

ಜಾಹೀರಾತುಗಳಿಗೆ ಹೊಸ ಉಪನಿಯಮ

03:20 PM Aug 05, 2018 | Team Udayavani |

ಬೆಂಗಳೂರು: ಅನಧಿಕೃತ ಜಾಹೀರಾತು ಫ‌ಲಕಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ ಹೊಸ ಜಾಹೀರಾತು ಉಪವಿಧಿಗಳನ್ನು (ಬೈಲಾ) ತರಲು ಯೋಜನೆ ರೂಪಿಸಿದೆ. 

Advertisement

ಜಾಹೀರಾತು ಫ‌ಲಕಗಳ ಅಳವಡಿಕೆ ಹಾಗೂ ನವೀಕರಣದ ಅನುಮತಿಯನ್ನು ಕೆಎಂಸಿ ಕಾಯ್ದೆ ವ್ಯಾಪ್ತಿಗೆ ಬರುವ ಜಾಹೀರಾತು ಬೈಲಾ 2006ರ ಪ್ರಕಾರ ನೀಡಲಾಗುತ್ತಿದೆ. ಕಳೆದ ಹನ್ನೆರಡು ವರ್ಷಗಳಲ್ಲಿ ಜಾಹೀರಾತು ಪ್ರದರ್ಶನ ಮಾದರಿಯಲ್ಲಿ ಪರಿಣಾಮಕಾರಿ ಬದಲಾವಣೆಗಳಾಗಿವೆ. ಆ ಹಿನ್ನೆಲೆಯಲ್ಲಿ ಹೊಸ ಬೈಲಾ ಜಾರಿಗೆ ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ.

ದೊಡ್ಡ ಹೋರ್ಡಿಂಗ್ಸ್‌, ತಾತ್ಕಾಲೀಕ ಜಾಹೀರಾತು, ವಾಣಿಜ್ಯ ಮಳಿಗೆಗಳಲ್ಲಿ ಪ್ರದರ್ಶನ ಜಾಹೀರಾತು, ಕೇಬಲ್‌ ಆ್ಯಡ್‌ ಸೇರಿ 19 ರೀತಿಯ ಜಾಹೀರಾತುಗಳನ್ನು ಹೊಸ ಬೈಲಾ ಅಡಿಯಲ್ಲಿ ಸೇರಿಸಿದ್ದು, ಜಾಹೀರಾತು ಪ್ರಕಟಿಸಲು ಪಾಲಿಕೆ ಅನುಮತಿ ಕಡ್ಡಾಯವಾಗಿರುತ್ತದೆ.

ವಲಯಗಳ ಬದಲಾವಣೆ: ಹಳೆಯ ಬೈಲಾಗಳ ಪ್ರಕಾರ ಜಾಹೀರಾತು ಅಳವಡಿಕೆಗೆ ಎ, ಬಿ, ಸಿ ಮತ್ತು ಡಿ ಎಂಬ ನಾಲ್ಕು ವಲಯಗಳನ್ನು ಮಾಡಲಾಗಿತ್ತು. ಅದರಂತೆ ಎ ವಲಯ ವ್ಯಾಫ್ತಿಯ ಕುಮಾರ ಕೃಪಾ ರಸ್ತೆ, ರಾಜಭವನ ರಸ್ತೆ ಸೇರಿ 10 ರಸ್ತೆಗಳಲ್ಲಿ ಜಾಹೀರಾತು ಅಳವಡಿಕೆ ನಿರ್ಬಂಧಿಸಲಾಗಿದೆ. ಉಳಿದಂತೆ ಬಿ ವಲಯದಲ್ಲಿ 24, ಸಿ ವಲಯದಲ್ಲಿ 99 ಹಾಗೂ ಡಿ ವಲಯದಲ್ಲಿ 97 ರಸ್ತೆಗಳಲ್ಲಿ ಜಾಹೀರಾತು ಅಳವಡಿಕೆಗೆ ಅನುಮತಿ ನೀಡಲಾಗಿದೆ. 

ಇದರೊಂದಿಗೆ ಹಳೆಯ ವಲಯಗಳಲ್ಲಿ ಜಾಹೀರಾತು ಅಳವಡಿಕೆ ಅಳತೆಯಲ್ಲಿ ಬದಲಾವಣೆ ಮಾಡಬೇಕಿದ್ದು, ಕಳೆದ 12 ವರ್ಷಗಳಲ್ಲಿ ವಲಯಗಳು ಹೆಚ್ಚು ಅಭಿವೃದ್ಧಿಯಾದ ಹಿನ್ನೆಲೆಯಲ್ಲಿ ಜಾಹೀರಾತು ತೆರಿಗೆ ಹೆಚ್ಚಿಸಬೇಕಿದೆ. ಜತೆಗೆ ಹಲವು ರಸ್ತೆಗಳ ವಲಯಗಳನ್ನು ಬದಲಿಸಬೇಕಿದ್ದು, ಹೊಸದಾಗಿ ಕೆಲ ರಸ್ತೆಗಳನ್ನು ಜಾಹೀರಾತು ವಲಯ ವ್ಯಾಪ್ತಿಗೆ ತರಲಾಗುತ್ತಿದೆ. 

Advertisement

ಅಳತೆ ಮೀರಿದರೆ ಕ್ರಮ: ಪಾಲಿಕೆಯ ಬಿ ವಲಯದಲ್ಲಿ ಗರಿಷ್ಠ 30*15, ಸಿ ಮತ್ತು ಡಿ ವಲಯದಲ್ಲಿ ಗರಿಷ್ಠ 40*20 ಅಳತೆಯ ಜಾಹೀರಾತು ಫ‌ಲಕಗಳನ್ನು ಅಳವಡಿಸಲು ಅವಕಾಶವಿದೆ. ಆದರೆ, ಏಜೆನ್ಸಿಗಳು ನಿಯಮಬಾಹಿರವಾಗಿ ಹೆಚ್ಚಿನ ಅಳತೆಯ ಜಾಹೀರಾತು ಫ‌ಲಕಗಳನ್ನು ಅಳವಡಿಸುತ್ತಿರುವುದರಿಂದ ಪಾಲಿಕೆಗೆ ನಷ್ಟವಾಗುತ್ತಿದೆ. ಹೀಗಾಗಿ ಜಾಹೀರಾತು ಅಳತೆ ಹೆಚ್ಚಿಸಲು ಸಹ ಚರ್ಚಿಸಲಾಗಿದೆ. ನಿಯಮ ಉಲ್ಲಂಘನೆಗೆ ದುಬಾರಿ ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸುವ ಕುರಿತೂ ಸಮಿತಿಯಲ್ಲಿ ಚರ್ಚಿಸಲಾಗಿದೆ.

ಸಕ್ರಮಗೊಳಿಸಲು ಮುಂದಾಯಿತೆ ಪಾಲಿಕೆ?: ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ ಕೇವಲ 1,900 ಫ‌ಲಕಗಳು ಮಾತ್ರ ಅಧಿಕೃತ ಫ‌ಲಕಗಳಿದ್ದು, ಈ ಹಿಂದೆ ಪಾಲಿಕೆಯ ಅಧಿಕಾರಿಗಳು ಸರ್ವೆ ನಡೆಸಿದಾಗ 10,172 ಅನಧಿಕೃತ ಜಾಹೀರಾತು ಫ‌ಲಕಗಳಿರುವುದು ಬಯಲಾಗಿತ್ತು. ಇದೀಗ ಅವುಗಳನ್ನು ಸಕ್ರಮಗೊಳಿಸುವ ಕುರಿತು ಚರ್ಚೆ ನಡೆಯುತ್ತಿದ್ದು, ಹೊಸ ಬೈಲಾಗಳನ್ನು ಜಾರಿಗೊಳಿಸುವ ನೆಪದಲ್ಲಿ ಅನಧಿಕೃತ ಜಾಹೀರಾತು ಫ‌ಲಕಗಳ ಸಕ್ರಮಕ್ಕೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾದರೆ ಎಂಬ ಅನುಮಾನಗಳು ಮೂಡುತ್ತಿವೆ. 

ಹೊಸ ಜಾಹೀರಾತು ನೀತಿ ಜಾರಿಗೆ ಸಮಿತಿ ರಚಿಸಿ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದ್ದು, ಸೋಮವಾರ ಪಾಲಿಕೆ ಸಭೆಯಲ್ಲಿ ಹೊಸ ಬೈಲಾಗಳನ್ನು ಮಂಡಿಸಿ ಸದಸ್ಯರ ಸಲಹೆಗಳೊಂದಿಗೆ ಅನುಮೋದನೆ ಪಡೆದು ಸರ್ಕಾರಕ್ಕೆ ಕಳುಹಿಸಲಾಗುವುದು.
-ಎಂ.ಶಿವರಾಜು, ಪಾಲಿಕೆ ಆಡಳಿತ ಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next