Advertisement

ಪ್ರೇಮ ರಾಮಾಯಣ

11:05 PM Jul 22, 2019 | mahesh |

ನಮ್ಮ ಪ್ರೇಮವೇ ಶಾಶ್ವತ, ನಮ್ಮ ಪ್ರೀತಿಯೇ ಶ್ರೇಷ್ಠ ಹೀಗೆಲ್ಲಾ ಯೋಚನೆ ಮಾಡುವ ನಾವು, ನಾವು ನಂಬಿರೋ ನಮ್ಮ ಪೂರ್ವಿಕರ ಪ್ರೇಮದ ಬಗ್ಗೆ ತಿಳಿದಿದ್ದೀವಾ? ಇಲ್ಲ. ಅವರ ಪ್ರೀತಿಯ ಪಾವಿತ್ರ್ಯ, ಅದರ ಅಗಾಧತೆ ಗೊತ್ತೇ? ಅವರು ನಮ್ಮ ನಿಮ್ಮಂತೆ ಪ್ರೇಮಿಸಿದರೂ ರಾಜ್ಯ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ವಿಮುಖರಾಗಲಿಲ್ಲ. ಅಂದರೆ, ಅವರ ಪ್ರೇಮ ಯಾವತ್ತೂ ಯಾವುದಕ್ಕೂ ಅಡ್ಡಿಯಾಗಲಿಲ್ಲ. ಹೀಗೆ, ಪ್ರೇಮದ ಜೊತೆಗೆ ಬದುಕಿನ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿ ಜಗತ್ತನ್ನು ಗೆದ್ದವರು. ಅದರಲ್ಲೂ ಅಸಾಮಾನ್ಯ ಆದರ್ಶಗಳನ್ನು ಜಗತ್ತಿಗೆ ನೀಡಿದವರ ಕುರಿತು ಈಗಲೂ ಚರ್ಚೆಗಳಾಗುತ್ತಲೇ ಇವೆ. ಇದೆಲ್ಲ ಹೇಗೆ ಸಾಧ್ಯವಾಯಿತು? ನೋಡೋಣ…

Advertisement

ಪ್ರೇಮಕ್ಕೂ, ಕಾಮಕ್ಕೂ ವ್ಯತ್ಯಾಸವೇನು? ಕಾಮವನ್ನು ಪ್ರೇಮವೆಂದು ತಿಳಿಯುವುದು ಮತ್ತು ಪ್ರೇಮವನ್ನು ಕಾಮವೆಂದು ಊಹಿಸುವುದು.. ಇದು ಈ ಕಾಲಘಟ್ಟದ ಸಮಸ್ಯೆ ಎಂದರೆ ಅದು ಉತ್ಪ್ರೇಕ್ಷೆ. ಮನುಷ್ಯ ಬಾಳಿ ಬದುಕಿದ ಎಲ್ಲ ಕಾಲಘಟ್ಟಗಳಲ್ಲೂ ಇವೆಲ್ಲ ನಡೆದೇ ಇದೆ. ಪುರಾಣ ಕಾಲದಲ್ಲಿ ಎಲ್ಲವೂ ಸರಿಯಾಗಿತ್ತು, ಈ ಕಾಲದಲ್ಲಿ ಎಲ್ಲವೂ ಹಾಳಾಗಿದೆ ಎನ್ನುವುದು ಮತ್ತು ಈಗ ಎಲ್ಲ ಸರಿಯಾಗಿದೆ, ಆಗ ಎಲ್ಲವೂ ದರಿದ್ರ ಸ್ಥಿತಿಯಲ್ಲಿತ್ತು ಎನ್ನುವುದು… ಇವೆಲ್ಲ ಮನುಷ್ಯ ಸ್ವಭಾವವನ್ನು ಸರಿಯಾಗಿ ಅರಿಯಲಾರದವರು ಮಾತ್ರ ಹೇಳುವ ಮಾತು.

ಭಾರತೀಯ ಪುರಾಣಗಳನ್ನು ಇತಿಹಾಸವೆಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಅವನ್ನು ಶುದ್ಧ ಪುರಾಣವೆಂದು ಕರೆಯುತ್ತಾರೆ. “ಪುರಾಣ’ ಪದದ ಅರ್ಥವೇ ಹಿಂದೆ ನಡೆದಿದ್ದು ಎಂದು. ಹಾಗಿದ್ದ ಮೇಲೆ, ಹಿಂದೇನೋ ನಡೆದಿರಬೇಕು ಎನ್ನುವುದಂತೂ ಸತ್ಯ. ಪುರಾಣದ ಪಾತ್ರಗಳು ಜಗತ್ತಿನ ಎಲ್ಲ ನಾಗರಿಕತೆಗಳಲ್ಲಿ ಈಗಲೂ ಬದುಕಿವೆ. 2000 ವರ್ಷಗಳ ಹಿಂದಿನ ಯೇಸು ಕ್ರಿಸ್ತ ಜಗತ್ತಿನ ಬಹುದೊಡ್ಡ ಭಾಗಗಳಲ್ಲಿ ದೇವರಾಗಿ ಬದಲಾಗಿದ್ದಾನೆ. ಅಂತಹ ಒಬ್ಬ ಮಹಾತ್ಮ ಇದ್ದಾನೆ ಎನ್ನುವುದಕ್ಕೆ ನಂಬಿಕೆಯೊಂದೇ ಆಧಾರ. ಕ್ರಿಸ್ತನಿಗೂ ಮುನ್ನ ಮೋಸೆಸ್‌ ಇದ್ದ ಎನ್ನುವುದಕ್ಕೂ ಈಗ ಯಾವ ಸಾಕ್ಷ್ಯವೂ ಇಲ್ಲ. ಆಗ ಜನರ ಜೀವನದಲ್ಲಿದ್ದ ಸೈತಾನ್‌ ಈಗಲೂ ಇದ್ದಾನೆ. ಕ್ರಿಸ್ತನಿಗೆ ವಿರುದ್ಧ ಶಕ್ತಿಯೆಂದರೆ ಸೈತಾನ್‌ ಎಂದು ಯೂರೋಪಿನ ಬಹುತೇಕರು ನಂಬುತ್ತಾರೆ.

ಭಾರತೀಯ ಪುರಾಣಗಳು ಅತ್ಯಂತ ವೈವಿಧ್ಯಮಯವಾಗಿವೆ, ಅತಿರಂಜಕವಾಗಿವೆ, ಅತಿಮಾನುಷವಾಗಿವೆ, ಮಾನವೀಯತೆಯ ತುದಿಗೂ ತಲುಪಿವೆ, ವಾಸ್ತವತೆಯ ಗರಿಷ್ಠ ಮಿತಿಯನ್ನೂ ಸ್ಪರ್ಶಿಸಿವೆ. ಅಲ್ಲಿ ದೇವತೆಗಳಿದ್ದಾರೆ, ದೇವಲೋಕಗಳಿವೆ, ಮಾನವರಿದ್ದಾರೆ, ರಾಕ್ಷಸರಿದ್ದಾರೆ, ಅತ್ಯಾಚಾರಿಗಳಿದ್ದಾರೆ, ನಪುಂಸಕರಿದ್ದಾರೆ (ಈಗ, ತೃತೀಯ ಲಿಂಗಿಗಳ ಸಾಲಿಗೆ ಸೇರುತ್ತಾರೆ), ಪ್ರೇಮಿಗಳಿದ್ದಾರೆ, ಕಾಮಿಗಳಿದ್ದಾರೆ, ವಿದ್ವಾಂಸರು, ಜನಸಾಮಾನ್ಯರು ಎಲ್ಲರೂ ಇದ್ದಾರೆ. ಈ ಪುರಾಣಗಳು ಎಲ್ಲರ ಬದುಕಿಗೂ ಸಮೃದ್ಧ ಜಾಗವೊದಗಿಸಿವೆ. ಬಹುಶಃ ಮನುಷ್ಯ ಚರಿತ್ರೆಯನ್ನು, ಮನೋಭಾವವನ್ನು, ಇತಿಹಾಸವನ್ನು, ಸಾವಿರಾರು ವರ್ಷಗಳ ಹಿಂದಿನ ಜನಜೀವನವನ್ನು ಅರಿಯಲು ಪುರಾಣಗಳೂ ಮಹತ್ವದ ಸಾಧನ.

ಪುರಾಣಗಳಲ್ಲಿನ ಪ್ರೇಮಕ್ಕೆ ರಾಮ ಅಸಾಮಾನ್ಯ ಉದಾಹರಣೆ. ಪ್ರೇಮವೆಂದರೆ ಶ್ರೀಕೃಷ್ಣ ಎಂದು ರಾಧಾ-ಕೃಷ್ಣರ ಸಂಬಂಧವನ್ನು ಉದಾಹರಿಸುತ್ತಾರೆ. ರಾಧೆ ಅನ್ನುವ ಪಾತ್ರವೇ ಇರಲಿಲ್ಲ, ಶ್ರೀಕೃಷ್ಣ-ರಾಧೆಯರ ಪ್ರೇಮಪ್ರಸಂಗ ಕವಿಗಳ ಸೃಷ್ಟಿ ಎಂದು ಕನ್ನಡ ಸಾಹಿತ್ಯ ಕಂಡ ಶ್ರೇಷ್ಠ ಸಾಹಿತಿ ಎಸ್‌.ಎಲ್‌.ಭೈರಪ್ಪ ಹೇಳುತ್ತಾರೆ. ಅವರು ಹೇಳುವ ಪ್ರಕಾರ ರಾಧೆಯ ಉಲ್ಲೇಖ ಬರುವುದು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಮಾತ್ರ. ಈ ಚರ್ಚೆ ಏನೇ ಇದ್ದರೂ, ರಾಮನೆಂಬ ಪ್ರೇಮ ಸ್ವರೂಪಿಯನ್ನು ಜಗತ್ತು ನೋಡಿಯೇ ಇಲ್ಲ. ಮನುಷ್ಯ ಭಾವದ ಸಂಪೂರ್ಣ ಪ್ರಕಟೀಕರಣವನ್ನು ರಾಮನಲ್ಲಿ ನೋಡಬಹುದು.

Advertisement

ರಾಮಾಯಣದಲ್ಲಿನ ವರ್ಣನೆಗಳನ್ನು ಗಮನಿಸಿದರೆ ರಾಮನಿಗಿಂತ ಸೀತೆ ಕೇವಲ 2 ವರ್ಷ ಚಿಕ್ಕವಳು. ಆಕೆಗೆ 14 ವರ್ಷಕ್ಕೆ ಮದುವೆಯಾಯಿತು. ಆಗ ರಾಮನಿಗೆ 16 ವರ್ಷ! ಮದುವೆಯಾಗಿ ಇನ್ನೇನು ಯುವರಾಜನಾಗಿ ಪಟ್ಟಾಭಿಷೇಕವಾಗಬೇಕು, ಆಗ ರಾಮ ಕಾಡಿಗೆ ಹೋಗಬೇಕಾದ ಸ್ಥಿತಿ. ಕಾಡಿಗೆ ಹೋಗುವುದು ತನ್ನ ಕರ್ಮ, ನೀನು ಬರಬೇಡ ಎಂದು ರಾಮ ಹೇಳಿದರೂ, ಪತಿಯನ್ನು ಹಿಂಬಾಲಿಸುವುದು ನನ್ನ ಧರ್ಮ ಎಂದು ಸೀತೆ ಜೊತೆಗೆ ನಡೆಯುತ್ತಾಳೆ. ಲಕ್ಷ್ಮಣ, ಇವರಿಬ್ಬರನ್ನು ಹಿಂಬಾಲಿಸುತ್ತಾನೆ. ಇಲ್ಲಿಂದ ಶುರುವಾಗುವ ರಾಮನ ಪ್ರೇಮದ ಯಾನ, ರಾಮಾಯಣದ ಅಂತ್ಯದವರೆಗೂ ಮುನ್ನಡೆಯುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇಡೀ ರಾಮಾಯಣವೇ ಒಂದು ಪ್ರೇಮಪುರಾಣ. ಅಲ್ಲಿರುವುದು ಒಂದಾ, ಎರಡಾ ಪ್ರೇಮ ಕಥೆಗಳು? ರಾಮ-ಸೀತೆಯರ ಪವಿತ್ರ ಪ್ರೇಮ, ದಶರಥ-ಕೈಕೇಯಿ ನಡುವಿನ ವಚನಪ್ರೇಮ, ಲಕ್ಷ್ಮಣ-ಊರ್ಮಿಳೆ, ಭರತ-ಮಾಂಡವಿ, ಶತೃಘ್ನ-ಶೃತಕೀರ್ತಿಯರ ನಡುವಿನ ಇತಿಹಾಸದಲ್ಲಿ ದಾಖಲಾಗದೇ ಹೋದ ಅದೃಶ್ಯ ಪ್ರೇಮ, ದುಷ್ಟ ರಾವಣನ ಮೇಲೆ ಪತ್ನಿ ಮಂಡೋದರಿಗಿರುವ ಅನನ್ಯ ಪ್ರೇಮ, ಸಹೋದರ ಸುಗ್ರೀವನ ಪತ್ನಿ ರುಮೆಯ ಮೇಲೆ ವಾಲಿಗಿರುವ ಪ್ರೇಮ, ವಾಲಿ ಸತ್ತ ನಂತರ ಸುಗ್ರೀವನ ಮೇಲೆ ವಾಲಿಯ ಪತ್ನಿ ತಾರೆಗೆ ಒದಗುವ ಅನಿವಾರ್ಯ ಪ್ರೇಮ…..ರಾಮಾಯಣವೊಂದು ಪ್ರೇಮ ಪರ್ವ.

ಈ ಪ್ರೇಮವೇ ರಾಮಾಯಣವನ್ನು ಹಂತಹಂತವಾಗಿ ಕಟ್ಟುತ್ತದೆ, ಈ ಪ್ರೇಮವೇ ರಾಮಾಯಣವನ್ನು ಬೆಳೆಸುತ್ತದೆ, ಈ ಪ್ರೇಮವೇ ರಾಮಾಯಣವನ್ನು ಉಳಿಸುತ್ತದೆ, ಅದೇ ರಾಮಾಯಣವನ್ನು ದಂತಕಥೆಯನ್ನಾಗಿಸುತ್ತದೆ. ಸೀತೆಯ ಮೇಲಿನ ಪ್ರೇಮದಿಂದಲೋ, ಕಾಮದಿಂದಲೋ ರಾವಣ ಅವಳನ್ನು ಅಪಹರಿಸುತ್ತಾನೆ, ಅವಳ ಮೇಲಿನ ಪ್ರೇಮದಿಂದಲೇ ತಾನೆಂದೂ ಕೇಳಿಯೇ ಇರದಿದ್ದ ಲಂಕೆಯವರೆಗೆ ರಾಮ ನಡೆದೇ ಹೋಗುತ್ತಾನೆ. ರಾವಣನನ್ನು ಗೆಲ್ಲುತ್ತಾನೆ, ಕೊಲ್ಲುತ್ತಾನೆ, ಸೀತೆಯನ್ನು ಪಡೆಯುತ್ತಾನೆ. ಜಗತ್ತಿಗೆ ಸೀತೆ ಪತಿವ್ರತೆ ಎಂದು ಗೊತ್ತಾಗಬೇಕೆಂದು ಅಗ್ನಿಪರೀಕ್ಷೆಗೆ ಸೀತೆ ತಾನೇ ಸಿದ್ಧಳಾಗುವಂತಹ ಪರಿಸ್ಥಿತಿಯನ್ನು ರಾಮ ಸೃಷ್ಟಿಸುತ್ತಾನೆ. ಅಗ್ನಿಶುದ್ಧಳಾದ ಅವಳನ್ನು ಸ್ವೀಕರಿಸುತ್ತಾನೆ. ಮುಂದೆ ಅಯೋಧ್ಯೆಯಲ್ಲಿ ಸೀತೆಯ ಮೇಲೆ ಜನರು ಬಾಯಿಗೆ ಬಂದಂತೆ ಮಾತನಾಡಿದಾಗ ಅವಳನ್ನು ವಾಲ್ಮೀಕಿಯ ಆಶ್ರಮಕ್ಕೆ ಕಳಿಸುತ್ತಾನೆ. ಇತಿಹಾಸದಲ್ಲಿ ಶಾಶ್ವತ ನಿಂದನೆಗೆ ತುತ್ತಾದರೂ ರಾಮ, ಸೀತೆಯನ್ನು ಎಂದೆಂದೂ ಪವಿತ್ರಳನ್ನಾಗಿ ಉಳಿಸುವಲ್ಲಿ ಯಶಸ್ವಿಯಾಗುತ್ತಾನೆ! ವರ್ತಮಾನದಲ್ಲಿ ರಾಮ ನೀನು ಮಾಡಿದ್ದು ಸರಿಯಲ್ಲ; ಗರ್ಭಿಣಿಯನ್ನು ಆಕೆಗೊಂದು ಸುಳಿವನ್ನೂ ಕೊಡದೇ, ಗೊತ್ತುಗುರಿಯಿಲ್ಲದ ಜಾಗಕ್ಕೆ ಅಟ್ಟಿದೆಯಲ್ಲ ನೀನು ಹೇಡಿ ಎಂದು ಜನ ಜರಿಯುತ್ತಾರೆ. ಇಂತಹ ಆರೋಪವನ್ನು ರಾಮ, ಆಗಲೇ ಲಕ್ಷ್ಮಣನಿಂದ ಎದುರಿಸಿಯಾಗಿತ್ತು. ಅಂತಹ ನಿಂದನೆಗೆ ತನ್ನನ್ನು ಒಡ್ಡಿಕೊಂಡಾದರೂ, ಎಂದೂ ಅಳಿಸದ ಕಪ್ಪು ಕಲೆಯನ್ನು ಅಂಟಿಸಿಕೊಂಡರೂ, ಸೀತೆಯನ್ನು ರಾಮ ಪವಿತ್ರಳನ್ನಾಗಿಯೇ ಉಳಿಸಿಕೊಂಡ! ಆಕೆಯ ಪಾತಿವ್ರತ್ಯದ ಮೇಲೆ, ಅವಳ ದಿವ್ಯತೆಯ ಮೇಲೆ ಬಹುಶಃ ರಾಮನಿಗಷ್ಟು ನಂಬಿಕೆ. ಈಗ ಜನ ಸೀತೆಯ ಪಾತಿವ್ರತ್ಯದ ಮೇಲೂ, ರಾಮನ ಈ ಹೇಯ ಕೃತ್ಯದ ಮೇಲೂ ಮಾತನಾಡುತ್ತಾರೆ. ಆದರೆ ಯೋಚಿಸಿ, ಅಂದು ರಾಮ ಎಷ್ಟು ನೊಂದಿರಬಹುದು? ಆ ಎರಡು ಜೀವಗಳು ತಮ್ಮ ಜೀವನಪೂರ್ತಿ ಒಂದಾಗಿದ್ದದ್ದು 16-18 ವರ್ಷಗಳು ಮಾತ್ರ. ಮುಂದೆಲ್ಲ ಅಗಲಿಕೆಯ ಕಥೆಯೇ.

ಸೀತೆ, ಇಲ್ಲದೇ ಹೋದಾಗಲೂ ರಾಮ ಮತ್ತೂಂದು ಮದುವೆಯಾಗುವುದಿಲ್ಲ. ಅಶ್ವಮೇಧಯಾಗ ಮಾಡುವಾಗ ಅವಳ, ಕಂಚಿನ ಪುತ್ಥಳಿಯನ್ನು ಇಟ್ಟುಕೊಂಡು ಯಾಗ ಕ್ರಿಯೆಗೆ ಚಾಲನೆ ನೀಡುತ್ತಾನೆ. ಅಂತಹ ರಾಮ-ಸೀತೆಯರ ಪ್ರೇಮ ಮತ್ತು ರಾಮಾಯಣದಲ್ಲಿನ ಪ್ರೇಮ, ಇದು ಕಥೆ ಮಾತ್ರವಲ್ಲ ಆದರ್ಶ-ಅನಿವಾರ್ಯತೆಗಳ ನಡುವಿನ ಆಯ್ಕೆಯ ಸಂದಿಗ್ಧದಲ್ಲಿ ಯಾವುದು ಗೆಲ್ಲಬೇಕು ಎಂಬುದರ ಸುಳಿವು.

-ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next