Advertisement

ಹೊಸಂಗಡಿ: ಸಮಸ್ಯೆಗಳ ಸುಳಿಯಲ್ಲಿ ಕೊರಗ ಕಾಲನಿ

11:53 PM Nov 05, 2019 | mahesh |

ಕುಂದಾಪುರ: ಹೊಸಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೊರಗ ಸಮುದಾಯದ ಮಂದಿ ಸಮಸ್ಯೆಗಳಿಂದ ನಲುಗುತ್ತಿದ್ದಾರೆ. ಬೆರಳೆಣಿಕೆ ಸಂಖ್ಯೆಯಲ್ಲಿ ಇರುವ ಇವರ ಸಮಸ್ಯೆ ನಿವಾರಣೆಗೆ ಆದ್ಯತೆ ಮೇಲೆ ಗಮನಹರಿಸಬೇಕಿದೆ.

Advertisement

ಕಡಿಮೆ ಸಂಖ್ಯೆಯವರು
ಅವಿಭಜಿತ ದ.ಕ. ಜಿಲ್ಲೆಯಲ್ಲಿ ವಿಶಿಷ್ಟ ಹಾಗೂ ಆದಿವಾಸಿ ಜನಾಂಗವಾದ ಕೊರಗ ಜನಾಂಗದವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದೂ ಅತ್ಯಂತ ಕಡಿಮೆ ಸಂಖ್ಯಾಬಲ ಹೊಂದಿದವರು ಇವರು. ರಾಜ್ಯದ ಇತರೆಡೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಸಂಖ್ಯಾಬಲವುಳ್ಳ ಜನಾಂಗ ಇವರದು. ದಕ್ಷಿಣಭಾರತದಲ್ಲೇ ಇವರ ಸಂಖ್ಯೆ ಕುಸಿಯುತ್ತಿದೆ ಎನ್ನುತ್ತವೆ ಅಧ್ಯಯನಗಳು. ಸ್ವಾತಂತ್ರ್ಯಪೂರ್ವದಲ್ಲೇ ಅಂದರೆ 1843ರಲ್ಲಿ ಇವರನ್ನು ಜೀತಗಾರಿಕೆ, ಗುಲಾಮತನದಿಂದ ಕಾನೂನಿನ ಮೂಲಕ ರಕ್ಷಿಸಲಾಗಿತ್ತು. ಅದರ ಬಳಿಕವೂ ಕೆಲವೆಡೆ ಈ ಜನಾಂಗ ಶೋಷಣೆಗೆ ಒಳಗಾಗುವುದನ್ನು ಆಗಾಗ ತಡೆಯಲಾಗುತ್ತಿತ್ತು.

ಹೊಸಂಗಡಿಯಲ್ಲಿ
ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 4 ಮನೆಗಳು ಕೊರಗ ಜನಾಂಗದವರದ್ದು ಇವೆೆ. ಇವರ ಮನೆಗಳಿಗೆ ಹೋಗಲು ರಸ್ತೆ ಸಮಸ್ಯೆಯಿದೆ. ಮುಖ್ಯರಸ್ತೆಯಿಂದ ತುಸು ಎತ್ತರದಲ್ಲಿ ಮನೆಗಳಿದ್ದು ಅವುಗಳನ್ನು ಸಂಪರ್ಕಿಸುವುದು ಕಷ್ಟ. ಅತೀ ಹಿಂದುಳಿದ ಪರಿಶಿಷ್ಟ ಪಂಗಡದ ಕೊರಗ ಜನಾಂಗದವರ ಮೂಲ ಸೌಕರ್ಯಗಳ ಕೊರತೆಗಳ ಪೈಕಿ ಈ ರಸ್ತೆಯ ಸಮಸ್ಯೆ ನಿವಾರಣೆಗೆೆ ಪ್ರಥಮ ಆದ್ಯತೆ ಯಾಗಿದ್ದರೂ ಈ ವರೆಗೂ ಸರಿಯಾಗಿಲ್ಲ. ಇದ್ದ ರಸ್ತೆಗೂ ಮಣ್ಣು ಬಿದ್ದು ಸಂಚಾರಕ್ಕೆ ಕಷ್ಟವಾಗಿದೆ. ಕಾಂಕ್ರಿಟ್‌ ರಸ್ತೆಯೇ ಇದಕ್ಕೆ ಪರ್ಯಾಯ ಹಾಗೂ ಪರಿಹಾರ ರೂಪವಾಗಿದೆ. ಅಷ್ಟಲ್ಲದೆ ಇಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಿಸಿದರೆ ಇನ್ನೊಂದಷ್ಟು ಮನೆಗಳಿಗೂ ಸಂಚಾರಕ್ಕೆ ಅನುಕೂಲವಾಗಲಿದೆ. ಮೂಲ ಸೌಲಭ್ಯಗಳಿಲ್ಲದೇ ಇಲ್ಲಿನ ಕುಟುಂಬದವರು ಸಂಕಷ್ಟದಲ್ಲಿದ್ದಾರೆ. ಸಮಸ್ಯೆಗೆ ಸ್ಪಂದಿಸುವವರ ಹುಡುಕಾಟದಲ್ಲಿದ್ದಾರೆ.

ಗ್ರಾಮ ಸಭೆಯಲ್ಲಿ ಇಲ್ಲಿನ ಸಮಸ್ಯೆಗಳ ವಿಚಾರ ಪ್ರಸ್ತಾವವಾಗಿದೆ. ಜಿಲ್ಲಾ ಪಂಚಾಯತ್‌ ಸದಸ್ಯ ರೋಹಿತ್‌ ಕುಮಾರ್‌ ಶೆಟ್ಟಿ, ಗ್ರಾಮ ಪಂಚಾಯತ್‌ ಅಧ್ಯಕ್ಷೆ ಯಶೋದಾ ಶೆಟ್ಟಿ, ವಾರ್ಡ್‌ ಸದಸ್ಯೆ ಅನಿತಾ ಶೆಟ್ಟಿ ಬೆದ್ರಳ್ಳಿ ಅವರು ಸಮಸ್ಯೆಗಳನ್ನು ಪ್ರತ್ಯಕ್ಷ ಕಂಡು ಬಂದಿದ್ದಾರೆ. ಮಾತ್ರವಲ್ಲ ಕೂಡಲೇ ಗಿರಿಜನ ಶ್ರೇಯೋಭಿವೃದ್ಧಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದರು. ಆದರೆ ಗ್ರಾಮಸಭೆ ಆಗಿ ತಿಂಗಳು ಕೆಲವು ಕಳೆದರೂ ಗಿರಿಜನ ಶ್ರೇಯೋಭಿವೃದ್ಧಿ ಅಧಿಕಾರಿಗಳು ಬರಲೇ ಇಲ್ಲ.

ಮನೆ ನಾದುರಸ್ತಿ
ನಾರಾಯಣ, ತುಕ್ರ, ಶಂಕರಿ ಮೊದಲಾದವರ ಮನೆಗಳಿದ್ದು ಅವು ನಾದುರಸ್ತಿಯಲ್ಲಿವೆ. ತಾಂತ್ರಿಕವಾಗಿ ಇವರಿಗೆ ಹೊಸಮನೆ ಕೊಡುವಂತಿಲ್ಲ. ಆದರೆ ದುರಸ್ತಿ ಮಾಡಲು ಇವರಿಗೆ ಹಣಕಾಸಿನ ಸಮಸ್ಯೆಯಿದೆ. ಹೇಳಿ ಕೊಳ್ಳುವಂತಹ ದೊಡ್ಡ ಆದಾಯ ಇಲ್ಲ. ಮನೆಯ ಮಾಡಿನ ಹೆಂಚು ಈಗಲೋ ಆಗಲೋ ಬೀಳುವಂತೆ ಕಾಣುತ್ತಿದೆ. ಯಾರ ಬಳಿ ಹೇಳಿದರೂ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ, ಭರವಸೆ ಮಾತ್ರ ದೊರೆಯುವುದು ಎನ್ನುತ್ತಾರೆ ಸ್ಥಳೀಯರು.

Advertisement

ನಿರ್ಲಕ್ಷ್ಯ ಖಂಡನೀಯ
ಪ. ಪಂಗಡದ ಸಮಸ್ಯೆಗೆ ಜಿ. ಪಂ. ಸದಸ್ಯರು, ಪಂಚಾಯತ್‌ ಅಧ್ಯಕ್ಷರು, ಸದಸ್ಯರು ಒಟ್ಟಾದರೂ ಐದು ತಿಂಗಳವರೆಗೂ ಅಧಿಕಾರಿಗಳನ್ನು ಕರೆಸಲು ಕಷ್ಟವಾಗುತ್ತದೆ. ಏಕೆಂದರೆ ಈಗ ಚುನಾವಣೆ ಇಲ್ಲ. ಚುನಾವಣೆ ಸಂದರ್ಭವಾದರೆ ಇನ್ನೆರಡು ವರ್ಷಗಳ ಅನಂತರ ಕಾಮಗಾರಿ ಆಗುವುದಾದರೂ ಕೂಡಲೆ ಮತದಾರರನ್ನು ಓಲೈಸಲಾದರೂ ಅಧಿಕಾರಿಗಳನ್ನು ಕರೆದುಕೊಂಡು ಬಂದು ಆಶ್ವಾಸನೆ ನೀಡುತ್ತಿದ್ದರು. ಇಂತಹ ನಿರ್ಲಕ್ಷ್ಯ ಸರಿಯಲ್ಲ.
-ಆನಂದ್‌ ಕಾರೂರು ಹೊಸಂಗಡಿ, ದಲಿತ ಮುಖಂಡರು ಉಡುಪಿ ಜಿಲ್ಲೆ

ಅಧಿಕಾರಿಗಳ ಗಮನಕ್ಕೆ
ಕೊರಗ ಕಾಲನಿಯವರ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಪಂಚಾಯತ್‌ ಮೂಲಕ ರಸ್ತೆ ಮಾಡಲು ಅನುದಾನದ ಕೊರತೆಯಿದೆ. ಮನೆ ಮಂಜೂರಿಗೆ ತಾಂತ್ರಿಕ ತೊಡಕಿದೆ. ಐಟಿಡಿಪಿ ಇಲಾಖೆ ಮೂಲಕ ರಸ್ತೆ ಮಾಡಿಸಲು ಅಧಿಕಾರಿಗಳನ್ನು ಸಂಪರ್ಕಿಸಲಾಗುವುದು. ನೀರಿನ ಸಮಸ್ಯೆಯಿಲ್ಲ.
-ಭಾಸ್ಕರ ಶೆಟ್ಟಿ, ಪಂಚಾಯತ್‌ ಸದಸ್ಯರು

ನೀರಿಲ್ಲ
ಹ್ಯಾಂಡ್‌ಪಂಪಿನ ಕೊಳವೆಬಾವಿ ಇದ್ದರೂ ಕಿಲುಬು ವಾಸನೆಯಿಂದ ನೀರು ಕುಡಿಯಲಾಗದಂತಿದೆ. ಅರ್ಧ ಕಿ.ಮೀ. ದೂರದ ಸರಕಾರಿ ಬಾವಿಯಿಂದ ನೀರು ಹೊತ್ತು ತರಬೇಕು. ಸುರೇಶ್‌, ಶಾರದಾ, ಕುಷ್ಟ ಅವರ ಮನೆಗಳು ತೀರಾ ನಾದುರಸ್ತಿಯಲ್ಲಿವೆ. ಶೀಟ್‌ ಹಾಕಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇಲ್ಲದಿದ್ದರೆ ಗೋಡೆಯೂ ಬೀಳುತ್ತದೆ ಎನ್ನುತ್ತಾರೆ ಇಲ್ಲಿನ ನಿವಾಸಿ ನಾರಾಯಣ.

 ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next