ಮಹಾನಗರ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಂಗಳೂರಿನ ಮೀನುಗಾರಿಕೆ ದಕ್ಕೆಯ ಮೂರನೇ ಹಂತದ ವಿಸ್ತರಣೆಗೆ ಅನುಮೋದನೆ ದೊರಕಿ ಕಾಮಗಾರಿ ಆರಂಭವಾಗುವ ಆಶಾಭಾವ ಮೂಡಿರುವಾಗಲೇ, ನಗರದ ತೋಟಬೆಂಗ್ರೆಯ ಬದಿಯಲ್ಲಿ ನಾಡದೋಣಿಗಳ ತಂಗುವಿಕೆಗೆ ಪ್ರತ್ಯೇಕ ಜೆಟ್ಟಿ ನಿರ್ಮಾಣ ಯೋಜನೆಯೂ ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ.
ಮೀನುಗಾರಿಕೆ ಇಲಾಖೆಯ ನಬಾರ್ಡ್ 24ರ ಯೋಜನೆಯಡಿಯಲ್ಲಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. 3.37 ಕೋ.ರೂ.ಗಳ ಈ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತು, ತಾಂತ್ರಿಕ ಮಂಜೂರಾತಿಯನ್ನೂ ಪಡೆಯಲಾಗಿದೆ. ಮಳೆ ಮುಗಿದ ಬಳಿಕ ಇಲ್ಲಿನ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ.
ಬೆಂಗ್ರೆ ಭಾಗದಲ್ಲಿ ನಡೆಯುತ್ತಿರುವ ಮೂರನೇ ಮೀನುಗಾರಿಕೆ ಜೆಟ್ಟಿಯ ಪಕ್ಕಕ್ಕೆ ಹೊಂದಿಕೊಂಡ ಭಾಗದಲ್ಲಿ ಹೊಸ ನಾಡದೋಣಿಗಳ ನಿಲುಗಡೆಯ ಜೆಟ್ಟಿಗೆ ಉದ್ದೇಶಿಸಲಾಗಿದೆ. ನಾಡದೋಣಿಗಳ ನಿಲುಗಡೆಗೆ ಮಂಗಳೂರು ಬಂದರು ವ್ಯಾಪ್ತಿಯಲ್ಲಿ ಸೂಕ್ತ ವ್ಯವಸ್ಥೆಗಳು ಇಲ್ಲ ಎಂಬ ನೆಲೆಯಲ್ಲಿ ಬೆಂಗ್ರೆ ಪರಿಸರದ ನಾಡದೋಣಿ ಮೀನುಗಾರರು ಹಲವು ವರ್ಷಗಳಿಂದ ಮುಖಂಡರ ನೇತೃತ್ವದಲ್ಲಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿದ್ದರು. ಈಗ ನಾಡದೋಣಿಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳಬಹುದಾದ ಹೊಸ ಜೆಟ್ಟಿ ನಿರ್ಮಾಣಕ್ಕೆ ಇಲಾಖೆ ಮುಂದಾಗಿರುವುದು ಮೀನುಗಾರರಲ್ಲಿ ಹರ್ಷ ತಂದಿದೆ. ಸದ್ಯ ಬೆಂಗ್ರೆ ವ್ಯಾಪ್ತಿಯಲ್ಲಿ ಸುಮಾರು 150 ರಷ್ಟು ನಾಡದೋಣಿಗಳಿವೆ. ಮಳೆಗಾಲದಲ್ಲಿ ಮೀನುಗಾರಿಕೆಗೆ ರಜೆ ಇರುವ ಸಮಯದಲ್ಲಿ ರಾಣಿ ಬಲೆ ಹಾಕಿ ಮೀನುಗಾರಿಕೆ ನಡೆಸಲಾಗುತ್ತದೆ. ಸಮುದ್ರದಲ್ಲಿ ಸುಮಾರು 20 ಕಿ.ಮೀ. ನ ಒಳಗಡೆಯಲ್ಲಿ ನಾಡದೋಣಿ ಮೀನುಗಾರಿಕೆ ನಡೆಯುತ್ತದೆ. ಉಳಿದ ಸಮಯದಲ್ಲಿ ಗಿಲ್‌ನೆಟ್ ಮೂಲಕ ಮೀನುಗಾರಿಕೆ ನಡೆಸುತ್ತಾರೆ. ಜತೆಗೆ ನದಿಯಲ್ಲಿಯೂ ಮೀನುಗಾರಿಕೆ ನಡೆಸುತ್ತಾರೆ. ಇಂತಹ ದೋಣಿಗಳು ನಿಲುಗಡೆ ಮಾಡಲು ಮಂಗಳೂರಿನಲ್ಲಿ ಪರದಾಡುವ ಪರಿಸ್ಥಿತಿಯಿದೆ. ಬೆಂಗ್ರೆ ಫೆರಿ ಜೆಟ್ಟಿಯ ಬಳಿಯಲ್ಲಿ ನಾಡದೋಣಿಗಳನ್ನು ನಿಲ್ಲಿಸಲಾಗುತ್ತದೆ. ಈ ದೋಣಿಗಳನ್ನು ನೀರಿನಿಂದ ಮೇಲೆ ಎಳೆದು ಹಗ್ಗದ ಸಹಾಯದಿಂದ ಕಟ್ಟಿ ಹಾಕಲಾಗುತ್ತದೆ.
800 ಮೀ. ಅಗಲದ ಹೊಸ ಜೆಟ್ಟಿ :
ಸುಮಾರು 80 ಮೀ. ಅಗಲ, 100 ಮೀ. ಉದ್ದದಲ್ಲಿ ನೂತನ ಜೆಟ್ಟಿ ನಿರ್ಮಾಣವಾಗಲಿದೆ. ನಾಡದೋಣಿಗಳನ್ನು ಸುಲಲಿತ ರೀತಿಯಲ್ಲಿ ನಿಲುಗಡೆಗೆ ಇಲ್ಲಿ ಅವಕಾಶವಿರಲಿದೆ. ಗೋಲ ಮಾದರಿಯಲ್ಲಿ ಡ್ರೆಜ್ಜಿಂಗ್ ಮಾಡಿ ಇಲ್ಲಿ ನಾಡದೋಣಿ ನಿಲುಗಡೆಗೆ ಆದ್ಯತೆ ನೀಡಲಾಗುತ್ತದೆ. ಸುಮಾರು 150ರಷ್ಟು ನಾಡದೋಣಿಗಳಿಗೆ ಇಲ್ಲಿ ನಿಲುಗಡೆಗೆ ಅವಕಾಶ ಸಿಗುವ ನಿರೀಕ್ಷೆಯಿದೆ.
ತೋಟಬೆಂಗ್ರೆಯಲ್ಲಿ ನಾಡದೋಣಿಗಳಿಗೆ ಬೇಕಾಗುವ ತಂಗುದಾಣ ನಿರ್ಮಾಣ ಯೋಜನೆಗೆ ಈಗಾಗಲೇ ಮಂಜೂರಾತಿ ದೊರಕಿದೆ. ಮಳೆಗಾಲ ಮುಗಿದ ಬಳಿಕ ಇದರ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಈ ಮೂಲಕ ನಾಡದೋಣಿಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ದೊರೆಯಲಿದೆ.
–ಸುಜನ್ ಚಂದ್ರ ರಾವ್, ಸಹಾಯಕ ಕಾ.ನಿ.ಎಂಜಿನಿಯರ್, ಬಂದರು ಹಾಗೂ ಮೀನುಗಾರಿಕಾ ಇಲಾಖೆ–ಮಂಗಳೂರು.
-ದಿನೇಶ್ ಇರಾ