ತನ ಮರಳು ನೀತಿಗೆ ಸಚಿವ ಸಂಪುಟದ ಒಪ್ಪಿಗೆ ದೊರೆತು ಒಂದು ತಿಂಗಳು ಕಳೆದರೂ ಜಾರಿಯಾಗದ ಕಾರಣ ಅತಂತ್ರ ಪರಿಸ್ಥಿತಿ ಮುಂದುವರಿದಿದೆ. ಮರಳು ಸಾಗಾಟ ನೀತಿಯಲ್ಲಿ ಹಲವು ಬದಲಾವಣೆ ಹಾಗೂ ಸರಳತೆಯ ಕುರಿತು ನವೆಂಬರ್ 8ರಂದು ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಇದರ ಪ್ರಕಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳ, ತೊರೆ, ಹೊಳೆ, ನದಿಗಳಿಂದ ತೆಗೆದ ಮರಳನ್ನು ಸ್ಥಳೀಯವಾಗಿ ಬಳಸಲು ಅವಕಾಶ ನೀಡಲಾಗಿತ್ತು. ತಾಲೂಕನ್ನು ಒಂದು ಘಟಕವಾಗಿ ಗುರುತಿಸಿ, ದಿನಕ್ಕೆ ಗರಿಷ್ಠ ಮೂರು ಟನ್ ಮರಳು ಸಾಗಾಟಕ್ಕೆ ಅವಕಾಶ, ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ತಾಲೂಕು ಸಮಿತಿಯಿಂದ ಮರಳು ನಿಕ್ಷೇಪ ಗುರುತಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಇದನ್ನು ಅಂತಿಮಗೊಳಿಸುವುದು. ಪ್ರತಿ ಲೋಡ್ ಮರಳಿಗೆ 300 ರೂ. ಸ್ಥಳೀಯ ಗ್ರಾ.ಪಂ.ಗೆ ರಾಜಸ್ವ ಪಾವತಿ ಇತ್ಯಾದಿಗಳನ್ನು ನಿಯಮಗಳಲ್ಲಿ ಅಳವಡಿಸಲಾಗಿದೆ. ಇದರಿಂದ ಸ್ಥಳೀಯ ಗ್ರಾ.ಪಂ.ಗೂ ಒಂದಿಷ್ಟು ಆದಾಯ ಬರಲಿದೆ ಹಾಗೂ ಅಕ್ರಮ ಸಾಗಾಟಕ್ಕೆ ಕಡಿವಾಣ ಬೀಳಲಿದೆ. ಈಗಾಗಲೇ ಹಲವು ಕಡೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಪಂಚಾಯತ್‌ಗಳಿಗೆ ಒಂದಿಷ್ಟು ಬಲ ನೀಡುವ ನಿರೀಕ್ಷೆ ಹೊಂದಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರವ ನೇತ್ರಾವತಿ, ಮೃತ್ಯುಂಜಯ, ನೆರಿಯ, ಅಣಿಯೂರು, ಕಪಿಲ ಮೊದಲಾದವುಗಳ ನದಿ, ಹೊಳೆ ಹಾಗೂ ಇವುಗಳ ಸಂಪರ್ಕ ಹಳ್ಳಗಳಲ್ಲಿ ಭಾರೀ ಮಟ್ಟದ ಮರಳು ಸಂಗ್ರಹವಾಗಿದೆ. ಇದನ್ನು ಶೀಘ್ರ ತೆರವುಗೊಳಿಸುವುದು ಅಗತ್ಯವಿದೆ. ಈ ನದಿ, ಹೊಳೆ, ಹಳ್ಳಗಳಿಗಿರುವ ಹಲವಾರು ಕಿಂಡಿ ಅಣೆಕಟ್ಟು, ಸಾಂಪ್ರದಾಯಿಕ ಕಟ್ಟಗಳನ್ನು ಕಟ್ಟುವ ಪ್ರದೇಶದಲ್ಲಿ ಮರಳ ದಿಬ್ಬಗಳು ಸಂಗ್ರಹವಾಗಿರುವರಿಂದ ಈ ಪ್ರದೇಶದಲ್ಲಿ ನೀರು ಸಂಗ್ರಹಿಸಲು ಸಮಸ್ಯೆ ಎದುರಾಗಿದೆ. ನದಿ ಪ್ರದೇಶಗಳಲ್ಲಿ ಮರಳು ತುಂಬಿರುವುದು ಅಂತರ್ಜಲ ಮಟ್ಟಕ್ಕೂ ಮಾರಕವಾಗಲಿದೆ. ಮರಳು ತುಂಬಿರುವ ಕಾರಣ ನದಿ ಪಾತ್ರಗಳು ಕೆಲವು ಅಡಿ ಎತ್ತರದಲ್ಲಿ ನೀರು ಮೇಲ್ಭಾಗದಲ್ಲಿ ಹರಿಯುವುದರಿಂದ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಮಳೆ ಸುರಿದರೂ ಈ ನದಿಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗುತ್ತದೆ.
ಸಂಪುಟ ಒಪ್ಪಿಗೆ ನೀಡಿರುವ ಮರಳು ನೀತಿ ಶೀಘ್ರ ಜಾರಿಯಾಗಿ ಮರಳು ತೆರವು ನಡೆಯಬೇಕಿದೆ. ಈಗ ಮನೆ ಸಹಿತ ವಿವಿಧ ರೀತಿಯ ನಿರ್ಮಾಣ ಕಾಮಗಾರಿಗಳೂ ವೇಗ ಪಡೆದಿರುವುದರಿಂದ ಮರಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಮಾತ್ರವಲ್ಲದೆ ಈಗ ಮಳೆ ಕಡಿಮೆಯಾಗಿದ್ದು ನದಿಗಳ ನೀರಿನ ಮಟ್ಟ ಇಳಿಕೆಯಾಗಿದೆ. ಇದರಿಂದ ಮರಳು ತೆರವು ಸುಲಭವಾಗಲಿದೆ. ಕೃಷಿಕರಿಗೂ ಸಾಕಷ್ಟು ಅನುಕೂಲ ದೊರೆಯಲಿದೆ. ಎಂಎಲ್ಸಿ ಚುನಾವಣೆ ನೀತಿ ಸಂಹಿತೆಯ ಕಾರಣ ಕಳೆದ ವಾರದವರೆಗೆ ಇತ್ತಾದರೂ ಈಗ ಅವೆಲ್ಲವೂ ಮುಗಿದಿದೆ. ಮರಳು ನೀತಿ ಜಾರಿಯಾಗಿ ಸುಲಭವಾಗಿ ಜನರಿಗೆ ಮರಳು ದೊರೆಯದಿದ್ದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ಸಾಗುವ ಸಾಧ್ಯತೆ ಇದೆ. ಜನರು ದುಬಾರಿ ಬೆಲೆ ತೆತ್ತು ಖರೀದಿಸುವುದು ಅನಿವಾರ್ಯವಾಗುತ್ತದೆ. ಇದರಿಂದ ಜನರಿಗೂ ಸರಕಾರಕ್ಕೂ ನಷ್ಟವಾಗಲಿದೆ. ಆದುದರಿಂದ ಸರಕಾರ ಕೂಡಲೇ ಈ ಕುರಿತು ಗಮನ ಹರಿಸುವುದು ತುರ್ತು ಅಗತ್ಯವಾಗಿದೆ.
–ಸಂ