ಮೊಂಬಾಸಾ: “ಕೈಗಾರಿಕಾ ಮೀನುಗಾರಿಕೆ ಸಾಧನ’ಗಳನ್ನು ಮೀನುಗಾರಿಕೆಗೆ ಬಳಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಹಿಂದೂ ಮಹಾಸಾಗರದ ವ್ಯಾಪ್ತಿಗೆ ಬರುವ ದೇಶಗಳು ಸೋಮವಾರ ಒಪ್ಪಿಕೊಂಡಿವೆ.
ಇದರಿಂದ ಹಿಂದೂ ಮಹಾಸಾಗರದ ಕರಾವಳಿ ಪ್ರದೇಶದಾದ್ಯಂತ ಜೀವನೋಪಾಯಕ್ಕಾಗಿ ಸಣ್ಣ ಪ್ರಮಾಣದ ಮೀನುಗಾರಿಕೆ ವಿಧಾನಗಳನ್ನು ಅವಲಂಬಿಸಿರುವ ಸಣ್ಣ ಮೀನುಗಾರರಿಗೆ ದೊಡ್ಡ ಗೆಲುವಾಗಿದೆ. ಈ ಹಿಂದೆ ಕೈಗಾರಿಕಾ ಸಾಧನಗಳ ಬಳಕೆಯಿಂದ ಮೀನುಗಳು ಭಾರಿ ಪ್ರಮಾಣದಲ್ಲಿ ಬರಿದಾಗುತ್ತಿತ್ತು.
ಕೀನ್ಯಾದ ಮೊಂಬಾಸಾದಲ್ಲಿ ನಡೆಯುತ್ತಿರುವ ಮೂರು ದಿನಗಳ 30 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಹಿಂದೂ ಮಹಾಸಾಗರ ಟ್ಯೂನಾ ಆಯೋಗದ ಸಭೆಯಲ್ಲಿ ಈ ನಿರ್ಧಾರ ತಾಳಲಾಯಿತು. ಇದರಿಂದ ಸಹಜವಾಗಿ ಭಾರತದ ಕರಾವಳಿ ರಾಜ್ಯಗಳ ಸಣ್ಣ ಮೀನುಗಾರರಿಗೆ ಲಾಭವಾಗಲಿದೆ.
ಕೀನ್ಯಾ ಮೀನಾಗಾರಿಕೆ ಸಚಿವರು ಮಾಡಿದ ಪ್ರಸ್ತಾಪಕ್ಕೆ ಇಂಡೋನೇಷ್ಯಾ ಸೇರಿದಂತೆ 11 ದೇಶಗಳು ಬೆಂಬಲ ಸೂಚಿಸಿದವು. ಆದರೆ ವಿಶ್ವಸಂಸ್ಥೆಯ ನಿಯಮಗಳ ಪ್ರಕಾರ, ಈ ಪ್ರಸ್ತಾಪಕ್ಕೆ ಆಕ್ಷೇಪಣೆ ಸಲ್ಲಿಸಲು ಐರೋಪ್ಯ ಒಕ್ಕೂಟಕ್ಕೆ 120 ದಿನಗಳ ಸಮಯಾವಕಾಶವಿದೆ.
ಇನ್ನೊಂದೆಡೆ, ಹಿಂದೂ ಮಹಾಸಾಗರದಲ್ಲಿ ವಾರ್ಷಿಕವಾಗಿ ಎರಡು ಲಕ್ಷ ಮೆಟ್ರಿಕ್ ಟನ್ ಮೀನುಗಳನ್ನು ಹಿಡಿಯಲಾಗುತ್ತದೆ.