Advertisement

ಹೊಸ ನಿಯಮ: ಉದ್ದಿಮೆದಾರರಿಗೆ ಸಂಕಷ್ಟ

12:23 PM May 23, 2019 | Naveen |

ಮಹಾನಗರ: ಮಹಾನಗರ ಪಾಲಿಕೆಯು ಉದ್ದಿಮೆ ಪರವಾನಿಗೆ ನವೀಕರಣ ಕುರಿತಂತೆ ಹೊಸ ನಿಯಮ ರೂಪಿಸಿದ್ದು, ಇದರಿಂದಾಗಿ ಈಗ ನಗರದ ಬಹುತೇಕ ಉದ್ದಿಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಈ ಹಿಂದೆ ಉದ್ದಿಮೆ ಪರವಾನಿಗೆ ಯನ್ನು ನವೀಕರಿಸಲು, ವ್ಯಾಪಾರಸ್ಥರು ಮನಪಾದ ಆರೋಗ್ಯ ವಿಭಾಗಕ್ಕೆ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಅರ್ಜಿ ಸಲ್ಲಿಸಬೇಕು. ಆ ಬಳಿಕದ ಎಲ್ಲ ಪ್ರಕ್ರಿಯೆಗಳು ಮುಗಿದು 8-10 ದಿನಗಳ ಒಳಗಾಗಿ ಉದ್ದಿಮೆದಾರರ ಕೈಗೆ ಪರವಾನಿಗೆ ದೊರೆಯುತ್ತಿತ್ತು. ಆದರೆ ಈಗ ಪಾಲಿಕೆ ತಂದಿರುವ ಬದಲಾವಣೆಯಿಂದ ಅರ್ಜಿ ಸಲ್ಲಿಸಿ ಮೂರು ತಿಂಗಳುಗಳು ಕಳೆದರೂ ಪರವಾನಿಗೆ ನವೀಕರಣವಾಗದೆ ಸಮಸ್ಯೆಗೆ ಸಿಲುಕಿದ್ದಾರೆ.

ಹೊಸ ನಿಯಮದ ಕಿರಿಕಿರಿ
ಹೊಸ ನಿಯಮಕ್ಕೂ ಮೊದಲು ಉದ್ದಿಮೆ ಪರವಾನಿಗೆ ನವೀಕರಣ ಮಾಡಲು ಉದ್ದಿಮೆದಾರರು ಅರ್ಜಿ ತುಂಬಿ ಆರೋಗ್ಯ ಇಲಾಖೆಗೆ ಸಲ್ಲಿಸ ಬೇಕಿತ್ತು. ಹಳೆಯ ಪರವಾನಿಗೆ ನೀಡಿ ದರೆ ಅಧಿಕಾರಿಗಳು ಅದಕ್ಕೆ ಚಲನ್‌ ನೀಡುತ್ತಿದ್ದರು.

ಉಳಿದಂತೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಸುಮಾರು 10 ದಿನಗಳೊಳಗಾಗಿ ಉದ್ದಿಮೆ ಪರವಾನಿಗೆ ಉದ್ದಿಮೆದಾರರ ಕೈ ಸೇರುತ್ತಿತ್ತು. ಆದರೆ ಈ ಬಾರಿ ನವೀಕರಣಕ್ಕೆ ಕಟ್ಟಡದ ಖಾತಾ, ತೆರಿಗೆ ರಶೀದಿ ನೀಡಬೇಕು ಎಂಬ ಶರತ್ತು ಹಾಕಲಾಗಿತ್ತು. ಆದರೆ ಖಾತಾ ನೀಡಲು ಸಾಧ್ಯವಾಗದ ಕಾರಣ ಆ ಶರತ್ತನ್ನು ಬಿಟ್ಟುಬಿಡಲಾಯಿತು. ಆ ಬಳಿಕ ಅರ್ಜಿ ಸಲ್ಲಿಸಿದ ಉದ್ದಿಮೆಯ ಬಗ್ಗೆ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಬಳಿಕವೇ ಚಲನ್‌ ನೀಡುವುದು ಎಂದು ನಿರ್ಧರಿಸಲಾಯಿತು. ಆದರೆ ಆರೋಗ್ಯ ವಿಭಾಗದಲ್ಲಿ ಇರುವುದೇ ಆರು ಮಂದಿ ಸಿಬಂದಿ. ಮಂಗಳೂರಿನ 35 ಸಾವಿರಕ್ಕೂ ಅಧಿಕ ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದರೆ ಇರುವ ಆರು ಮಂದಿ ಎಲ್ಲಿಗೆ ಹೋಗಿ ಪರಿಶೀಲನೆ ನಡೆಸುತ್ತಾರೆ. ಇದರಿಂದ ತಡವಾಗುತ್ತಿದೆ. ಪಾಲಿಕೆಯ ಈ ನಿಯಮ ಈಗ ಉದ್ದಿಮೆದಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

6 ಸಿಬಂದಿ ಮಾತ್ರ !
ಉದ್ದಿಮೆದಾರರು ದಾಖಲೆಯಲ್ಲಿ ತಪ್ಪು ಮಾಹಿತಿ ನೀಡುತ್ತಾರೆ ಎಂಬ ಕಾರಣಕ್ಕಾಗಿ ಹೊಸ ನಿರ್ಧಾರ ಮಾಡಲಾಗಿದೆ. ಆದರೆ ಆರೋಗ್ಯ ಇಲಾಖೆಯಲ್ಲಿರುವ ಆರು ಮಂದಿ ಸಿಬಂದಿ ಸುಮಾರು 35 ಸಾವಿರಕ್ಕೂ ಅಧಿಕ ಉದ್ದಿಮೆದಾರರ ಸ್ಥಳ ಪರಿಶೀಲನೆ ಮಾಡಿ, ದಾಖಲೆ ನೀಡುವುದು ಯಾವಾಗ ಎಂಬುದೇ ಪ್ರಶ್ನೆ. ಪಾಲಿಕೆಯ ಈ ಅವ್ಯವಸ್ಥೆಯಿಂದಾಗಿ ನಗರ ವ್ಯಾಪ್ತಿಯ ಉದ್ದಿಮೆದಾರರು ಪಾಲಿಕೆಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇವರಲ್ಲಿ ಕೆಲವರಿಗೆ ಪರವಾನಿಗೆ ತಡವಾಗಿ ಕೈ ಸೇರಿದ್ದು, ಇನ್ನೂ ಸುಮಾರು 15 ಸಾವಿರಕ್ಕೂ ಅಧಿಕ ಉದ್ದಿಮೆದಾರರು ಪರವಾನಿಗೆಗಾಗಿ ಅಲೆದಾಡುತ್ತಿದ್ದಾರೆ.

2 ತಿಂಗಳಾದರೂ ಪರವಾನಿಗೆ ಸಿಕ್ಕಿಲ್ಲ

ಉದ್ದಿಮೆ ಪರವಾನಿಗೆಗೆ ಮಾ. 19ರಂದು ಅರ್ಜಿ ಸಲ್ಲಿಸಿದ್ದೆ. ಚುನಾವಣೆ, ಅಧಿಕಾರಿಗಳ ಸ್ಥಳ ಪರಿಶೀಲನೆ ಎಂಬಿತ್ಯಾದಿ ಕಾರಣಗಳಿಂದ ಈವರೆಗೆ ನನಗೆ ಉದ್ದಿಮೆ ಪರವಾನಿಗೆ ಲಭಿಸಿಲ್ಲ. ಇದಕ್ಕಾಗಿ ಎಷ್ಟೋ ಬಾರಿ ಪಾಲಿಕೆಗೆ ಅಲೆದಾಡಿದ್ದೇನೆ. ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ.
ಪ್ರಶಾಂತ್‌, ಉದ್ದಿಮೆದಾರ
Advertisement

ಸಮಸ್ಯೆ ನಿವಾರಿಸಲು ಹೊಸ ಕ್ರಮ
ಉದ್ದಿಮೆ ಪರವಾನಿಗೆ ನೀಡುವ ವೇಳೆ ಈ ಹಿಂದೆ ಎದುರಾಗಿದ್ದ ಕೆಲವು ಸಮಸ್ಯೆ ನಿವಾರಿಸಲು ಹೊಸ ಕ್ರಮ ಕೈಗೊಳ್ಳಲಾಗಿದೆ. ಕೆಲವರು ಪರವಾನಿಗೆ ನೀಡುವ ವೇಳೆ ತಪ್ಪು ಮಾಹಿತಿ ನೀಡುತ್ತಿದ್ದರು. ಪಾರದರ್ಶಕ ನಿಯಮ ತರಲು ಈ ರೀತಿ ಮಾಡಲಾಗಿದೆ.
– ನಾರಾಯಣಪ್ಪ,
ಪ್ರಭಾರ ಆಯುಕ್ತರು, ಮನಪಾ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next